Advertisement
ಪ್ರತಿ ಬಾರಿಯಂತೆ ಈ ಬಾರಿಯೂ ರಾಜ್ಯದ ಚುನಾವಣ ಪ್ರಚಾರ ಕಣದಲ್ಲಿ ಜಾತಿ, ಭ್ರಷ್ಟಾಚಾರ, ಅಭಿವೃದ್ಧಿ ಅಂಶಗಳು ಪ್ರಸ್ತಾಪಿತವಾಗುತ್ತಿದ್ದವು. ಆದರೆ, ಈಗ ಇದರ ಜತೆಗೆ ವಿಪಕ್ಷಗಳಿಗೆ ಕನ್ನಡ-ಕನ್ನಡಿಗ ಅಸ್ಮಿತೆಯ ಅಸ್ತ್ರವೊಂದನ್ನು ಎತ್ತಿಕೊಂಡಿದೆ. ನಂದಿನಿ ಮೇಲಿನ “ದಹಿ’ಯಿಂದ ಹಿಡಿದು, ಮಹಾರಾಷ್ಟ್ರ ಗಡಿಯಲ್ಲಿ ಆರೋಗ್ಯ ವಿಮೆ, ಸಿಆರ್‌ಪಿಎಫ್ ಪರೀಕ್ಷೆಯಲ್ಲಿ ಕನ್ನಡ ಅವಗಣನೆ ಮತ್ತು ಪ್ರಮುಖವಾಗಿ ನಂದಿನಿ ಮೇಲೆ ಗುಜರಾತ್‌ನ ಅಮುಲ್ ಸವಾರಿ ಅಂಶಗಳು ಸೇರಿಕೊಂಡಿವೆ. ವಿಪಕ್ಷಗಳು, ಕನ್ನಡಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳು, ಪ್ರಚಾರ ಕಣ, ಮಾಧ್ಯಮಗಳಲ್ಲಿ ಈ ಬಗ್ಗೆ ಆಡಳಿತ ಪಕ್ಷವನ್ನು ದೊಡ್ಡ ಮಟ್ಟದಲ್ಲಿಯೇ ಸಿಲುಕಿಸುತ್ತಿವೆ. ಆಡಳಿತ ಪಕ್ಷ ತಡವಾಗಿ ಎಚ್ಚೆತ್ತುಕೊಂಡು ಪ್ರತಿಬಾಣ ಹೂಡಲಾರಂಭಿಸಿದೆ. ಅಮುಲ್ ವಿಚಾರದಲ್ಲಿ 2017ರಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೇ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಬಿಜೆಪಿ ಮರು ಬಾಣ ಹೂಡಿದ್ದು, ಕನ್ನಡ ಅಸ್ಮಿತೆ ಉಳಿಸಲು ತಾನು ಬದ್ಧ ಎಂದು ಹೇಳಿಕೊಂಡಿದೆ.
ಮೊದಲಿಗೆ ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ “ದಹಿ’ ಎಂದು ನಮೂದಿಸಿದ ವಿಚಾರ ವಿವಾದದ ಕಿಡಿಹೊತ್ತಿಸಿತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುವುದರ ಜತೆಗೆ ವಿಪಕ್ಷಗಳಿಗೂ ಇದು ಅಸ್ತ್ರವಾಯಿತು. ಹಿಂದಿ ಹೇರಿಕೆಯ ಮತ್ತೂಂದು ರೂಪ ಎಂದು ದಾಳಿ ನಡೆಸಿದವು. ಕನ್ನಡಪರ ಸಂಘಟನೆಗಳು, ವಿಪಕ್ಷಗಳ ಒತ್ತಡಕ್ಕೆ ಮಣಿದು ಭಾರತೀಯ ಆರೋಗ್ಯ ಗುಣಮಟ್ಟ ಪ್ರಾಧಿಕಾರ “ದಹಿ’ ಪದವನ್ನು ವಾಪಸ್ ತೆಗೆದುಕೊಂಡಿತು. ಇದಾದ ಬಳಿಕ, ಕರ್ನಾಟಕದ ಮಾರುಕಟ್ಟೆಗೆ ಗುಜರಾತ್ ಮೂಲದ ಅಮುಲ್ ಹಾಲಿನ ಪ್ರವೇಶದ ಸುದ್ದಿ ಬಂದಿತು. