Advertisement

ವಿಧಾನ ಪರಿಷತ್‌ ಚುನಾವಣೆ: 3 ಪಕ್ಷಗಳಿಂದ 7 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

10:15 PM May 24, 2022 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಜೂನ್‌ 3 ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌,ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಏಳು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವಿರೋಧ ಆಯ್ಕೆ ಖಚಿತವಾಗಿದೆ.

Advertisement

ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದರಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಆಡಳಿತ ಪಕ್ಷ ಬಿಜೆಪಿಯಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್‌ ಹಾಗೂ ಹೇಮಲತಾ ನಾಯಕ್‌ ಅವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಅಬ್ದುಲ್‌ ಜಬ್ಟಾರ್‌ ಹಾಗೂ ನಾಗರಾಜ ಯಾದವ್‌ ಅವರು ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ನಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ ನಾಮಪತ್ರ ಸಲ್ಲಿಸಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ವಿಧಾನಸೌಧ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿತ್ತು. ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರಿಂದ ವಿಧಾನಸೌಧದ ಮೊದಲನೇ ಮಹಡಿ ಜನರಿಂದ ತುಂಬಿ ತುಳುಕುತ್ತಿತ್ತು.

ಶರವಣ ಮೊದಲ ನಾಮಪತ್ರ: ಜೆಡಿಎಸ್‌ ಅಭ್ಯರ್ಥಿಯಾಗಿ ಟಿ.ಎ. ಶರವಣ ಅವರು ಮೊದಲು ನಾಮಪತ್ರ ಸಲ್ಲಿಕೆ ಮಾಡಿದರು. ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದ ಪಕ್ಷದ ಹಿರಿಯರ ಸಭೆಯಲ್ಲಿ ಶರವಣ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಘೋಷಣೆ ಮಾಡಿ, ಬಿ. ಫಾರಂ ನೀಡಿದರು.

Advertisement

ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಆಗಮಿಸುವ ಮೊದಲೇ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ದಂಡು: ತನ್ನ ಪಕ್ಷದ ಶಾಸಕರ ಸಂಖ್ಯಾ ಬಲದ ಆಧಾರದಲ್ಲಿ ಗೆಲುವಿಗೆ ಅಗತ್ಯವಿರುವ ಇಬ್ಬರು ನಾಗರಾಜ್‌ ಯಾದವ ಮತ್ತು ಅಬ್ದುಲ್‌ ಜಬ್ಟಾರ್‌ ಅವರ ಹೆಸರನ್ನು ಸೋಮವಾರವೇ ಘೋಷಿಸಿದ್ದ ಕಾಂಗ್ರೆಸ್‌ ನಾಯಕರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಎರಡು ತಂಡಗಳಾಗಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ತಿರಸ್ಕೃತ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿಯೊಬ್ಬ ಅಭ್ಯರ್ಥಿಯು ಎರಡೆರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

ಬಿಜೆಪಿಯ ನಾಲ್ವರು ನಾಮಪತ್ರ: ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಗೊಂಡಿದ್ದರಿಂದ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳು ಕೊನೆ ಕ್ಷಣದವರೆಗೂ ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲೆಗಳನ್ನು ಕಲೆ ಹಾಕುವುದರಲ್ಲಿಯೇ ತೊಡಗಿದ್ದು ಕಂಡು ಬಂದಿತು.

ಮಧ್ಯಾಹ್ನ 1.30 ರ ಸುಮಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ ಹಾಗೂ ಕೇಶವ ಪ್ರಸಾದ್‌ ವಿಧಾನಸೌಧಕ್ಕೆ ಆಗಮಿಸಿ, ಪಕ್ಷದ ಶಾಸಕಾಂಗ ಕಚೇರಿಯಲ್ಲಿ ದಾಖಲೆಗಳನ್ನು ಜೋಡಿಸಿಕೊಂಡು ರಾಜ್ಯಾಧ್ಯಕ್ಷರು ಹಾಗೂ ಸಚಿವರುಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಎಸ್ಕಾರ್ಟ್‌ನಲ್ಲಿ ಬಂದ ಹೇಮಲತಾ: ಬಿಜೆಪಿಯ ಅಚ್ಚರಿಯ ಅಭ್ಯರ್ಥಿ ಹೇಮಲತಾ ನಾಯಕ್‌ ಕೊಪ್ಪಳದಿಂದ ಬೆಂಗಳೂರಿಗೆ ಆಗಮಿಸಿ ಕೊನೆ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಮಂಗಳವಾರ ಬೆಳಿಗ್ಗೆಯೇ ಮಾಹಿತಿ ದೊರೆತಿದ್ದರಿಂದ ಅಲ್ಲಿಂದ ತುಮಕೂರಿನವರೆಗೂ ಕಾರ್‌ನಲ್ಲಿ ಆಗಮಿಸಿದ ಅವರು, ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬೆಂಗಳೂರು ತಲುಪುವುದು ಅನುಮಾನ ಎಂದು ಅರಿತು ಬಿಜೆಪಿ ನಾಯಕರು ವಿಶೇಷ ಹೆಲಿಕ್ಯಾಪ್ಟರ್‌ ಮೂಲಕ ಅವರನ್ನು ತುಮಕೂರಿನಿಂದ ಏರ್‌ಲಿಪ್ಟ್ ಮಾಡಿಕೊಂಡು ಬೆಂಗಳೂರಿಗೆ ಕರೆತಂದರು. ನಂತರ ಜಕ್ಕೂರಿನಿಂದ ವಿಧಾನಸೌಧದವರೆಗೂ ಸರ್ಕಾರಿ ವಾಹನದಲ್ಲಿ ಪೊಲಿಸ್‌ ಎಸ್ಕಾರ್ಟ್‌ ನೀಡುವ ಮೂಲಕ ಅವರನ್ನು ವಿಧಾನಸೌಧಕ್ಕೆ ಕರೆತರಲಾಯಿತು.

