Advertisement
ಮುಖ್ಯಮಂತ್ರಿಗಳು ಪ್ರತಿ ಕ್ಷೇತ್ರಕ್ಕೆ ತಲಾ 25 ಕೋಟಿ ರೂ. ಕೊಡುವುದಾಗಿ ಹೇಳಿರುವುದು ಸ್ವಾಗತಾರ್ಹ. ನಮ್ಮ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಂತಾಗಿದೆ. ಆದರೆ ನಾವು ಚುನಾವಣೆ ಹೊಸ್ತಿಲಲ್ಲಿದ್ದು, ತ್ವರಿತವಾಗಿ ಮತ್ತು ಎದ್ದುಕಾಣುವ ಅಭಿವೃದ್ಧಿ ಕಾಮಗಾರಿಗಳು ಕ್ಷೇತ್ರ ಗಳಲ್ಲಿ ನಡೆಯಬೇಕಿದೆ. ಇದಕ್ಕಾಗಿ ಹೆಚ್ಚು ಹಣದ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿಗಳ ಬಳಿ ಇರುವ ಜಲಸಂಪನ್ಮೂಲ ಖಾತೆಯಿಂದಲೂ ಹಲವು ಯೋಜನೆಗಳಿಗೆ ಅನುದಾನ ಒದಗಿಸಬೇಕು ಎಂದು ಕೆಲವು ಶಾಸಕರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ತೀವ್ರ ಬೇಸರ ವ್ಯಕ್ತಪಡಿಸಿದೆ ಎಂದು ಇದೇ ವೇಳೆ ಶಾಸಕರ ಗಮನಕ್ಕೆ ತಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳಾಗಿವೆ. ಮುಂದೆ ಲೋಕಸಭಾ ಚುನಾವಣೆ ಇದೆ. ಶಾಸಕರು ಈಗ ಹನಿಮೂನ್ ಮನಸ್ಥಿತಿಯಿಂದ ಹೊರಬಂದು ಸ್ಥಳೀಯವಾಗಿ ಪಕ್ಷ ಸಂಘಟನೆ ಕಡೆಗೆ ಗಮನ ಹರಿಸಬೇಕು. ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಕ್ಷೇತ್ರಗಳಲ್ಲೇ ಬೀಡುಬಿಟ್ಟು, ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಸೂಚನೆ ನೀಡಿದರು.
Related Articles
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಸುಮಾರು 14 ಬಜೆಟ್ ಮಂಡಿಸಿದ್ದೇನೆ. ಇಷ್ಟೊಂದು ಕೆಟ್ಟ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಅಷ್ಟರಮಟ್ಟಿಗೆ ಈ ಹಿಂದಿನ ಸರಕಾರ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿ ಹೋಗಿದೆ. ಇದರ ಅಂಕಿ-ಅಂಶಗಳು ಸಹಿತ ದಾಖಲೆಗಳನ್ನು ನಾನು ಕೊಡುತ್ತೇನೆ. ಸ್ಥಳೀಯ ನಾಯಕರು ಮತ್ತು ಜನರಿಗೆ ಇದನ್ನು ಮನದಟ್ಟು ಮಾಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಇದೆಲ್ಲದರ ನಡುವೆ ಎಂದಿನಂತೆ ಬಿ.ಆರ್. ಪಾಟೀಲ್ ಸಹಿತ ಕೆಲವು ಶಾಸಕರಿಂದ ಸಚಿವರು ಮತ್ತು ಅಧಿಕಾರಿಗಳು ತಮ್ಮನ್ನು ಪರಿಗಣಿಸುತ್ತಿಲ್ಲ. ಕಿಮ್ಮತ್ತು ಕೊಡುತ್ತಿಲ್ಲ ಎಂಬ ಮುನಿಸು ಮುಂದುವರಿದಿದೆ. ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕದ ಬಗ್ಗೆ ಪ್ರಸ್ತಾವವಾಗಿದ್ದು, ಹೈಕಮಾಂಡ್ ಈ ಸಂಬಂಧ ಆದಷ್ಟು ಬೇಗ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.