ಪಿರಿಯಾಪಟ್ಟಣ: ಶಿವಶರಣ ಶ್ರೀ ಗುರು ಹರಳಯ್ಯ ಮಠಕ್ಕೆ ಸಹಕಾರ ನೀಡಿದವರಿಗಿಂತ ಅಭಿವೃದ್ಧಿಗೆ ಅಡ್ಡಿಪಡಿಸಿದ ಮಹನೀಯರೇ ಹೆಚ್ಚು ಎಂದು ವಿಧಾನ ಪರಿಷತ್ ಸದಸ್ಯ ಡಾ ಡಿ.ತಿಮ್ಮಯ್ಯ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಕಗ್ಗುಂಡಿ ಗ್ರಾಮದ ಶಿವಶರಣ ಗುರು ಹರಳಯ್ಯ ಮಠಕ್ಕೆ ಶಿವರಾತ್ರಿ ಹಬ್ಬದ ಅಂಗವಾಗಿ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಹಲವಾರು ಯಾತ್ರ ಸ್ಥಳಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಾರೆ ಆದರೆ ಸಮೀಪದಲ್ಲಿರುವ ಇತಿಹಾಸ ಸಾರುವ ಈ ಮಠಕ್ಕೆ ಯಾವುದೇ ಪ್ರೋತ್ಸಾಹ ದೊರೆಯದೆ ಅಭಿವೃದ್ಧಿ ಹಿನ್ನಡೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಾಮಾಜಿಕವಾಗಿ ಹಾಗೂ ಜನಾಂಗೀಯವಾಗಿ ಸಮಾಜದ ಹಿತ ಬಯಸದೆ ಇರುವವರಿಂದ ಅಭಿವೃದ್ದಿ ಕೆಲಸಗಳಿಗೆ ಅಡ್ಡಿಆತಂಕಗಳು ಹೆಚ್ಚಾಗಿದ್ದು, ಇಂತವರಿಂದಾಗುವ ತೊಂದರೆಗಳನ್ನು ಸರಿಪಡಿಸುವಲ್ಲಿ ವರ್ಷಗಳೆ ಉರುಳುತ್ತಿವೆ ಎಂದರು.
ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸೀಗೂರು ವಿಜಯ್ ಕುಮಾರ್ ಮಾತನಾಡಿ, ಮಠದ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಹೊಡೆದವರಂದಲೇ ಸಲ್ಲದ ಸಮಸ್ಯೆಗಳು ಎದುರಾಗುತ್ತಿವೆ. ಯಾವುದೇ ಅಧಿಕಾರ ಇಲ್ಲದ ಸಂದರ್ಭದಲ್ಲಿ ಡಾ ಡಿ.ತಿಮ್ಮಯ್ಯ ರವರು ಶ್ರೀ ಮಠದ ಅಭಿವೃದ್ದಿಗೆ ವೈಯಕ್ತಿಕವಾಗಿ ನೀಡಿದ ಆರ್ಥಿಕ ನೆರವಿನಿಂದ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಠದ ಗುರುಗಳಾದ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮದಿಗ ಸಂಘದ ವಿಭಾಗಿಯ ಅಧ್ಯಕ್ಷ ಎಡತರ ನಿಂಗರಾಜು, ತಾ ಆದಿಜಾಂಬವ ಸಂಘದ ಅಧ್ಯಕ್ಷ ಭೂತನಹಳ್ಳಿ ಶಿವಣ್ಣ, ಕಾರ್ಯದರ್ಶಿ ಆರ್.ಡಿ.ಚಂದ್ರು, ದಸಂಸ ಮುಖಂಡ ಡಿ.ಕುಮಾರ್, ತಾಲ್ಲೂಕು ನಾಯಕ ಸಮುದಾಯದ ಅಧ್ಯಕ್ಷ ಪಿ.ಪಿ.ಪುಟ್ಟಯ್ಯ, ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆಯ ಮುಖಂಡ ಎಚ್.ಡಿ.ರಮೇಶ್, ಮುಖಂಡರಾದ ಲೋಕೇಶ್, ಬೆಟ್ಟದಪುರ ನಾರಾಯಣ, ಮಹದೇವ್, ಹೊನ್ನೇಗೌಡ, ಎಚ್.ಸಿ.ಶ್ರೀನಿವಾಸ್, ನರಸಿಂಹ ಸೇರಿದಂತೆ ಮತ್ತಿತರರು ಹಾಜರಿದ್ದರು.