ಅವರು ಕೊಪ್ಪಳದಿಂದ ಬೆಂಗಳೂರಿಗೆ ಆಗಮಿಸುವಷ್ಟರಲ್ಲಿ ಬಿಜೆಪಿ ಕಾನೂನು ಘಟಕ ಅವರ ನಾಮಪತ್ರಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ಸಂಗ್ರಹಿಸಿ ಕೊಟ್ಟು ಅವರಿಗೆ ನಾಮಪತ್ರ ಸಲ್ಲಿಕೆಗೆ ಸುಲಭವಾಗುವಂತೆ ನೋಡಿಕೊಂಡಿತು.

ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಏಳು ಜನ ಮಾತ್ರ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಬಹುತೇಕ ಅವಿರೋಧ ಆಯ್ಕೆ ಖಚಿತವಾಗಿದ್ದು, ನಾಮಪತ್ರ ಪರಿಶೀಲನೆ ನಂತರ ಚುನಾವಣಾಧಿಕಾರಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

ನಾನು ಪಕ್ಷದ ಆದೇಶ ಪಾಲನೆ ಮಾಡುವವನು. ಪಕ್ಷ ಈಗ ವಿಧಾನ ಪರಿಷತ್‌ ಅಭ್ಯರ್ಥಿಯನ್ನಾಗಿ ಮಾಡಿದೆ. ಪಕ್ಷ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ

ನಮ್ಮ ಪಕ್ಷ ವಾಲ್ಮೀಕಿ ಸಮುದಾಯದ ಮಹಿಳೆಯನ್ನು ಪರಿಗಣಿಸಿ ಅವಕಾಶ ಕಲ್ಪಿಸಿದ್ದಾರೆ. ನಾನು ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನ್ನನ್ನು ಗುರುತಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ಇಂದು ಬೆಳಿಗ್ಗೆ ಮಾಹಿತಿ ಬಂತು. ನಾನು ಯಾವುದೇ ಎಸ್ಕಾರ್ಟ್‌ ಮೂಲಕ ಬಳಕೆ ಮಾಡಿಲ್ಲ.
-ಹೇಮಲತಾ ನಾಯಕ್‌, ಬಿಜೆಪಿ ಅಭ್ಯರ್ಥಿ

ಸೇವಾ ಮನೋಭಾವಕ್ಕೆ ಟಿಕೆಟ್‌ ಸಿಕ್ಕಿದೆ. ಬಿಜೆಪಿಯವರು ನನ್ನ ಕನಸ್ಸು ನನಸ್ಸು ಮಾಡಿದ್ದಾರೆ. ಪಕ್ಷಕ್ಕೆ ನಾನು ಋಣಿಯಾಗಿರುತ್ತೇನೆ. ಇದು ದಲಿತ ಸಮುದಾಯಕ್ಕೆ ಕೊಟ್ಟಿರುವ ದೊಡ್ಡ ಕೊಡುಗೆ. ಕಾಂಗ್ರೆಸ್‌ ನವರು ದಲಿತ ಸಮುದಾಯವನ್ನು ವೋಟ್‌ ಬ್ಯಾಂಕ್‌ ಗಾಗಿ ಮಾಡಿಕೊಂಡಿದ್ದರು. ನಾನು ನನ್ನ ಸಮುದಾಯವನ್ನು ಪಕ್ಷದ ಪರವಾಗಿ ಮಾಡಲು ಪ್ರಯತ್ನ ಮಾಡುತ್ತೇನೆ.
-ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಅಭ್ಯರ್ಥಿ

