ಧಾರವಾಡ : ಹು-ಧಾ ಪಶ್ಚಿಮ- 74 ವಿಧಾನಸಭಾ ಮತಕ್ಷೇತ್ರ ಹಾಗೂ ಧಾರವಾಡ ಗ್ರಾಮೀಣ – 71 ರ ವಿಧಾನಸಭಾ ಮತಕ್ಷೇತ್ರಕ್ಕೆ ಹಾಲಿ ಶಾಸಕರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಾಥ್‌ನೊಂದಿಗೆ ಬೃಹತ್ ರ್‍ಯಾಲಿ ಕೈಗೊಂಡು, ಮಂಗಳವಾರ ನಾಮಪತ್ರ ಸಲ್ಲಿಸಿದರು.
ಇಲ್ಲಿಯ ಸುಭಾಷ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಿಂದ ತೆರೆದ ವಾಹನದ ಮೂಲಕ ಅದ್ಧೂರಿ ಮೆರವಣಿಗೆ ಮಾಡಿದ ಶಾಸಕ ಅರವಿಂದ ಬೆಲ್ಲದ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿವಿಧ ಮುಖಂಡರು ಸಾಥ್ ನೀಡಿದರು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅರವಿಂದ ಬೆಲ್ಲದ ಅವರಿಗೆ ಜಯಘೋಷ ಹಾಕಿದರು. ಬೃಹತ್ ಮೆರವಣಿಗೆಯು ಸುಭಾಷ ರಸ್ತೆಯ ಮೂಲಕ ಹಾದು ಧಾರವಾಡದ ಮಹಾನಗರ ಪಾಲಿಕೆ ಕಚೇರಿಗೆ ಬಂದು ತಲುಪಿತು. ಅಲ್ಲಿಂದ ನೇರವಾಗಿ ಶಾಸಕ ಅರವಿಂದ ಬೆಲ್ಲದ ಅವರು, ತಮ್ಮ ಪತ್ನಿ, ಪುತ್ರ ಹಾಗೂ ಸೂಚಕರೊಂದಿಗೆ ಚುನಾವಣಾಧಿಕಾರಿಯವರ ಕಚೇರಿಗೆ ತೆರಳಿ ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ, ವಕೀಲ ಅರುಣ ಜೋಶಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಸೇರಿದಂತೆ ಹಲವರು ಇದ್ದರು.
ದೇಸಾಯಿ ನಾಮಪತ್ರ : ಧಾರವಾಡ ಗ್ರಾಮೀಣ- 71ರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಮೃತ ದೇಸಾಯಿ ಅವರು ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ಮಂಗಳವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ನಗರದ ಶಿವಾಜಿ ವೃತ್ತದ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದ ಅಮೃತ ದೇಸಾಯಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸಾಥ್ ನೀಡಿದರು. ಧಾರವಾಡದ ಪ್ರಮುಖ ರಸ್ತೆಗಳು ಅಕ್ಷರಶ: ಕೇಸರಿಮಯವಾಗಿದ್ದವು. ಅಮೃತ ದೇಸಾಯಿ ಅವರೊಂದಿಗೆ ತೆರೆದ ವಾಹನದಲ್ಲಿ ಅವರ ಪತ್ನಿ ಪ್ರಿಯಾ ದೇಸಾಯಿ, ಅಶೋಕ ದೇಸಾಯಿ, ಗುರುನಾಥಗೌಡ ಗೌಡರ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.
Related Articles
ಶಿವಾಜಿ ವೃತ್ತದಲ್ಲಿ ತೆರೆದ ವಾಹನದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಎಲ್ಲ ಬಗೆಯ ಜನರಿಗೆ ಮೀಸಲಾತಿ ಹಾಗೂ ಸೌಕರ್ಯಗಳನ್ನು ಕೊಟ್ಟಿರುವುದು ಬಿಜೆಪಿ ಸರ್ಕಾರ. ಬಿಜೆಪಿ ಮತ್ತೆ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮುಖಂಡರಾದ ಸಂಗನಗೌಡ ರಾಮನಗೌಡರ, ಗುರುನಾಥಗೌಡ ಗೌಡರ, ಅಶೋಕ ದೇಸಾಯಿ, ಪಾಲಿಕೆ ಸದಸ್ಯ ನಿತೀನ್ ಇಂಡಿ, ಸವಿತಾ ಅಮರಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಬಿಜೆಪಿ ಹು-ಧಾ ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಈರೇಶ ಅಂಟಗೇರಿ ಅವರಿಗೆ ಟಿಕೇಟ್ ಸಿಕ್ಕದೇ ಹೋಗಿದ್ದಕ್ಕೆ ಮುನಿಸು ಮುಂದುವರೆದಿದೆ. ಕೇಂದ್ರ ಸಚಿವ ಜೋಶಿ ಅವರ ಬಗಲೈ ಬಂಟನಂತಿರುವ ಈರೇಶ ಅವರು ಮಂಗಳವಾರ ಅರವಿಂದ ಬೆಲ್ಲದ್ ಅವರೊಂದಿಗೆ ಕಾಣಿಸಿಕೊಳ್ಳಲಿಲ್ಲ. ತಮಗೆ ಟಿಕೇಟ್ ಸಿಕ್ಕದೇ ಹೋಗಿದ್ದಕ್ಕೆ ತಾವು ಚುನಾವಣೆ ರಾಜಕೀಯದಿಂದ ದೂರ ಇರುವುದಾಗಿ ಈರೇಶ ಅಂಚಟಗೇರಿ ಹೇಳಿದ್ದಾರೆ.