Advertisement

Karnataka poll 2023; ಧಾರವಾಡ-ಜಿಗಿದು ಬಂದವರಿಗೆ ನೆಗೆದು ಟಿಕೆಟ್‌ ಕೊಟ್ಟ ಬಿಜೆಪಿ

05:29 PM Apr 15, 2023 | Team Udayavani |

ಧಾರವಾಡ: ಬಿಜೆಪಿಯ ಭದ್ರಕೋಟೆ ಧಾರವಾಡ ಜಿಲ್ಲೆಯಲ್ಲಿ ಟಿಕೆಟ್‌ ಹಂಚಿಕೆ ಕೇವಲ ಕಾಂಗ್ರೆಸ್‌ ಪಕ್ಷವನ್ನು ಮಾತ್ರವಲ್ಲ ಬಿಜೆಪಿ ಪಕ್ಷದಲ್ಲೂ ಭಾರಿ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಇರುಸು ಮುರುಸಾಗುವಂತೆ ಮಾಡಿಟ್ಟಿದೆ. ಹತ್ತಿಪ್ಪತ್ತು ವರ್ಷಗಳಿಂದ ಬಿಜೆಪಿ ಪಕ್ಷ ಕಟ್ಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಕಾರ್ಯಕರ್ತರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಎಲ್ಲಿಂದಲೋ ಬಂದವರು, ಹಣ ಇದ್ದವರನ್ನೇ ಬಿಜೆಪಿ ಕೂಡ ತನ್ನ ಪಕ್ಷದತ್ತ ಸೆಳೆಯುತ್ತಿದ್ದು, ಸೈದ್ಧಾಂತಿಕ ವೈರುವೈರುಧ್ಯಗಳಿದ್ದರೂ ಅನುಕೂಲಸಿಂಧು ನೀತಿ ಅನುಸರಿಸುತ್ತಿದೆ ಎಂಬ ಮಾತುಗಳು ಧಾರವಾಡ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ಜನಸಂಘದ ಹಿನ್ನೆಲೆ ಮತ್ತು ಮೂಲದಿಂದಲೂ ಬಿಜೆಪಿಯ ಕಟ್ಟಾಳುಗಳಾಗಿ ದುಡಿದವರನ್ನು ಪಕ್ಷ ನಿಕೃಷ್ಟವಾಗಿ ಕಾಣುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದ್ದು, ಇದಕ್ಕೆ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಹೈಕಮಾಂಡ್‌ನ‌ಲ್ಲಿ ಪ್ರಭಾವ ಇರುವವರೇ ಪ್ರಮುಖ ಕಾರಣ ಎನ್ನುವ ಆಕ್ರೋಶ ಕೂಡ ಸ್ಫೋಟಗೊಂಡಿದ್ದು, ಅನೇಕರು ಬಹಿರಂಗವಾಗಿ ಮಾಧ್ಯಮಗಳೆದುರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

ಛಬ್ಬಿ ಕುಕ್ಕರ್‌ ಸೌಂಡ್‌: ಕಾಂಗ್ರೆಸ್‌ನ ಕಟ್ಟಾಳು ನಾಗರಾಜ ಛಬ್ಬಿ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಇದೀಗ ಕಲಘಟಗಿ ಕ್ಷೇತ್ರದಲ್ಲಿ ಇದ್ದಕ್ಕಿದ್ದಂತೆ ಛಬ್ಬಿ ಅವರನ್ನು ಕರೆ ತಂದು ಪಕ್ಷದ ಟಿಕೆಟ್‌ ನೀಡಿದ್ದನ್ನು ಈ ಕ್ಷೇತ್ರದಲ್ಲಿನ ನಿಷ್ಠಾವಂತ ಕಾರ್ಯಕರ್ತರು ತೀವ್ರ ಖಂಡಿಸಿದ್ದು, ಒಳಗೊಳಗೆ ಪಕ್ಷದ ಮುಖಂಡರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಭಾರಿ ಪ್ರಚಾರ ಮಾಡಿ, ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಸಂಚರಿಸುತ್ತಿದ್ದ ಮಾಜಿ ಮೇಯರ್‌ ಶಿವು ಹಿರೇಮಠ ಕೂಡ ತಮಗೆ ಟಿಕೆಟ್‌ ಸಿಕ್ಕದೇ ಹೋಗಿದ್ದರಿಂದ ತೀವ್ರ ಬೇಸರಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಈ ಕುರಿತು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ಶಿವು ಹಿರೇಮಠ, ಪಕ್ಷದಲ್ಲಿ ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ತಮ್ಮ ಬೆಂಬಲಿಗರ ಮುಂದೆ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿಗರ ಮುನಿಸು, ಸಂಕಟ, ಮೌನ: ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಅಮೃತ ದೇಸಾಯಿ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ತವನಪ್ಪ ಅಷ್ಟಗಿ ಮುನಿಸಿಕೊಂಡು ಬಿಜೆಪಿಗೆ ಈಗಾಗಲೇ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಅಷ್ಟೇಯಲ್ಲ ಬಿಜೆಪಿ ನನ್ನನ್ನು ಸಿಎಂ ಮಾಡಿದರೂ ಇನ್ನು ಅವರೊಂದಿಗೆ ನಾನು ಹೋಗಲ್ಲ ಎಂಬ ಮಾತನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಕುಂದಗೋಳದಲ್ಲಿ ಎಂ.ಆರ್‌.ಪಾಟೀಲ್‌ ಅವರಿಗೆ ಟಿಕೆಟ್‌ ನೀಡಿದ್ದಕ್ಕಾಗಿ ಚಿಕ್ಕನಗೌಡರ ಕೂಡ ತೀವ್ರ ಮುನಿಸಿಕೊಂಡು ಕಾಂಗ್ರೆಸ್‌ ಪಕ್ಷ ಸೇರುವ ವಿಚಾರದಲ್ಲಿದ್ದಾರೆ. ಪಕ್ಷದ ಹಿರಿಯರು ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ಇನ್ನು ಘೋಷಣೆಯಾಗದೇ ಇರುವುದು ಈಗಾಗಲೇ ಅವರ ಬೆಂಬಲಿಗರಲ್ಲಿ ತೀವ್ರ ನಿರಾಸೆಯನ್ನುಂಟು ಮಾಡಿದೆ.

Advertisement

ಎಲ್ಲಿಂದಲೋ ಬಂದವರು: ಅದರಲ್ಲೂ ಬಿಜೆಪಿಯಲ್ಲಿ ಸದ್ಯಕ್ಕೆ ಟಿಕೆಟ್‌ ನೀಡಿರುವ ಅರವಿಂದ ಬೆಲ್ಲದ, ಅಮೃತ ದೇಸಾಯಿ, ನಾಗರಾಜ್‌ ಛಬ್ಬಿ ಸೇರಿದಂತೆ ಯಾರೊಬ್ಬರೂ ಕೂಡ ಮೂಲ ಬಿಜೆಪಿಗರು ಅಲ್ಲವೇ ಅಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಬೆಲ್ಲದ ಕುಟುಂಬ ಮೊದಲು ಸಂಸ್ಥಾ ಕಾಂಗ್ರೆಸ್‌ ನಲ್ಲಿ ಗುರುತಿಸಿಕೊಂಡಿತ್ತು. ಅಮೃತ ದೇಸಾಯಿ ಕುಟುಂಬ ಜನತಾದಳ, ನಾಗರಾಜ ಛಬ್ಬಿ ಕಾಂಗ್ರೆಸ್‌ ಪಕ್ಷ, ಮುನೇನಕೊಪ್ಪ ಕೂಡ ಜನತಾ ಪರಿವಾರದ
ಭಾಗವಾಗಿದ್ದವರು. ಹೀಗಾಗಿ ಬಿಜೆಪಿಯ ಮೂಲ ನೆಲೆಯಲ್ಲಿನ ಕಾರ್ಯಕರ್ತರ ಪೈಕಿ ಯಾರೊಬ್ಬರಿಗೂ ಟಿಕೆಟ್‌ ನೀಡುವ ಧೈರ್ಯವನ್ನು ಪಕ್ಷ ಮಾಡುತ್ತಲೇ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೊರಗಿನವರಿಗೆ ಮಣೆ
ಪಕ್ಷ, ಸಿದ್ಧಾಂತದ ವಿಚಾರ ಬಂದಾಗ ಬಿಜೆಪಿ ಯಾವಾಗಲೂ ಒಂದು ಕೈ ಮೇಲೆನ್ನುವ ಮಾತಿದೆ. ಅದರಲ್ಲೂ ಬಿಜೆಪಿಯ ಭದ್ರಕೋಟೆ ಧಾರವಾಡ ಜಿಲ್ಲೆ. ಇಲ್ಲಿಂದಲೇ ಉತ್ತರ ಕರ್ನಾಟಕದತ್ತ ಬಿಜೆಪಿ ತನ್ನ ಕವಲುಗಳನ್ನು ಬೆಳೆಸಿಕೊಂಡಿತ್ತು. ಇದೀಗ ಜಿಲ್ಲಾ ಬಿಜೆಪಿಯಲ್ಲಿನ ಮೂಲ ಕಾರ್ಯಕರ್ತರು ಹೊರಗಿನಿಂದ ಜಿಗಿದು ಬಂದವರಿಗೆ ರಾತ್ರೋ ರಾತ್ರಿ ನೆಗೆದು ಟಿಕೆಟ್‌ ಕೊಡುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಅರವಿಂದ ಬೆಲ್ಲದ ವಿರುದ್ಧ ಅಂಚಟಗೇರಿ ಬೇಸರ
ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಈರೇಶ ಅಂಚಟಗೇರಿ ಅವರು ಕೂಡ ತಮಗೆ ಈ ಬಾರಿಯೂ ಅವಕಾಶ ಸಿಕ್ಕದೇ ಹೋಗಿದ್ದಕ್ಕೆ ತೀವ್ರ ಬೇಸರಗೊಂಡಿದ್ದಾರೆ. ಇಲ್ಲಿಯವರೆಗೂ ಬೆಲ್ಲದ ಕುಟುಂಬವೇ ಈ ಕ್ಷೇತ್ರವನ್ನು ಆಳಿಕೊಂಡು ಬಂದಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಅದೂ ಅಲ್ಲದೇ ಚಂದ್ರಕಾಂತ ಬೆಲ್ಲದ ಅವರು ಕೂಡ ಮೂಲತಃ ಬಿಜೆಪಿಗರ ಅಲ್ಲವೇ ಅಲ್ಲ. ಹೀಗಿರುವಾಗ ಈಗಲಾದರೂ ಮೂಲ ಬಿಜೆಪಿ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್‌ ನೀಡಬೇಕಾಗಿತ್ತು. ನನಗೆ ಈ ವಿಚಾರ ತೀವ್ರ ಬೇಸರ ತಂದಿದ್ದು, ನಾನು ಚುನಾವಣೆಯ ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

*ಡಾ|ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next