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ಅವಕಾಶ ಕಲ್ಪಿಸಲಾಯಿತು. ಇದರಿಂದ ಸ್ಥಳೀಯ ನಂದಿನಿ ಬ್ರ್ಯಾಂಡ್‌ಗೆ ಹೊಡೆತ ಬೀಳಲಿದೆ ಎಂಬುದು ವಿಪಕ್ಷಗಳು ಮತ್ತು ಕನ್ನಡ ಸಂಘಟನೆಗಳ ಆರೋಪ. ಈಗಾಗಲೇ ನೆರೆರಾಜ್ಯಗಳಿಂದ ಖಾಸಗಿ ಸಂಸ್ಥೆಗಳ ಹಾಲು ಮಾರಾಟವಾಗುತ್ತಿದ್ದರೂ, ಬೃಹತ್ ಸಹಕಾರಿ ಸಂಸ್ಥೆಯೊಂದರ ಹಾಲು ರಾಜ್ಯದ ಕೆಎಂಎಫ್ಗೆ ಅಪಾಯಕಾರಿ ಎನ್ನುವುದು ವಿಪಕ್ಷಗಳ ಆರೋಪ. ನೇರವಾಗಿ ರೈತರಿಗೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆೆ. ಆದರೆ 2017ರ ಜೂನ್ ತಿಂಗಳಲ್ಲಿಯೇ ಅಮುಲ್ ಹಾಲು ಮಾರಾಟದ ಪ್ರವೇಶಕ್ಕೆ ನಿರ್ಧಾರ ಆಗಿದೆ. ಆಗ ಸಿದ್ದರಾಮಯ್ಯ ಸರಕಾರ ಇತ್ತು ಎಂದು ಬಿಜೆಪಿ ಪ್ರತಿಪಾದಿಸಿದೆ.
Related Articles
Advertisement
ಗಡಿ ಭಾಗದ ಹಳ್ಳಿಗಳಿಗೆ ಮಹಾರಾಷ್ಟ್ರ ಸರಕಾರ ತನ್ನ ಅನುದಾನದಲ್ಲಿ ಆರೋಗ್ಯ ಯೋಜನೆ ಜಾರಿ ಗೊಳಿಸಿತು. ಇದನ್ನು ಕೈಗೆತ್ತಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆಡಳಿತ ಪಕ್ಷ ಬಿಜೆಪಿ ಮೇಲೆ ಮುಗಿಬಿದ್ದರು. “ನಮ್ಮ ರಾಜ್ಯದ ಹಳ್ಳಿಗಳಿಗೆ ಅಲ್ಲಿನ ಸರಕಾರದ ಅನುದಾನ ಯಾಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಗಟ್ಟಿ ದನಿಯಲ್ಲಿ ಮಾತನಾಡಿದರೂ, ಎಲ್ಲರಿಗೂ ಕೇಳುವಂತಿರಲಿಲ್ಲ.
ಮರಾಠಿಯಲ್ಲೇ ಮತಯಾಚನೆ!?“ವಿಚಿತ್ರವೆಂದರೆ, ಹೀಗೆ ಕನ್ನಡಪರ ದನಿ ಎತ್ತುತ್ತಿರುವ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಅದೇ ಕನ್ನಡದ ಗಡಿಗಳಲ್ಲಿ ಮತಯಾಚನೆ ಮಾಡುವುದು ಮರಾಠಿಯಲ್ಲಿ. ಹಾಗಂತ, ಮಹಾರಾಷ್ಟ್ರ ಸರಕಾರದ ನಡೆಯನ್ನು ಸಮರ್ಥನೆ ಮಾಡುಕೊಳ್ಳುವಂತಿಲ್ಲ. ಬದಲಿಗೆ ಕನ್ನಡ ಅಸ್ತಿತ್ವಕ್ಕೆ ಅದು ಕೂಡ ಧಕ್ಕೆಯಾಗುವ ಒಂದು ಅಂಶ ಅಲ್ಲವೇ? ಎಂದು ವಿವಿಧ ಪಕ್ಷಗಳ ರಾಜಕೀಯ ನಾಯಕರು ಪ್ರಶ್ನಿಸುತ್ತಾರೆ. ಈ ಮಧ್ಯೆ ಸಿಆರ್‌ಪಿಎಫ್ ನೇಮಕಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ. ಇದರಿಂದ ಕನ್ನಡಿಗರಿಗೆ ಅನ್ಯಾಯ ಆಗಲಿದೆ ಎಂಬ ಆರೋಪ ಕೇಳಿಬರುತ್ತಿದೆ. -ವಿಜಯಕುಮಾರ ಚಂದರಗಿ