ರಾಜ್ಯ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯದತ್ತ ದಾಂಗುಡಿ ಇಡಲಾರಂಭಿಸಿದ್ದಾರೆ.
ಮಹಾ ಸಂಗಮಕ್ಕೆ 10 ಲಕ್ಷ ಮಂದಿ
ಬೆಂಗಳೂರು: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾ. 25ರಂದು ದಾವಣಗೆರೆಯಲ್ಲಿ ಸಮಾಪನಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಈ “ಮಹಾ ಸಂಗಮ’ದಲ್ಲಿ 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಮೂಲಕ ಈ ಹಿಂದೆ ದಾವಣಗೆರೆಯಲ್ಲಿ ನಡೆದ “ಸಿದ್ದರಾಮೋತ್ಸವ’ಕ್ಕೆ ಪ್ರತ್ತಸ್ತ್ರ ಪ್ರಯೋಗಿಸಲು ಬಿಜೆಪಿ ಸಜ್ಜಾಗಿದೆ. ಪ್ರಧಾನಿ ಮೋದಿ ರಾಜ್ಯದಲ್ಲಿ ನಡೆಸಿದ ಅತಿ ದೊಡ್ಡ ಸಾರ್ವಜನಿಕ ಸಭೆಯೂ ಇದಾಗಲಿದೆ. ಕಾರ್ಯಕ್ರಮದ ಅಬ್ಬರ ಹೆಚ್ಚಿಸಲು ಮಾ. 24ರಂದು ದಾವಣಗೆರೆ ಸುತ್ತಲಿನ 4 ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿದೆ. ಜತೆಗೆ ಸಣ್ಣ ಮಟ್ಟಿನ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
20ರಂದು ಬೆಳಗಾವಿಯಲ್ಲಿ ರಾಹುಲ್ ಯುವಕ್ರಾಂತಿ
ಬೆಳಗಾವಿ, ಮಾ. 16: ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಅನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾ. 20ರಂದು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಮಹಾಧಿವೇಶನಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿಯಲ್ಲಿ ಯುವ ಕ್ರಾಂತಿ ಮೊಳಗಿಸಲಿದ್ದಾರೆ.
ಪೂರ್ವಾಹ್ನ 11ಕ್ಕೆ ನಡೆಯುವ ರ್ಯಾಲಿಯಲ್ಲಿ ರಾಜ್ಯದ ಯುವ ಜನರಿಗೆ ವಿಶೇಷ ಸೌಲಭ್ಯ ಒದಗಿಸುವ “ಯುವ ಕ್ರಾಂತಿ’ ಎಂಬ ಗ್ಯಾರಂಟಿ ಕಾರ್ಡನ್ನು ಬಿಡುಗಡೆ ಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ನಿರುದ್ಯೋಗ ಯುವಸಮೂಹಕ್ಕೆ ಆರ್ಥಿಕ ನೆರವು ನೀಡುವ ಈ “ಭರವಸೆ’ಯನ್ನು ನೀಡುವುದರೊಂದಿಗೆ ಕಾಂಗ್ರೆಸ್ ಪ್ರಣಾಳಿಕೆಗೆ ನಾಲ್ಕನೇ ಗ್ಯಾರಂಟಿ ಸೇರ್ಪಡೆಯಾಗಲಿದೆ.