ಕಳೆದ ಕೆಲವು ದಿನಗಳಿಂದ ದೇಶದ ವಿವಿಧೆಡೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಅಹಿತಕರ ಘಟನೆಗಳು ನಡೆಯುತ್ತಿರುವುದು ಆಘಾತಕಾರಿ. ರಾಮನವಮಿ, ಹನುಮ ಜಯಂತಿಯಂದು ರಾಜಸ್ಥಾನ, ಹಾಗೂ ದಿಲ್ಲಿಗಳಲ್ಲಿ ನಡೆದ ಘಟನೆಗಳಾಗಲಿ, ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ದೊಂಬಿಯಾಗಲಿ ಯಾವ ಕಾರಣಕ್ಕೂ ಕ್ಷಮ್ಯವಲ್ಲ.
ಚುನಾವಣೆ ನಡೆಯುವ ಸಂದರ್ಭದಲ್ಲಿ ಸಮಾಜವನ್ನು ಕದಡುವ ಘಟನೆಗಳು ನಡೆಯುವುದು ಅಥವಾ ನಡೆಸುವುದು ಸಾಮಾನ್ಯ ಎನಿಸಿ ಬಿಟ್ಟಿದೆ. ಆದರೆ ಇಂಥ ಘಟನೆಗಳು ಇಡೀ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾಜಿಕ ಸಂರಚನೆ ಮೇಲೆ ಇವುಗಳಿಂದಾಗುವ ಪರಿಣಾಮ ಅನೂಹ್ಯ. ಈ ಮೇಲಿನ ಘಟನೆಗಳಲ್ಲಿ ಒಂದು ಬಗೆಯ ಸಾಮ್ಯತೆಯನ್ನು ಕಾಣುವುದು ಮತ್ತಷ್ಟು ಆತಂಕಕಾರಿಯಾಗಿದೆ. ಎರಡು ಸಮುದಾಯಗಳ ನಡುವಿನ ಸಂಘರ್ಷದ ಜತೆಗೆ ಪೊಲೀಸ್ ವ್ಯವಸ್ಥೆಗೆ ಸಡ್ಡು ಹೊಡೆಯುವ ಪ್ರವೃತ್ತಿ ಇಲ್ಲಿ ಕಾಣಿಸುತ್ತಿದೆ. ಸಮಾಜವನ್ನು ರಕ್ಷಿಸ ಬೇಕಾದ ಪೊಲೀಸ್ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡು ವುದು ಈ ದೊಂಬಿಗಳ ಉದ್ದೇಶದಂತೆ ಕಾಣಿಸುತ್ತಿದೆ. ನಮ್ಮನ್ನು ಕಾಯಬೇ ಕಾದ ಪೊಲೀಸರು ದಿಕ್ಕೆಟ್ಟರೆ ಇಡೀ ಸಮಾಜದ ಬುನಾದಿಯೇ ಕುಸಿಯು ತ್ತದೆ. ಕಾಶ್ಮೀರದಲ್ಲಿ ಹಿಂದೆ ಇದೇ ಮಾದರಿಯಲ್ಲಿ ಪೊಲೀಸ್ ಹಾಗೂ ಸೈನ್ಯದ ನೈತಿಕತೆ ಕುಸಿಯುವಂತೆ ಅವರ ಮೇಲೆ ದಾಳಿ ನಡೆಸಲಾ ಗುತ್ತಿತ್ತು. ಪೊಲೀಸ್ ಠಾಣೆ ಮೇಲೆ ಹಲವು ನಕ್ಸಲ್ ದಾಳಿಗಳೂ ನಡೆದಿರು ವುದು ಇಲ್ಲಿ ಉಲ್ಲೇಖಾರ್ಹ. ಇಂಥ ದಾಳಿಯು ವ್ಯವಸ್ಥೆಯನ್ನು ಅರಾಜಕ ತೆಗೆ ತಳ್ಳಬಹುದು ಎನ್ನುವುದು ಈ ಘಟನೆಗಳಲ್ಲಿ ಬಿಚ್ಚಿಕೊಳ್ಳುತ್ತಿರುವ ಸತ್ಯ.
