Advertisement
ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯ ಅಂಕಿ ಸಂಖ್ಯೆಗಳ ಫಲಿತಾಂಶ ಕೇಂದ್ರ ಸರಕಾರದ ಮೇಲಾಗಲಿ; ರಾಜ್ಯ ಸರಕಾರದ ಮೇಲಾಗಲಿ ನೇರವಾಗಿ ಯಾವ ಪರಿಣಾಮವೂ ಬೀರದು. ಆದರೂ ಇಂದಿನ-ಮುಂದಿನ ಭವಿಷ್ಯದ ದೃಷ್ಟಿಯಿಂದ ಪಕ್ಷಗಳು ಮಿನಿ ಸಮರ ಎಂದು ಭಾವಿಸಿಕೊಂಡು ಕಣಕ್ಕೆ ಇಳಿದಿವೆ. ಕರ್ನಾಟಕವನ್ನೇ ಸೀಮಿತವಾಗಿಟ್ಟುಕೊಂಡು ವಿಶ್ಲೇಷಿಸುವುದಾದರೆ; ಈ ಉಪ ಚುನಾವಣೆಯ ಫಲಿತಾಂಶ ಆಡಳಿತರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಪವಿತ್ರ ಅಥವಾ ಅಪವಿತ್ರ ಮೈತ್ರಿಯ ಅಗ್ನಿ ಪರೀಕ್ಷೆಯೂ ಹೌದು.
Related Articles
Advertisement
ಅಧಿಕಾರರೂಢ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಗೌರವದ ಪ್ರಶ್ನೆ; ಅದಕ್ಕಿಂತ ಮುಖ್ಯವಾಗಿ ಅಧಿಕಾರ ಉಳಿಸಿಕೊಳ್ಳುವ ಅಭಿಲಾಷೆಯೂ ಹೌದು. ಹಾಗೂ ಹೀಗೂ ಮನಸ್ಸಿಲ್ಲದ ಮನಸ್ಸಿನಲ್ಲಿ ಸೀಟು ಹಂಚಿಕೊಳ್ಳುವ ನೆಂಟಸ್ಥಿಕೆ ಏರ್ಪಾಡು ಮೂಡಿಬಂದಿದೆ. ಆದರೂ ಒಂದತೂ ಸತ್ಯ. ಈ ಸೀಟು ಹಂಚಿಕೊಳ್ಳುವ ನೆಂಟಸ್ಥಿಕೆಯಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನುವುದರಲ್ಲಿ ಎರಡು ಮಾತಿಲ್ಲ. 2014ರ ಲೋಕಸಭಾ ಚುನಾವಣಾ ಫಲಿತಾಂಶದ ಅಂಕಿಸಂಖ್ಯೆ ನೋಡಿದಾಗ ಶಿವಮೊಗ್ಗ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕಾಗಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷ; ಜೆಡಿಎಸ್ ಮೂರನೇ ಸ್ಥಾನದಲ್ಲಿ ತೃಪ್ತಿ ಪಟ್ಟಿತ್ತು. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಈ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ನಿಜಕ್ಕೂ ಹಿನ್ನಡೆಯೆಂದೇ ವಿಶ್ಲೇಷಿಸಬೇಕಾಗಿದೆ. ಇದನ್ನೆ ಇಂದು ಬಿಜೆಪಿ ಚುನಾವಣಾ ತಂತ್ರಗಾರಿಕೆಯಾಗಿ ಬಳಸುತ್ತಿದೆ. ಇದು ಕಾರ್ಯಕರ್ತರಲ್ಲೂ ಸಾಕಷ್ಟು ಗೊಂದಲ ಹುಟ್ಟಿಸಿದೆ.
