Advertisement

ಕಬ್ಬಿಣದ ಅದಿರು ಉತ್ಪಾದನೆ ಮಿತಿ ಹೆಚ್ಚಳ: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

10:20 PM Aug 26, 2022 | Team Udayavani |

ನವದೆಹಲಿ: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಉತ್ಪಾದನೆಯ ಮಿತಿಯನ್ನು ಹೆಚ್ಚಳ ಮಾಡಿ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಆದರೆ, ಆರ್ಥಿಕ ಅಭಿವೃದ್ಧಿಯ ಉದ್ದೇಶದ ಜೊತೆ ಜೊತೆಗೇ ಪರಿಸರ ಮತ್ತು ಜೀವವೈವಿಧ್ಯದ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎಂಬ ಕಟ್ಟಪ್ಪಣೆಯನ್ನೂ ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ವಿಧಿಸಿದೆ.

ಕಬ್ಬಿಣದ ಅದಿರಿನ ಉತ್ಪಾದನೆಗೆ ಹೇರಿರುವ ಮಿತಿಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, “ಬಳ್ಳಾರಿ ಜಿಲ್ಲೆಯಲ್ಲಿ ಉತ್ಪಾದನೆ ಮಿತಿಯನ್ನು ಸದ್ಯ ಇರುವ 28 ದಶಲಕ್ಷ ಮೆಟ್ರಿಕ್‌ ಟನ್‌ನಿಂದ 35 ದಶಲಕ್ಷ ಮೆಟ್ರಿಕ್‌ ಟನ್‌ಗೆ, ಅದೇ ರೀತಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಉತ್ಪಾದನೆ ಮಿತಿಯನ್ನು 7 ಎಂಎಂಟಿಯಿಂದ 15 ಎಂಎಂಟಿಗೆ ಹೆಚ್ಚಿಸುತ್ತಿದ್ದೇವೆ’ ಎಂದು ಘೋಷಿಸಿದೆ.

ಜತೆಗೆ, “ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ ಜೀವವೈವಿಧ್ಯ, ಪರಿಸರದ ಸಂರಕ್ಷಣೆಯೂ ಅಷ್ಟೇ ಮುಖ್ಯ. ಹೀಗಾಗಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ’ ಎಂದೂ ಸೂಚಿಸಿದೆ. ಈ ಬಗ್ಗೆ ಇತರ ರಾಜ್ಯಗಳಲ್ಲಿ ಅನುಸರಿಸಲಾಗಿದ್ದ ನಿಯಮಗಳನ್ನೂ ಕೂಡ ನ್ಯಾಯಪೀಠ ಅನುಸರಿಸಿದೆ.

ಪ್ರಕರಣ ಸಂಬಂಧ ಮೇ 20ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ಕರ್ನಾಟಕದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಮಾರಾಟ ಮತ್ತು ರಫ್ತಿಗೆ ಸಂಬಂಧಿಸಿದ ಕೆಲವೊಂದು ಕ್ರಮಗಳನ್ನು ಸಡಿಲಿಕೆ ಮಾಡಿತ್ತು. ಆದರೆ, ಉತ್ಪಾದನೆಗೆ ವಿಧಿಸಲಾಗಿದ್ದ ಮಿತಿಯ ಕುರಿತು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.

Advertisement

ಸುಪ್ರೀಂಕೋರ್ಟ್‌ ನೇಮಕ ಮಾಡಿದ್ದ ಕೇಂದ್ರೀಯ ಉನ್ನತಾಧಿಕಾರದ ಸಮಿತಿ (ಸಿಇಸಿ) ಕೂಡ ಮೂರೂ ಜಿಲ್ಲೆಗಳಲ್ಲಿ ಅದಿರು ಉತ್ಪಾದನೆಯ ಮಿತಿಯನ್ನು ಹೆಚ್ಚಿಸುವ ಬಗ್ಗೆ ಸಹಮತ ವ್ಯಕ್ತಪಡಿಸಿತ್ತು.

ಸಂಪೂರ್ಣ ಸಡಿಲಿಕೆಗೆ ನಕಾರ
ಅದಿರು ಉತ್ಪಾದನೆಗೆ ಹೇರಿರುವ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಕೋರ್ಟ್‌ನಿಂದ ನೇಮಕಗೊಂಡಿದ್ದ ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ) ಮಾಡಿದ ಶಿಫಾರಸನ್ನು ಸುಪ್ರೀಂ ತಿರಸ್ಕರಿಸಿದೆ.
ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಹಾಗಂತ ಮಿತಿಯನ್ನು ಸಂಪೂರ್ಣ ತೆಗೆದುಹಾಕಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎಂದಿದೆ. ಉತ್ಪಾದನೆಗಿರುವ ಮಿತಿಯನ್ನು ರದ್ದು ಮಾಡುವುದರಿಂದ ರಾಜ್ಯದಲ್ಲಿ ಅನಿಯಂತ್ರಿತ ಗಣಿಗಾರಿಕೆ ಆರಂಭವಾಗಿ, ಮತ್ತೆ ಹಿಂದಿನ ಪರಿಸ್ಥಿತಿಗೆ ಮರಳಬೇಕಾಗಬಹುದು ಎಂದು ಎನ್‌ಜಿಒ ಸಮಾಜ ಪರಿವರ್ತನ ಸಮುದಾಯವು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿತು.

ಎಲ್ಲಿ, ಎಷ್ಟು ಹೆಚ್ಚಳ?
ಬಳ್ಳಾರಿ- 28 ಎಂಎಂಟಿಯಿಂದ 35 ಎಂಎಂಟಿಗೆಚಿತ್ರದುರ್ಗ ಮತ್ತು ತುಮಕೂರು- 7 ಎಂಎಂಟಿಯಿಂದ 15 ಎಂಎಂಟಿಗೆ

Advertisement

Udayavani is now on Telegram. Click here to join our channel and stay updated with the latest news.

Next