Advertisement

Valmiki Corporation Scam: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್‌ ವಿಚಾರಣೆ

12:13 AM Jul 10, 2024 | Shreeram Nayak |

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್‌ ಮಂಗಳವಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಇವರಿಬ್ಬರಿಗೆ ಸೂಚಿಸಿದೆ.

Advertisement

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ಕಚೇರಿಗೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಾಜಿ ಸಚಿವ ನಾಗೇಂದ್ರ ಹಾಜರಾದರು. ಬಳಿಕ ಸತತವಾಗಿ ಸಂಜೆ 5 ಗಂಟೆಯವರೆಗೆ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವರ ವಿಚಾರಣೆ ನಡೆಸಿದ್ದಾರೆ. ನೂರಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ ಅಪರಾಹ್ನ 3 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಿ ಹಲವು ತಾಸು ವಿಚಾರಣೆ ಎದುರಿಸಿ ಹೊರಬಂದರು.

ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಅಧ್ಯಕ್ಷ ಬಸವನಗೌಡ ದದ್ದಲ್‌ ನಿಮ್ಮ ಗಮನಕ್ಕೆ ತರಲಿಲ್ಲವೇ? ಇಷ್ಟು ದೊಡ್ಡ ಮೊತ್ತದ ಹಣ ವರ್ಗಾವಣೆಯಾದರೂ ನಿಮಗೆ ಸಣ್ಣ ಸುಳಿವೂ ಸಿಗಲಿಲ್ಲವೇ ಅಥವಾ ನಿಮ್ಮ ಗಮನಕ್ಕೆ ಬಂದೇ ಹಗರಣ ನಡೆದಿದೆಯೇ? ನಿಮ್ಮ ಸೂಚನೆ ಮೇರೆಗೆ ಈ ಹಗರಣ ನಡೆಸಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಅಧಿಕಾರಿಗಳು ನಾಗೇಂದ್ರ ಮುಂದಿಟ್ಟರು. ಆದರೆ ನಾಗೇಂದ್ರ ಅವರು ಈ ಹಗರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next