ನನ್ನ ಪಕ್ಷ ನನ್ನಂಥ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್‌ ನೀಡಿದೆ. ಇದು ಸಮಸ್ಥ ಕಾರ್ಯಕರ್ತರಿಗೆ ಸಂದ ಗೌರವ. ನನ್ನನ್ನು ಬಿಜೆಪಿಗೆ ಕಳುಹಿಸಿದ ಜಯದೇವ ಅವರನ್ನು ಸ್ಮರಿಸುತ್ತೇನೆ. ನಾನು ಕಾರ್ಯಕರ್ತರ ಧ್ವನಿಯಾಗಿ ಇಲ್ಲಿ ಕೆಲಸ ಮಾಡುತ್ತೇನೆ. ನನ್ನದು ಯಾವುದೇ ಬಣ ಇಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷದ ಅತ್ಯುನ್ನತ ನಾಯಕರು, ಅವರ ಆಶೀರ್ವಾದ ಪಡೆದುಕೊಂಡೆ ಮುಂದುವರೆಯುತ್ತೇನೆ.
-ಕೇಶವ ಪ್ರಸಾದ್‌, ಬಿಜೆಪಿ ಅಭ್ಯರ್ಥಿ

ನಮ್ಮ ಪಕ್ಷದಿಂದ ನಾಲ್ಕು ಸ್ಥಾನಗಳಿಗೆ ನಾಮ ಪತ್ರ ಸಲ್ಲಿಕೆಯಾಗಿದೆ. ನಾಲ್ಕು ಜನರಿಗೆ ಅಭಿನಂದನೆಗಳು. ಕೋರ್‌ ಕಮಿಟಿಯಲ್ಲಿ ಚರ್ಚೆ ಮಾಡಿ ಹೆಸರುಗಳು ಕಳಿಸಿದ್ದೇವು. ಹೈಕಮಾಂಡ್‌ ನಾಯಕರು ಅಂತಿಮ ಮಾಡಿ ಕಳಿಸಿದ್ದಾರೆ. ನನಗೆ ಖುಷಿಯಾಗಿದೆ.
-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ.

ಜಮಿರ್‌ ಮತ್ತು ನನ್ನ ನುಡವೆ ಯಾವುದೇ ಅಸಮಧಾನ ಇಲ್ಲ,. ಜಮಿರ್‌ ಜೊತೆ ಬೆಳಗ್ಗೆ ಮಾತನಾಡಿದ್ದೇನೆ. ಅವರು ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ನಾಮಪತ್ರ ಸಲ್ಲಿಸಲು ಬಂದಿಲ್ಲ. ಬೆಂಗಳೂರಿಗೆ ಬಂದ ಬಳಿಕ ಭೇಟಿಮಾಡುತ್ತೇನೆ ಅಂದಿದ್ದಾರೆ. ಅವರನ್ನು ಭೇಟಿ ಮಾಡಿ ಮಾತನಾಡುವೆ.
-ಅಬ್ದುಲ್‌ ಜಬ್ಟಾರ್‌, ಕಾಂಗ್ರೆಸ್‌ ಅಭ್ಯರ್ಥಿ.

ಕಾಂಗ್ರೆಸ್‌ ನಿಂದ ಇಬ್ಬರು ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟಿದ್ದೇವೆ. ಇನ್ನೂ ಹಲವು ಕಾರ್ಯಕರ್ತರು ಇದ್ದರು. ಅವರಿಗೆ ಅಸಮಧಾನ ಆಗಿದೆ. ಕೇವಲ ಎರಡೆ ಸ್ಥಾನ ನಮಗೆ ಇತ್ತು. ಹಾಗಾಗಿ ಪಕ್ಷ ಇವರನ್ನು ಗುರುತಿಸಿದೆ. ಮುಂದೆ ಕಾರ್ಯಕರ್ತರ ಗುರುತಿಸುವ ಕೆಲಸ ಪಕ್ಷ ಮಾಡುತ್ತದೆ. ಎರಡೇ ಸ್ಥಾನ ಇದ್ದಿದ್ದರಿಂದ ಅನೇಕರಿಗೆ ಟಿಕೆಟ್‌ ತಪ್ಪಿದೆ.
-ಡಿ ಕೆ ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ.

ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗುತ್ತಾರೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಚುನಾವಣೆ ನಡೆದರೆ ಅವಶ್ಯಕತೆಗಿಂತಲೂ ಹೆಚ್ಚಿನ ಮತ ಪಡೆಯುತ್ತಾರೆ. ಲಿಂಗಾಯತರಿಗೆ ಟಿಕೆಟ್‌ ನೀಡದಿರುವ ಬಗ್ಗೆ ಮಾಹಿತಿ ಇಲ್ಲ.
-ಎಂ.ಬಿ. ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ.

ಪಕ್ಷ ನಿಷ್ಠೆ ಗುರುತಿಸಿ ಎರಡನೇ ಬಾರಿ ವಿಧಾನಪರಿಷತ್‌ ನಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ನಾನು ಸಣ್ಣ ಸಮಾಜದಿಂದ ಬಂದಿದ್ದೇನೆ, ಹಾಗಿದ್ದರೂ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ನನ್ನ ಜವಾಬ್ದಾರಿ ಇನ್ನಷ್ಟು ಜಾಸ್ತಿಯಾಗಿದೆ.
-ಟಿ.ಎ. ಶರವಣ, ಜೆಡಿಎಸ್‌ ಅಭ್ಯರ್ಥಿ.

Advertisement

Udayavani is now on Telegram. Click here to join our channel and stay updated with the latest news.

Next