Advertisement
ಅಭಿವೃದ್ಧಿಯ ಕಡೆ ಗಮನಹರಿಸಬೇಕಾದ ಸಂದರ್ಭದಲ್ಲಿ ನಾಯಕತ್ವದ ಬಗ್ಗೆ ಪರ-ವಿರುದ್ಧ ಹೇಳಿಕೆ ನೀಡುತ್ತಿರುವುದು ರಾಷ್ಟ್ರೀಯ ಪಕ್ಷ ಬಿಜೆಪಿಗೂ ಮುಜುಗರ ತರುವಂಥದ್ದಾಗಿದೆ. ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಜೆಪಿ ವರಿಷ್ಠರು ಯಾವುದಾದರೂ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ.
Related Articles
Advertisement
ಬಿಜೆಪಿ ಸಚಿವರು ತಮ್ಮ ಇಲಾಖೆ ಮಟ್ಟದಲ್ಲಿ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ, ಎಲ್ಲ ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒತ್ತು ನೀಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ನಿರಂತರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಚುರುಕುಗೊಳಿಸಬೇಕಾಗಿದೆ.
ಇದರ ಜತೆಗೆ ರಾಜ್ಯಾದ್ಯಂತ ಮುಂಗಾರು ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳೂ ಆರಂಭವಾಗುತ್ತಿವೆ. ಈಗ ರೈತರಿಗೆ ಪ್ರಮುಖವಾಗಿ ಬೀಜ ಮತ್ತು ಗೊಬ್ಬರದ ಅಗತ್ಯ ಇದೆ. ಕೆಲವು ಕಡೆಗಳಲ್ಲಿ ಬೀಜ ಮತ್ತು ಗೊಬ್ಬರ ಸಿಗದಿರುವ ಮಾತುಗಳೂ ಕೇಳಿ ಬಂದಿದ್ದವು. ಸರಕಾರ ಇತ್ತ ಗಮನ ನೀಡಿ, ರೈತರಿಗೆ ಸಕಾಲಕ್ಕೆ ಬೀಜ ಮತ್ತು ಗೊಬ್ಬರವನ್ನು ಸಿಗುವಂತೆ ಮಾಡಬೇಕು. ಕೊರೊನಾ ಕಷ್ಟ ಕಾಲ ಮತ್ತು ಮುಂಗಾರು ಹಂಗಾಮಿನ ಆರಂಭದ ಹೊತ್ತಿನಲ್ಲಿ ಸರಕಾರದಲ್ಲಿ ಗೊಂದಲವಿದೆ ಎಂದು ತೋರಿಸಿಕೊಳ್ಳಬಾರದು. ಈಗಾಗಲೇ ಆತಂಕಕ್ಕೆ ಸಿಲುಕಿರುವ ಜನರಿಗೆ ಸರಕಾರ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು.ಹಾಗೆಯೇ ವಿಪಕ್ಷಗಳು ಇಂತಹ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಸರಕಾರದ ತಪ್ಪು ತಿದ್ದಿ ಸೂಕ್ತ ಸಲಹೆಗಳನ್ನು ನೀಡಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಹಾಗೂ ಅಭಿವೃದ್ಧಿಗೆ ಸಹಕಾರ ನೀಡಬೇಕಾಗಿದೆ. ಸರಕಾರದ ನೇತೃತ್ವ ವಹಿಸಿರುವ ಬಿಜೆಪಿಯು ಸಹ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲ ಬಗೆಹರಿಸಿಕೊಂಡು ಆಡಳಿತ ಯಂತ್ರಕ್ಕೆ ವೇಗ ನೀಡಿ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ.