ಚಿಕ್ಕೋಡಿ: ಮಹಿಳೆಯು ಏಳೇಳು ಜನ್ಮಕ್ಕೆ ಮುತ್ತೈದಿಯಾಗಿರಬೇಕು. ಪತಿಯ ಆಯುಷ್ಯ ಹೆಚ್ಚಿಸಲು ಗಡಿ ಭಾಗದ ಮಹಿಳೆಯರು ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ‘ವಟ ಸಾವಿತ್ರಿ ವ್ರತ’ ವಿಜೃಂಭಣೆಯಿಂದ ಆಚರಿಸಿದರು.
ಹಿಂದೂ ಧರ್ಮದಲ್ಲಿ ಪ್ರತಿ ಉಪವಾಸ ಮತ್ತು ಹಬ್ಬಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅಂತಹ ಉಪವಾಸ ಮತ್ತು ಹಬ್ಬಗಳಲ್ಲಿ ವಟ ಸಾವಿತ್ರಿ ವ್ರತವೂ ಒಂದು.
ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸುತ್ತಾರೆ. ಮತ್ತು ಸತ್ಯವಾನ್ ಸಾವಿತ್ರಿಯ ಗೌರವಾರ್ಥವಾಗಿ ಆಲದ ಮರವನ್ನು ಪೂಜಿಸುತ್ತಾರೆ.
ಕರ್ನಾಟಕ ಮಹಾರಾಷ್ಷ್ರ ಗಡಿ ಭಾಗವಾದ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯವಾಗ ಸೇರಿದಂತೆ ಮುಂತಾದ ಕಡೆಗಳಲ್ಲಿ ಕಾರಹುಣ್ಣಿಮೆಯ ದಿನದಂದು ಮಹಿಳೆಯರು ಉಪವಾಸ ಮಾಡಿ ತಮಗೆ ಹತ್ತಿರ ಇರುವ ಆಲದ ಮರಕ್ಕೆ ನೂಲ ಸುತ್ತಿ ಪೂಜಿಸಿ ಪತಿಗೆ ಹೆಚ್ಚಿನ ಆಯುಷ್ಯ ಕೊಡಬೇಕೆಂದು ಶುಕ್ರವಾರ ಪೂಜೆ ಸಲ್ಲಿಸಿ ವಟ ಸಾವಿತ್ರಿ ವ್ರತ ಆಚರಿಸಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮದಲ್ಲಿ ವಟ ಸಾವಿತ್ರಿ ವ್ರತ ಆಚರಿಸಿದರು. ಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶೇಷ ಆಚರಣೆ ಇದಾಗಿದೆ.ಹೀಗಾಗಿ ಪತಿಯ ಆಯುಷ್ಯ,ಆರೋಗ್ಯ ವೃದ್ಧಿಯಾಗಲಿ ಈ ವಿಶೇಷ ಆಚರಣೆಯನ್ನು ಮಾಡಲಾಗುತ್ತದೆ ಎಂದರು.