ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ 14 ದಿನ ಬಾಕಿ ಇರುವಂತೆಯೇ ಕಾಂಗ್ರೆಸ್ ಅನ್ನೂ ಒಳಗೊಂಡಂತೆ ಬಿಜೆಪಿಯೇತರ ಪಕ್ಷಗಳೆಲ್ಲವೂ ದಿಲ್ಲಿಯಲ್ಲಿ ‘ಕರ್ನಾಟಕ ಮಾದರಿ’ಯಲ್ಲಿ ಸರ್ಕಾರ ರಚನೆಯ ಸರ್ಕಸ್ ಆರಂಭಿಸಿವೆ. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನವನ್ನು ಈಗಿನಿಂದಲೇ ಆರಂಭಿಸಿವೆ.
ಫಲಿತಾಂಶಕ್ಕೂ ಮುನ್ನವೇ ರಾಷ್ಟ್ರಪತಿಗಳನ್ನು ಭೇಟಿಯಾಗಿ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದೇ, ‘ತಮ್ಮ ಬಳಿ ಸಂಖ್ಯಾಬಲವಿದೆ’ ಎಂದು ಹೇಳುವ ಒಕ್ಕೂಟಕ್ಕೇ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎಂದು ಮನವಿ ಮಾಡಲು ಪ್ರತಿಪಕ್ಷಗಳು ಯೋಜನೆ ಹೆಣೆದಿವೆ. ಜತೆಗೆ ಗೋವಾ, ಮಣಿಪುರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಅತಿದೊಡ್ಡ ಪಕ್ಷಕ್ಕೆ ಅವಕಾಶ ನೀಡದೇ, ಚುನಾವಣೆ ನಂತರ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿಗೇ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟದ್ದನ್ನು ಮುಂದಿಟ್ಟು ರಾಷ್ಟ್ರಪತಿಗಳ ಬಳಿ ಸರ್ಕಾರ ರಚನೆಗೆ ಅವಕಾಶ ಕೇಳಲು ಚಿಂತನೆ ನಡೆಸಿವೆ.
ಇದರ ಪೂರ್ವಭಾವಿಯಾಗಿ, ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಟಿಡಿಪಿ ಮುಖಂಡ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಸರ್ಕಾರ ರಚನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಫಲಿತಾಂಶಕ್ಕೂ ಎರಡು ದಿನ ಮುನ್ನ, ಅಂದರೆ ಮೇ 21 ರಂದು ನವದೆಹಲಿಯಲ್ಲಿ ಪ್ರತಿಪಕ್ಷ ನಾಯಕರ ಸಭೆ ಇದ್ದು, ಅಂದು ಚರ್ಚಿಸಬೇಕಾದ ಹಾಗೂ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆಯೂ ಮಾತುಕತೆ ಮಾಡಿದ್ದಾರೆ. ಬಳಿಕ ಕೋಲ್ಕತಾಗೆ ತೆರಳಿದ ಅವರು ಟಿಎಂಸಿ ಪರವಾಗಿ ಪ್ರಚಾರ ನಡೆಸಿದರು. ನಂತರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೂ ಭೇಟಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಎನ್‌ಡಿಎಗಿಂತ ಯುಪಿಎ ಮಿತ್ರ ಪಕ್ಷಗಳೇ ಹೆಚ್ಚು ಸ್ಥಾನಗಳಿಸಿಕೊಳ್ಳಲಿವೆ ಎಂದಿದ್ದಾರೆ. ಸದ್ಯದ ಪ್ರಕಾರ, ಯುಪಿಎ ಜತೆ ಹೆಚ್ಚು ಮಿತ್ರ ಪಕ್ಷಗಳಿವೆ. ಎನ್‌ಡಿಎ ಜತೆ ಶಿವಸೇನೆ, ಜೆಡಿಯು, ಎಜಿಪಿ ಯಂಥ ಪಕ್ಷಗಳು ಮಾತ್ರ ಇವೆ. ಅಲ್ಲದೆ ಸಂವಿಧಾನದ ಪ್ರಕಾರ, ರಾಷ್ಟ್ರಪತಿಗಳು ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದರೆ, ಈ ಒಕ್ಕೂಟ ಹೆಚ್ಚು ಸ್ಥಾನ ಗಳಿಸಿದ್ದರೆ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದಿದ್ದಾರೆ.