ಇದೇ ಸನ್ನಿವೇಶ ಬಳ್ಳಾರಿಯಲ್ಲೂ ಎದುರಿಸಬೇಕಾದ ಪರಿಸ್ಥಿತಿ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಒಳ ರಾಜಕೀಯ ಬಣದಲ್ಲಿ ಸಮರ್ಥ ಅಭ್ಯರ್ಥಿ ಬಳ್ಳಾರಿಯಿಂದಲೇ ಸಿಗದಿರುವುದು ಇನ್ನೊಂದು ಹಿನ್ನಡೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಅದೇ ರೀತಿಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕೂಡಾ ನಿಜವಾದ ರಾಜಕೀಯ ಹಣಾಹಣಿ ಇರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಈಗ ಜೆಡಿಎಸ್ ಅಭ್ಯರ್ಥಿ ಅಲ್ಲಿ ಸ್ಪರ್ಧಾಳು. ಈ ಎರಡು ವಿರುದ್ಧ ಧ್ರುವಗಳು ಒಂದಾಗಿ ಕೂಡಿಕೊಂಡು ಮೂರನೇ ಶಕ್ತಿ ಅನ್ನಿಸಿಕೊಂಡ ಬಿಜೆಪಿಯನ್ನು ಎದುರಿಸಬೇಕಾದ ಪರಿಸ್ಥಿತಿ. ಇಲ್ಲಿ ಮೇಲ್ನೋಟಕ್ಕೆ ನಾಯಕರುಗಳಲ್ಲಿ ಅಷ್ಟೇನು ಭಿನ್ನಮತವಿಲ್ಲದಿರಬಹುದು, ಆದರೆ ತಳಮಟ್ಟದ ಕಾರ್ಯಕರ್ತರ ಬವಣೆ ಹೇಳತೀರದು. ಇದು ಯಾವ ರೀತಿ ಮತವಾಗಿ ಪರಿವರ್ತನೆಯಾಗುತ್ತದೆ ಅನ್ನುವುದರ ಮೇಲೆ ಬಿಜೆಪಿಯ ಸೋಲು ಗೆಲುವು ನಿಂತಿದೆ. ಆದರೆ ಬಿಜೆಪಿಗೆ ಇದು ಸುಲಭದಲ್ಲಿ ದಕ್ಕುವ ಸ್ಥಾನವಂತೂ ಖಂಡಿತ ಅಲ್ಲ. ಇಲ್ಲಿ ಪಕ್ಷಗಳ ಧೋರಣೆಗಿಂತ ಜಾತಿ ಲೆಕ್ಕಾಚಾರವೇ ಪ್ರಧಾನ ಪಾತ್ರ ವಹಿಸುತ್ತದೆ ಅನ್ನುವುದು ಈ ನೆಲದ ರಾಜಕೀಯ ಇತಿಹಾಸ ತಿಳಿಸುತ್ತದೆ. ರಾಮನಗರ ಕ್ಷೇತ್ರ ಜೆಡಿಎಸ್‌ನ ಪ್ರಬಲವಾದ ನೆಲ ಮಾತ್ರವಲ್ಲ ಗೆಲುವು ಶತಃಸಿದ್ಧ ಅನ್ನುವುದು ಜೆಡಿಎಸ್‌ನ ವಿಶ್ವಾಸ ಕೂಡಾ.
ಇದು ವಾಸ್ತವವೂ ಹೌದು. ರಾಮನಗರ ಕ್ಷೇತ್ರ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಗಿರಿಗೆ ಏರಿಸಿದ ಕ್ಷೇತ್ರವೂ ಹೌದು. ಅದೇ ರೀತಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ರೂಪಿಸಿದ ಕ್ಷೇತ್ರವೂ ಆಗಿರುವುದರಿಂದ ಜೊತೆಗೆ ಜಾತಿ ಲೆಕ್ಕಾಚಾರ ಕೂಡಾ ಪೂರಕವಾಗಿರುವ ಕಾರಣ ಮುಖ್ಯಮಂತ್ರಿಗಳ ಪತ್ನಿಯನ್ನು ಈ ಕ್ಷೇತ್ರ ಕೈಬಿಡುವುದಿಲ್ಲ ಎಂಬ ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ. ಅದೇ ಜಮಖಂಡಿಗೆ ಬಂದಾಗ ಇದು ಉತ್ತರ ಕರ್ನಾಟಕದ ಭಾಗವಾದ ಕಾರಣ ದೊಡ್ಡ ಮಟ್ಟಿನ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿದೆ.
ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೈಹಿಡಿದ ಕ್ಷೇತ್ರವಿದು. ಶಾಸಕರ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯಬೇಕಾದ ಅನಿವಾರ್ಯತೆ. ಅನುಕಂಪದ ಅಲೆ ನಮ್ಮ ಪರವಾಗಿದೆ ಅನ್ನುವ ಬಲವಾದ ನಂಬಿಕೆ ಕಾಂಗ್ರೆಸ್ ಪಕ್ಷದವರಿಗಿದೆ. ಆದರೆ ಬಿಜೆಪಿಯ ಲೆಕ್ಕಾಚಾರವೇ ಬೇರೆ. ಕಳೆದ ಬಾರಿ ತಾವು ಸೋತಿದ್ದು ಕೇವಲ ಹತ್ತಿರ 2 ಸಾವಿರ ಮತಗಳ ಅಂತರದಿಂದ ಮಾತ್ರವಲ್ಲ ತಮ್ಮ ಪಕ್ಷದ ಇನ್ನೊಬ್ಬ ಅಭ್ಯರ್ಥಿ ಭಿನ್ನಮತದಿಂದ ಸ್ಪರ್ಧಿಸಿದ ಕಾರಣ ಅವರು ಸರಿಸುಮಾರು 20 ಸಾವಿರ ಮತಗಳಿಸಿದ ಕಾರಣ ಸೋಲು ಕಾಣಬೇಕಾಯಿತು. ಆದರೆ ಈ ಬಾರಿ ಆ ಮತಗಳು ನಮ್ಮ ಪಾಲಿಗೆ ಒಲಿದು ಬಂದರೆ ಸುಲಭದ ಜಯ ನಮ್ಮದು ಎಂಬ ಲೆಕ್ಕಾಚಾರ ಬಿಜೆಪಿಗರದ್ದು. ಹಾಗಾಗಿ ಜಮಖಂಡಿ ಸಾಕಷ್ಟು ಕುತೂಹಲ ಮೂಡಿಸಿದ ಕ್ಷೇತ್ರವೂ ಹೌದು.
ಈಗ ಪ್ರಬುದ್ಧ ಮತದಾರರ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಈ ಎಲ್ಲ ಸೋಲು-ಗೆಲುವಿನ ಲೆಕ್ಕಾಚಾರಗಳು ಮುಂದಿನ 2019ರ ಮಹಾ ಸಮರಕ್ಕೆ ಮುನ್ನುಡಿ ಬರೆಯಬಹುದಾ ಎನ್ನುವುದು. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಬಾರಿಯ ಉಪ ಚುನಾವಣೆ ಅದರಲ್ಲೂ ಬಹುಮುಖ್ಯವಾಗಿ ಈ ಮೂರು ಲೋಕಸಭಾ ಉಪ ಚುಣಾವಣೆ ಫಲಿತಾಂಶ ಪ್ರಭಾವ ಬೀರುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಮಾತು ಸತ್ಯ, ಬಿಜೆಪಿಗೆ ಕನಿಷ್ಟ ಪಕ್ಷ ಮೂರರಲ್ಲಿ ಎರಡು ಲೋಕಸಭಾ ಸ್ಥಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬಹುಮುಖ್ಯವಾಗಿ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರ. ಇದು ಮುಂದಿನ ಲೋಕಸಭಾ ಸಮರಕ್ಕೆ ಇನ್ನೂ ಹೆಚ್ಚಿನ ನೈತಿಕ ಬಲ ಮತ್ತು ಆತ್ಮಸ್ಥೆçರ್ಯ ನೀಡುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಇದನ್ನು ಕಳೆದುಕೊಂಡರೆ ಬಿಜೆಪಿಯ ಸಂಘಟನಾ ಶಕ್ತಿಗೆ ಕರ್ನಾಟಕದಲ್ಲಿ ಮೊದಲ ಸೋಲು ಎಂಬ ಸಂದೇಶ ಬಿಜೆಪಿಯ ಹೈಕಮಾಂಡಿಗೆ ರವಾನೆಯಾಗುತ್ತದೆ. ಗಳಿಸಿಕೊಂಡ ಸ್ಥಾನ ಕಳೆದುಕೊಳ್ಳುವುದೆಂದರೆ ಯಡಿಯೂರಪ್ಪನವರ ಪಾಲಿಗೆ ಭಾರಿ ಹಿನ್ನೆಡೆಯೂ ಹೌದು, ಮಾತ್ರವಲ್ಲ ಕಾಂಗ್ರೇಸ್ ಜೆಡಿಎಸ್ ಪಕ್ಷಗಳಿಗೆ ಇನ್ನೊಂದು ಸಂದೇಶ ರವಾನೆಯಾಗುತ್ತದೆ ಅದೇನೆಂದರೆ “ಬಿಜೆಪಿ ಸೋಲಿಸಲು ಇರುವ ಏಕ ಮಾತ್ರ ಅಸ್ತ್ರವೆಂದರೆ ಮೈತ್ರಿಕೂಟ’.
ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ಸು ಕಂಡಿದೆ ಹಾಗಾಗಿ ರಾಷ್ಟ್ರಮಟ್ಟಕ್ಕೂ ವಿಸ್ತರಿಸಬಹುದೆಂಬ ಸಂದೇಶ ದೇವೇಗೌಡರಿಂದಲೇ ರವಾನೆಯಾಗುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಮಟ್ಟಿಗೆ ಈ ಫಲಿತಾಂಶ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನುವುದು ಇನ್ನೊಂದು ಸೋಜಿಗದ ವಿಶ್ಲೇಷಣೆ. ಒಂದು ವೇಳೆ ಕಾಂಗ್ರೆಸ್ ಸ್ಪರ್ಧಿಸಿದ ಬಳ್ಳಾರಿ, ಜಮಖಂಡಿ ಈ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡರೆ ಪಕ್ಷದ ಒಳಗೆ ಭಿನ್ನಮತ ಇನ್ನಷ್ಟು ತಾರಕಕ್ಕೇರಬಹುದು. ಬಹುಮುಖ್ಯವಾಗಿ ಕಾರ್ಯಕರ್ತರನ್ನು ಸಮಾಧಾನಪಡಿಸಲು ನಾಯಕರು ಹರಸಾಹಸ ಪಡಬೇಕಾದೀತು. ಈ ಮೈತ್ರಿ ಸರಕಾರವೇ ಕಾಂಗ್ರೆಸ್ ಪಾಲಿಗೆ ಮುಳುವಾಗಿದೆ ಎಂಬ ಸಂದೇಶ ಪಕ್ಷದ ಒಳಗೇನೆ ಚರ್ಚೆಯಾಗಬಹುದು.
ಆದರೆ ಜೆಡಿಎಸ್‌ನ ಮಟ್ಟಿಗೆ ಈ ಚುನಾವಣೆ ಫಲಿತಾಂಶ ಅಷ್ಟೇನು ಪ್ರಭಾವ ಬೀರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವುದೇ ಕೇವಲ 37 ಶಾಸಕರ ಬಲದಿಂದ ಅದು ಬಹುಮುಖ್ಯವಾಗಿ ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ; ಮಾತ್ರವಲ್ಲ; ಗೆಲುವಿನ ಲೆಕ್ಕಾಚಾರದಲ್ಲಿ ಒಂದು ಹೆಜ್ಜೆ ಮುಂದೆ ನಿಲ್ಲಬಹುದಾದ ಪಕ್ಷವೆಂದೇ ಇದಾಗಲೇ ಬಿಂಬಿತವಾಗಿದೆ. ಹಾಗಾಗಿ ಜೆಡಿಎಸ್‌ಗೆ ಗಳಿಸಿಕೊಳ್ಳುವುದು ಬಿಟ್ಟರೆ ಕಳೆದುಕೊಳ್ಳಲು ಏನೂ ಇಲ್ಲ.ಒಟ್ಟಿನಲ್ಲಿ ಈ ಬಾರಿಯ ಉಪ ಚುನಾವಣೆ ಯಾವುದೇ ಪ್ರಣಾಳಿಕೆ; ಘೋಷಣೆ; ತತ್ವ ಸಿದ್ಧಾಂತಗಳಿಲ್ಲದ; ಉಪಚುನಾವಣೆ ಅನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಇಲ್ಲಿ ನಡೆಯುವ ಪ್ರಮುಖ ಆಟವೆಂದರೆ ಜಾತಿ-ಹಣ, ವೈಯಕ್ತಿಕ ಟೀಕೆ, ಪ್ರಾದೇಶಿಕತೆಯ ವಿಚಾರ ಬಿಟ್ಟರೆ ರಾಷ್ಟ್ರೀಯ ವಿಚಾರಗಳಾಗಲಿ; ರಾಷ್ಟ್ರ ನಾಯಕರುಗಳ ಹೆಸರಾಗಲಿ ಅಷ್ಟೇನು ಪ್ರಚಾರಕ್ಕೆ ಬಾರದಿರುವುದೇ ಈ ಉಪ ಚುನಾವಣೆಯ ವೈಶಿಷ್ಟ್ಯ . ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