ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋದಲ್ಲಿ ಬಂದಲ್ಲಿ ತಾಕತ್ತಿದ್ದರೆ, ಧಮ್ ಇದ್ದರೆ ಎನ್ನುತ್ತಾರೆ. ಬಿಜೆಪಿಯವರಿಗೆ ಧಮ್ -ತಾಕತ್ತಿದ್ದರೆ ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರಗೊಳ್ಳುವಂತೆ ಮಾಡಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಸವಾಲು ಹಾಕಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದುವರೆಗೂ ಆಗಿಲ್ಲ ಎಂದರು.
ವಿಧಾನಸಭೆ ಚುನಾವಣೆಗೆ 88 ಮಹಿಳೆಯರು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚಿನವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ. ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರನ್ನು ನಿರ್ಲಕ್ಷಿಸದೆ, ಹೆಚ್ಚಿನ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಮಹಿಳೆ ಸಿಎಂ ಸ್ಥಾನ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಜ.8 ರಂದು ಚಿತ್ರದುರ್ಗ ದಲ್ಲಿ ಎಸ್.ಸಿ/ಎಸ್ಟಿ ಸಮಾವೇಶ ನಡೆಸಲಾಗುವುದು. ಮಹಿಳಾ ಸಮಾವೇಶ ನಡೆಸಲಾಗುವುದು. ವಿಧಾನಸಭೆ ಚುನಾವಣೆಗೆ ಮಹಿಳೆಯರಿಗೆ ಪೂರಕವಾಗಿ ಕಾಂಗ್ರೆಸ್ ನಿಂದ ಪ್ರತ್ಯೇಕ ಪಿಂಕ್ ಪ್ರಣಾಳಿಕೆ ರೂಪಿಸಲಾಗುತ್ತದೆ ಎಂದರು.
ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬೇಡವಾದವರ ಹೆಸರು ತೆಗೆಯುವುದು, ಅನುಕೂಲವಾಗುಔರ ಸೇರ್ಪಡೆ ಕಾರ್ಯಕ್ಕೆ ಮುಂದಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಮಹಿಳಾ ಘಟಕದಿಂದ ಮನೆ, ಮನೆಗೆ ತೆರಳಿ ಪಟ್ಟಿ ಪರಿಶೀಲನೆ, ಜಾಗೃತಿ ಮೂಡಿಸಲಾಗುವುದು ಎಂದರು.