Advertisement
ಪುಲಿಕೇಶಿನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರೋಷನ್ ಬೇಗ್ ಅವರು ನೋಟು ಅಮಾನ್ಯಿàಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಾರೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಕೀಳು ಮಟ್ಟದ ಟೀಕೆ ಮಾಡಿದ್ದಾರೆ ಎನ್ನಲಾಗಿದೆ.
Related Articles
Advertisement
ಮಾತು ಮುಂದುವರಿಸಿದ ಅವರು, ಕಾಂಗ್ರೆಸ್ ಪಕ್ಷ ಗೌರವದ ಕೆಲಸ ಮಾಡಿದೆ. ಇಂದಿರಾ ಗಾಂಧಿ, ರಾಜೀವ್‌ಗಾಂಧಿ ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದರು. ಅಂಥವರ ಪುತ್ರ ರಾಹುಲ್ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ ಜಾರಿ ತಂದಿದ್ದಾರೆ. ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸಿದ್ದಾರೆ. ಇದನ್ನೆಲ್ಲ ಮಾಡುವುದನ್ನು ಬಿಟ್ಟು ಮನ್ ಕಿ ಬಾತ್, ಮಂಕಿ ಬಾತ್ ಇವೆಲ್ಲ ಏಕೆ ಬೇಕು? ಅಷ್ಟೇ ಅಲ್ಲ, 5 ರೂ.ಗೆ ತಿಂಡಿ, 10 ರೂ.ಗೆ ಊಟ ಕೊಡುವ ಇಂದಿರಾ ಕ್ಯಾಂಟೀನ್ ಮಾಡಿದ್ದಾರೆ. ಅದನ್ನೆಲ್ಲ ನೀವ್ಯಾಕೆ (ಬಿಜೆಪಿ) ಮಾಡಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡುತ್ತಿದ್ದರು ಗೊತ್ತಾ? ಶೋಭಾ ಮುಖ ನೋಡಿಕೊಂಡು ನಿಂತಿದ್ದರು ಹೀಗೆ ರೋಷನ್ ಬೇಗ್ ಅವರ ಮಾತುಗಳ ವಿಡಿಯೋವನ್ನು ಬಿಜೆಪಿ ಬಹಿರಂಗಪಡಿಸಿದೆ.
ಬೇಗ್ ವಿರುದ್ಧ ಪೊಲೀಸ್ ದೂರು: ರೋಷನ್ ಬೇಗ್ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಟ್ಟ, ಅಶ್ಲೀಲ ಭಾಷೆಗಳಲ್ಲಿ ಟೀಕೆ ಮಾಡಿರುವ ಸಚಿವ ರೋಷನ್ ಬೇಗ್ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ಅಲ್ಲದೆ, ಅವರು ಬಳಸಿರುವ ಭಾಷೆ ವಿರುದ್ಧ ಪೊಲೀಸ್ ದೂರು ನೀಡುವುದರ ಜತೆಗೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿದರು.
ಇನ್ನೊಂದೆಡೆ ಮತ್ತೂಬ್ಬ ವಕ್ತಾರ ಗೋ.ಮಧುಸೂಧನ್ ಅವರೂ ರೋಷನ್ ಬೇಗ್ ವಿರುದ್ಧ ಕಿಡಿ ಕಾರಿದ್ದು, ನಾಲಿಗೆ ಬಿಗಿ ಹಿಡಿದು ಮಾತನಾಡದಿದ್ದಲ್ಲಿ ನಿಮ್ಮ ಭಾಷೆಯಲ್ಲಿ ಮತ್ತು ನಿಮ್ಮ ಮಟ್ಟದಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಜತೆಗೆ ಇನ್ನೊಬ್ಬರ ಬಗ್ಗೆ ಮಾತನಾಡುವ ನಿಮ್ಮ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ ಮೇಲೆಯೇ ಲೈಂಗಿಕ ಹಗರಣ ಕೇಳಿಬಂದಿದೆ ಎಂಬುದನ್ನು ಮರೆತಿದ್ದೀರಾ ಎಂದೂ ಪ್ರಶ್ನಿಸಿದ್ದಾರೆ.