ಕಾಶ್ಮೀರ ಮಾದರಿಯಲ್ಲಿ ಕರ್ನಾಟಕದಲ್ಲಿ ಪೊಲೀಸ್ ವ್ಯವಸ್ಥೆ ಮೇಲೆ ದಾಳಿಯಾಗುವುದನ್ನು ತಪ್ಪಿಸಬೇಕಾದರೆ ಅಂಥ ಪುಂಡರನ್ನು ಯಾವುದೇ ಮುಲಾಜಿಲ್ಲದೆ ಮತ್ತು ಒತ್ತಡಕ್ಕೆ ಮಣಿಯದೆ ಕಾನೂನಿನ ಮುಂದೆ ನಿಲ್ಲಿಸಬೇಕಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಪೊಲೀಸ್ ವ್ಯವಸ್ಥೆ ಜತೆ ನಿಂತು ಅವರ ನೈತಿಕತೆಯನ್ನು ವೃದ್ಧಿಸಬೇಕಾದ ಜನಪ್ರತಿನಿಧಿಗಳು ಸಹ ಈ ವ್ಯವಸ್ಥೆ ಮೇಲೆ ಸಮಾಜಕ್ಕೆ ಅನುಮಾನ ಬರುವಂತೆ ಮಾತನಾಡುವುದು, ನಡೆದು ಕೊಳ್ಳುವುದು ದುರಂತ. ದೇಶದ ಪೊಲೀಸ್ ವ್ಯವಸ್ಥೆ ಸದೃಢವಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇಲ್ಲಿ ರಾಜಕೀಯ ಒತ್ತಡ ದಿಂದ ಯಾವುದೇ ಘಟನೆಯ ನಿಷ್ಪಕ್ಷ ತನಿಖೆ ಸಾಧ್ಯವಾಗುವುದಿಲ್ಲ.
ಹುಬ್ಬಳ್ಳಿ ಘಟನೆಯಲ್ಲೂ ಇದು ಕಾಣಿಸುತ್ತಿದೆ. ಪುಂಡರ ಗುಂಪೊಂದು ಠಾಣೆ ಮೇಲೆ ದಾಳಿ ನಡೆಸಿದ ಘಟನೆ ಬೆನ್ನಲ್ಲೇ ವಿವಿಧ ಪಕ್ಷಗಳ ನಾಯಕರು ತಮ್ಮ ಮೂಗಿನ ನೇರಕ್ಕೆ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಸಹಜವಾಗಿಯೇ ಪೊಲೀಸರು ಇನ್ನೊಮ್ಮೆ ದಿಕ್ಕೆಡುತ್ತಾರೆ. ಅತ್ತ ಸಮಾಜವಿದ್ರೋಹಿ ಗುಂಪು ಭೌತಿಕವಾಗಿ ಪೊಲೀಸ್ ವ್ಯವಸ್ಥೆಯನ್ನು ಜರ್ಝರಿತಗೊಳಿಸಿದರೆ ಇತ್ತ ರಾಜಕಾರಣಿಗಳು ಇಲ್ಲ ಸಲ್ಲದ ಹೇಳಿಕೆಗಳಿಂದ, ಒತ್ತಡಗಳಿಂದ ಪೊಲೀಸ್ ವ್ಯವಸ್ಥೆಯನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತಾರೆ. ಇವೆರಡೂ ಮಾರಕವೇ.
ಇದರಿಂದ ಯಾವುದೇ ಪ್ರಕರಣದ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗದೇ ಹೋಗಬಹುದು. ಬೆಂಗಳೂರಿನ ಚಂದ್ರು ಕೊಲೆ ಪ್ರಕರಣದಿಂದ ಹಿಡಿದು ಹುಬ್ಬಳ್ಳಿ ಘಟನೆಯ ತನಕವೂ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನಕ್ಕೆ ಕೈ ಹಾಕುವುದು ನಿಲ್ಲಲಿ. ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಪ್ರಾಮಾಣಿಕ ತನಿಖೆಗೆ ಅವಕಾಶ ಕೊಡಬೇಕಾದರೆ, ರಾಜಕಾರಣಿಗಳು ಮೌನಕ್ಕೆ ಶರಣಾಗುವುದು ಲೇಸು.