ಬೆಂಗಳೂರು: 16ನೇ ವರ್ಷದ ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗುರುವಾರ ನಡೆಯಿತು. ಉದಯವಾಣಿ ಕ್ರೀಡಾ ವರದಿಗಾರ ಹೇಮಂತ್ ಸಂಪಾಜೆ, ಬ್ಯಾಡ್ಮಿಂಟನ್ ಪಟು ಡೇನಿಯಲ್ ಎಸ್.ಫರೀದ್ ಸೇರಿ 15 ಮಂದಿಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ವಿತರಿಸಿದರು.
ಬೆಂಗಳೂರಿನ “ಯವನಿಕಾ’ ಸಭಾಂಗಣದಲ್ಲಿ ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ಕ್ರೀಡಾ ಸಾಮರ್ಥ್ಯಕ್ಕಿಂತ ಕ್ರೀಡಾ ಸ್ಫೂರ್ತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಒಬ್ಬ ಕ್ರಿಕೆಟ್ ಆಟಗಾರ ಔಟ್ ಆಗಿರುವುದು ಖಚಿತಪಟ್ಟರೆ ಅಂಪೈರ್ ತೀರ್ಪಿಗೆ ಕಾಯದೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಬೇಕು ಎಂದರು.
ಪ್ರಶಸ್ತಿ ಪುರಸ್ಕೃತರು: ಡೇನಿಯಲ್ ಎಸ್. ಫರೀದ್ (ಬ್ಯಾಡ್ಮಿಂಟನ್), ಅನಿಲ್ ಕುಮಾರ್ (ಬಾಸ್ಕೆಟ್‌ಬಾಲ್), ನವೀನ್ ಜಾನ್ (ಸೈಕ್ಲಿಂಗ್), ಪ್ರಧಾನ್ ಸೋಮಣ್ಣ (ಹಾಕಿ), ವಿ.ಅವಿನಾಶ್ (ಜ್ಯೂಡೊ), ಶರ್ಮದಾ ಬಾಲು (ಲಾನ್ ಟೆನಿಸ್), ಬಿ.ನಿಖೀಲ್ (ಶೂಟಿಂಗ್), ಎಂ.ಅವಿನಾಶ್ (ಸ್ವಿಮ್ಮಿಂಗ್), ವಿ.ಖುಷಿ (ಟೇಬಲ್ ಟೆನಿಸ್), ಸಂದೀಪ್ ಕಾಟೆ (ಕುಸ್ತಿ), ಸುಬ್ರಹ್ಮಣಿ (ಮಾಜಿ ಅಂ.ರಾ. ಹಾಕಿ ಆಟ ಗಾರ), ಬಾಲಾಜಿ ನರಸಿಂಹನ್ (ಮಾಜಿ ಅಂ.ರಾ. ಫುಟ್‌ಬಾಲ್ ಆಟಗಾರ), ಉದಯ ಕುಮಾರ್ (ಮಾಜಿ ಅಂ.ರಾ. ಟೆನಿಸ್ ಆಟಗಾರ್ತಿ), ಕಿರಣ್ ಕುಮಾರ್ ಕುಲಕರ್ಣಿ (ಕ್ರೀಡಾ ವೈದ್ಯಕೀಯ ತಜ್ಞ).
11 ಮಂದಿಗೆ ಲಕ್ಷ ರೂ
ಕೆಒಎ ಪ್ರಶಸ್ತಿ ಗೆದ್ದ 11 ಮಂದಿಗೆ 1 ಲಕ್ಷ ರೂ. ನಗದು ಮತ್ತು ಸ್ಮರಣಿಕೆ ನೀಡಲಾಗಿದೆ. ಮೂವರು ಮಾಜಿ ಆಟಗಾರರು ಮತ್ತು ಕ್ರೀಡಾ ವೈದ್ಯಕೀಯ ತಜ್ಞ ಕಿರಣ್ ಕುಮಾರ್ ಕುಲಕರ್ಣಿ ಅವರಿಗೆ 25 ಸಾವಿರ ರೂ. ಮತ್ತು ಸ್ಮರಣಿಕೆ ನೀಡಲಾಗಿದೆ.
ಇದು ನನಗೆ ಸಿಕ್ಕ ಮೊದಲ ಪ್ರಶಸ್ತಿ. ಹೀಗಾಗಿ ಸಹಜವಾಗಿ ಖುಷಿಯಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ಕ್ರೀಡಾಪಟುಗಳಿಗೆ ಸರ್ಕಾರದ ಪ್ರೋತ್ಸಾಹ ಸದಾ ಹೀಗೆ ಇರಲಿ.
●ವಿ.ಖುಷಿ, ಪ್ರಶಸ್ತಿ ಪಡೆದ ಟೇಬಲ್ ಟೆನಿಸ್ ಆಟಗಾರ್ತಿ
ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿಯಾಗಿದೆ. ಸದ್ಯ ಮುಂದಿನ ಟೂರ್ನಿಗಳತ್ತ ಗಮನ ಹರಿಸಿದ್ದೇನೆ.
●ಡೇನಿಯಲ್ ಫರೀದ್, ಪ್ರಶಸ್ತಿ ಪಡೆದ ಬ್ಯಾಡ್ಮಿಂಟನ್ ಪಟು