ಸಂಪುಟದಿಂದ ವಜಾಕ್ಕೆ ಬಿಎಸ್‌ವೈ ಆಗ್ರಹಪ್ರಧಾನಿ ಮೋದಿ ಅವರನ್ನು ಅಗೌರವದಿಂದ ಸಂಬೋಧಿಸಿರುವ ಸಚಿವ ರೋಷನ್ ಬೇಗ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶದ ಪ್ರಧಾನಿ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ರೋಷನ್ ಬೇಗ್ ಮಾಡಿರುವ ಟೀಕೆ ಇಡೀ ಭಾರತ ಮತ್ತು ಪ್ರಧಾನಿ ಪ್ರತಿನಿಧಿಸುವ 125 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದಾರೆ. ಒಬ್ಬ ಸಚಿವರಾಗಿ ಸಭ್ಯ ನಡವಳಿಕೆ ರೂಢಿಸಿಕೊಳ್ಳಬೇಕಿದ್ದ ರೋಷನ್ ಬೇಗ್, ದೇಶದ ಪ್ರಧಾನಿಯನ್ನು ಅಗೌರವದಿಂದ ಸಂಬೋಧಿಸಿದ್ದಾರೆ. ನೋಟು ಅಮಾನ್ಯದಿಂದ ಅವರು ಭಾರೀ ನಷ್ಟಕ್ಕೆ ಒಳಗಾಗಿ ಸಾರ್ವಜನಿಕ ಸಭೆಯಲ್ಲಿ ಈ ನೋವು ತೋಡಿಕೊಂಡಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ದೇಶದಲ್ಲೇ ಅತಿ ದೊಡ್ಡ ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಚಿವ ಬೇಗ್ ಅವರನ್ನು ಸಂಪುಟದಿಂದ ಕೈಬಿಟ್ಟು, ಅವರ ಸಹೋದರನನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲ, ಬೇಗ್ ಅವರಿಗೆ ಸೇರಿದ್ದ ಕಟ್ಟಡಕ್ಕೆ ಬೀಗಮುದ್ರೆ ಹಾಕಲಾಗಿತ್ತು. ನಕಲಿ ಛಾಪಾ ಕಾಗದ ಹಗರಣದಿಂದಾಗಿ ಛಾಪಾ ಕಾಗದದ ಬಳಕೆಯನ್ನೇ ರಾಜ್ಯದಲ್ಲಿ ನಿಷೇಧಿಸಲಾಯಿತು. ಇಂತಹ ಕರಾಳ ಇತಿಹಾಸವಿರುವ ಸಚಿವ ಬೇಗ್, ದೇಶದ ಜನರ ಅಪಾರ ಪ್ರೀತಿಗೆ ಪಾತ್ರವಾಗಿರುವ ಪ್ರಧಾನಿಗಳ ವಿರುದ್ಧ ಮಾಡಿರುವ ಟೀಕೆ ಅತ್ಯಂತ ಖಂಡನಾರ್ಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಬಗ್ಗೆ ಸಚಿವ ರೋಷನ್ ಬೇಗ್ ಹೇಳಿಕೆ ಖಂಡನೀಯ. ರಾಹುಲ್ ಗಾಂಧಿಯಿಂದ ಹಿಡಿದು ರೋಷನ್ ಬೇಗ್‌ವರೆಗೆ ಕಾಂಗ್ರೆಸ್‌ನವರಿಗೆ ಒಳ್ಳೆಯ ಭಾಷೆಯೇ ಗೊತ್ತಿಲ್ಲ. ಸಂಸದೀಯ ವ್ಯವಸ್ಥೆ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಆದರೆ, ಸಂಸದೀಯ ಭಾಷೆ ಇವರಿಗೆ ಗೊತ್ತಿಲ್ಲ. ಸಚಿವರ ಮಾತನ್ನು ಕಾಂಗ್ರೆಸ್ ತಳ್ಳಿಹಾಕಿಲ್ಲ ಎಂದರೆ ಅದನ್ನು ಒಪ್ಪಿಕೊಂಡಂತೆ.
– ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