ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಆಯ್ಕೆ ಕಡೇ ಕ್ಷಣದವರೆಗೆ ಕುತೂಹಲ ಮೂಡಿಸಿತ್ತು. ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಈಗ ಅವರ ಸಂಪುಟದಲ್ಲಿ ಯಾರಿರುತ್ತಾರೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಹೊಸ ಸಂಪುಟದಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ವಿಶೇಷ ಪ್ರಾಧಾನ್ಯತೆ ಸಿಗುವ ಸಾಧ್ಯತೆಗಳ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾವ ಶಾಸಕರಿಗೆ ಯಾವ ಕಾರಣಕ್ಕೆ ಮಂತ್ರಿಗಿರಿ ಸಿಗಬಹುದು, ಯಾರಿಗೆ ಯಾವ ಕಾರಣಕ್ಕೆ ಕೈ ತಪ್ಪಬಹುದು ಎಂಬೆಲ್ಲಾ ಪ್ಲಸ್ ಹಾಗೂ ಮೈನಸ್ ಲೆಕ್ಕಾಚಾರ ಜೋರಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಜಿಲ್ಲೆಯ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಈಗಾಗಲೇ ಸ್ಥಾನ ಸಿಕ್ಕಿದೆ. ಇನ್ನು ರಾಜ್ಯ ಸಚಿವ ಸಂಪುಟ ಸೇರುವ ಜಿಲ್ಲೆಯ ಅದೃಷ್ಟವಂತರು ಯಾರಾಗಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆದಿದೆ.
ಸಚಿವ ಸ್ಥಾನ ಗಿಟ್ಟಿಸಲು ಪ್ರಯತ್ನ: ಬಿಎಸ್ ವೈ ಸಂಪುಟದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಬಿ. ಶ್ರೀರಾಮುಲು ಅವರಿಗೆ ಜಿಲ್ಲೆಯ ಕೋಟಾದಾಡಿ ಸಚಿವ ಸ್ಥಾನ ಸಿಕ್ಕಿತ್ತು. ಇದನ್ನು ಹೊರತುಪಡಿಸಿ ಜಿಲ್ಲೆಯ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಬೊಮ್ಮಾಯಿ ಸಂಪುಟದಲ್ಲಾದರೂ ಜಿಲ್ಲೆಗೆ ಆದ್ಯತೆ ಸಿಗಬಹುದೇ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.
ರಾಜಕೀಯ ಅನುಭವ, ಸ್ಥಳೀಯರಿಗೆ ಆದ್ಯತೆ ನೀಡುವ ವಿಚಾರ ಬಂದಾಗ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ಕೋಟಾ, ಹಿಂದುಳಿದ ಗೊಲ್ಲ ಸಮುದಾಯಕ್ಕೆ ಆದ್ಯತೆ ನೀಡುವುದಾದರೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರೇಸ್‌ನಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಹಿನ್ನೆಲೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರ ಬೆಂಬಲಿಗರು ಹೊಸದುರ್ಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರಿ ಗೂಳಿಹಟ್ಟಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯಾದರೂ ಜಿಲ್ಲೆಯವರಿಗೆ ಸಚಿವ ಸ್ಥಾನ ದೊರೆಯಬಹುದೇ ಎಂಬುದು ಜನರ ಕಾತರ. ಇಲ್ಲಿಯವರೇ ಸಚಿವರಾದರೆ ಅಭಿವೃದ್ಧಿ ಕೆಲಸಗಳು ಹಾಗೂ ನೀರಾವರಿ ಯೋಜನೆಗಳಿಗೆ ಅನುಕೂಲವಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಶ್ರೀರಾಮುಲುಗೆ ದಕ್ಕುವುದೇ ಡಿಸಿಎಂ ಪಟ್ಟ
ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಬಿ. ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಇದರೊಟ್ಟಿಗೆ ವಾಲ್ಮೀಕಿ ಸಮುದಾಯಕ್ಕೆ ಶೇ. 7.5 ಮೀಸಲಾತಿ ನೀಡುವ ಭರವಸೆಯನ್ನೂ ಬಿಎಸ್ ವೈ ನೀಡಿದ್ದರು.
ಆದರೆ ಇದು ಭರವಸೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಈಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಬಹುತೇಕ ಗ್ಯಾರಂಟಿ ಎಂದೇ ವಿಶ್ಲೇಷಿಸಲಾಗತ್ತಿದೆ.