Advertisement

ಇಲ್ಲಿದೆ ಶಾಸಕರ ಜಾತಕ !ಆದಾಯಕ್ಕೂ, ವಿದ್ಯಾಭ್ಯಾಸಕ್ಕೂ ಸಂಬಂಧವೇ ಇಲ್ಲ!

11:57 AM Sep 18, 2018 | Sharanya Alva |

ನವದೆಹಲಿ:ದೇಶಾದ್ಯಂತ 3,145 ಹಾಲಿ ಶಾಸಕರ ಸರಾಸರಿ ವಾರ್ಷಿಕ ಆದಾಯ 24.59 ಲಕ್ಷ ರೂಪಾಯಿ, ಆದರೆ ಅತೀ ಹೆಚ್ಚು ಸಂಬಳ ಪಡೆಯುವ ಪಟ್ಟಿಯಲ್ಲಿ ಕರ್ನಾಟಕ ಶಾಸಕರು ನಂಬರ್ ವನ್ ಆಗಿದ್ದು ಕರ್ನಾಟಕ ಶಾಸಕರ ವಾರ್ಷಿಕ ಸರಾಸರಿ ಆದಾಯ ಒಂದು ಕೋಟಿ ರೂಪಾಯಿ ಎಂದು ಅಧ್ಯಯನ ವರದಿ ತಿಳಿಸಿದೆ.

Advertisement

ಮತ್ತೊಂದೆಡೆ ಮಹಾರಾಷ್ಟ್ರದ 256 ಶಾಸಕರು 2ನೇ ಸ್ಥಾನ ಪಡೆದಿದ್ದು, ವಾರ್ಷಿಕ ಸರಾಸರಿ ಆದಾಯ 43.4 ಲಕ್ಷ ರೂಪಾಯಿ ಆದಾಯ ಇದೆ. ಛತ್ತೀಸ್ ಗಢ್ ಶಾಸಕರು ಅತೀ ಕಡಿಮೆ (ವಾರ್ಷಿಕ ಆದಾಯ 5.4 ಲಕ್ಷ ರೂ.) ಆದಾಯ ಹೊಂದಿರುವುದಾಗಿ ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಶನಲ್ ಇಲೆಕ್ಷನ್ ವಾಚ್ ನ ನೂತನ ವರದಿ ವಿವರಿಸಿದೆ.

ದೇಶದ 4086 ಹಾಲಿ ಶಾಸಕರಲ್ಲಿ 3,145 ಶಾಸಕರು ಸಲ್ಲಿಸಿರುವ ಅಫಿಡವಿಟ್ ನ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. 941 ಶಾಸಕರು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಮ್ಮ ಆದಾಯವನ್ನು ಘೋಷಿಸಿಕೊಂಡಿಲ್ಲ.

ಹಾಲಿ ಶಾಸಕರ ವಾರ್ಷಿಕ(ವೈಯಕ್ತಿಕ) ಆದಾಯವನ್ನು ಮಾತ್ರ ಪರಿಗಣಿಸಿ ಈ ವರದಿ ಸಿದ್ಧಪಡಿಸಲಾಗಿದೆ. ದಕ್ಷಿಣ ಪ್ರಾಂತ್ಯದ ಸುಮಾರು 711 ಶಾಸಕರ ವಾರ್ಷಿಕ ಆದಾಯ 51.99 ಲಕ್ಷ ರೂಪಾಯಿ ಆಗಿದ್ದು, ಈಶಾನ್ಯ ಪ್ರಾಂತ್ಯದ 614 ಶಾಸಕರ ವಾರ್ಷಿಕ ಆದಾಯ 8.53 ಲಕ್ಷ ರೂಪಾಯಿ.

ಛತ್ತೀಸ್ ಗಢ್ ಅಸೆಂಬ್ಲಿಯ ಒಟ್ಟು 63 ಶಾಸಕರು ಅತೀ ಕಡಿಮೆ ಸಂಬಳ ಪಡೆಯುತ್ತಿದ್ದು, ಇವರ ವಾರ್ಷಿಕ ಆದಾಯ 5.4 ಲಕ್ಷ ರೂಪಾಯಿ, ಜಾರ್ಖಂಡ್ ನ 72 ಶಾಸಕರು ವಾರ್ಷಿಕ ಪಡೆಯುತ್ತಿರುವ ಆದಾಯ 7. 4ಲಕ್ಷ ರೂಪಾಯಿ.

Advertisement

3,145 ಶಾಸಕರುಗಳ ಅಫಿಡವಿಡ್ ನ ವಿಶ್ಲೇಷಣೆ ಪ್ರಕಾರ, 55 ಶಾಸಕರು ತಮ್ಮ ಉದ್ಯೋಗದ ಬಗ್ಗೆ ಮಾಹಿತಿ ನೀಡಿಲ್ಲ. 771 ಶಾಸಕರು ವ್ಯವಹಾರ ತಮ್ಮ ಉದ್ಯೋಗ ಎಂದು ಉಲ್ಲೇಖಿಸಿದ್ದು, 758 ಶಾಸಕರು ಕೃಷಿಕರು ಅಥವಾ ರೈತರು ಎಂಬುದಾಗಿ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ ಎಂದು ವರದಿ ವಿವರಿಸಿದೆ.

397 ಶಾಸಕರು ಕೃಷಿ ಹಾಗೂ ವ್ಯವಹಾರ ತಮ್ಮ ಉದ್ಯೋಗ ಎಂದು ನಮೂದಿಸಿದ್ದು, ಈ ಶಾಸಕರ ವಾರ್ಷಿಕ ಆದಾಯ 57.81 ಲಕ್ಷ ರೂಪಾಯಿ ಆಗಿದೆ. ಅಫಿಡವಿಟ್ ಪ್ರಕಾರ 1,052 ಶಾಸಕರು ತಮ್ಮ ವಿದ್ಯಾರ್ಹತೆಯನ್ನು ಬಹಿರಂಗಪಡಿಸಿದ್ದು, ಕೆಲವರು 5ನೇ ತರಗತಿ ಹಾಗೂ ಪಿಯುಸಿ ಎಂಬುದಾಗಿ ಉಲ್ಲೇಖಿಸಿದ್ದಾರೆ. ಇವರು ಶಾಸಕರಾಗಿ ಪಡೆಯುವ ವಾರ್ಷಿಕ ಆದಾಯ 31.03 ಲಕ್ಷ ರೂಪಾಯಿ. 1,997 ಶಾಸಕರು ಪದವಿ ಅಥವಾ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ.

138 ಶಾಸಕರು 8ನೇ ತರಗತಿ ಪಾಸಾಗಿದ್ದಾರೆ..ಇವರ ವಾರ್ಷಿಕ ಆದಾಯ 89.88 ಲಕ್ಷ ರೂಪಾಯಿ. ಯಾರು ವಿದ್ಯಾಭ್ಯಾಸವೇ ಕಲಿಯಲಿಲ್ಲ ಎಂದು ಘೋಷಿಸಿಕೊಂಡಿದ್ದಾರೋ ಆ ಶಾಸಕರ ವಾರ್ಷಿಕ ಆದಾಯ 9.31 ಲಕ್ಷ ರೂಪಾಯಿ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next