Advertisement

ಇನ್ನಿಂಗ್ಸ್‌ ಮುನ್ನಡೆಯತ್ತ ಕರ್ನಾಟಕ

07:48 AM Nov 02, 2017 | |

ಪುಣೆ: ಈ ಬಾರಿಯ ರಣಜಿ ಟ್ರೋಫಿಯಲ್ಲಿ ಭರ್ಜರಿ ಆಟ ಆಡುತ್ತಿದೆ. ಆರಂಭದ ಎರಡು ಪಂದ್ಯಗಳಲ್ಲಿ ಭಾರೀ ಅಂತರದ ಜಯಭೇರಿ ಬಾರಿಸಿರುವ ಕರ್ನಾಟಕ ತಂಡವು ಬುಧವಾರದಿಂದ ಆರಂಭವಾದ ಮೂರನೇ ಪಂದ್ಯದಲ್ಲೂ ಮಹಾರಾಷ್ಟ್ರ ವಿರುದ್ಧವೂ ಅಮೋಘ ಆಟದ ಆರಂಭ ನೀಡಿದ್ದು ಸ್ಪಷ್ಟ ಮೇಲುಗೈ ಸಾಧಿಸುವತ್ತ ಹೊರಟಿದೆ.

Advertisement

ವಿನಯ್‌ ಕುಮಾರ್‌ ಅವರ ಮಾರಕ ದಾಳಿಗೆ ತತ್ತರಿಸಿದ ಮಹಾರಾಷ್ಟ್ರ ತಂಡವು ಒಂದು ಹಂತದಲ್ಲಿ ಕೇವಲ 28 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಗೆ ಬಿದ್ದರೂ ರಾಹುಲ್‌ ತ್ರಿಪಾಠಿ ಅವರ ಜವಾಬ್ದಾರಿಯ ಶತಕದಿಂದಾಗಿ 245 ರನ್‌ ಗಳಿಸಿ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಮತ್ತೆ ಭರ್ಜರಿ ಆಟವಾಡಿದ ಕರ್ನಾಟಕ ದಿನದಾಟದ ಅಂತ್ಯಕ್ಕೆ ವಿಕೆಟ್‌ ಕಳೆದುಕೊಳ್ಳದೇ 117 ರನ್‌ ಗಳಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಕರ್ನಾಟಕಕ್ಕೆ ಇನ್ನು 128  ರನ್‌ ಬೇಕಾಗಿದೆ.

ಇನ್ನಿಂಗ್ಸ್‌ ಆರಂಭಿಸಿದ ಆರ್‌. ಸಮರ್ಥ್ ಮತ್ತು ಮಯಾಂಕ್‌ ಅಗರ್ವಾಲ್‌ ಮುರಿಯದ ಮೊದಲ ವಿಕೆಟಿಗೆ ಈಗಾಗಲೇ 117 ರನ್‌ ಪೇರಿಸಿದ್ದಾರೆ. ಅವರಿಬ್ಬರು ಒಂದೇ ರೀತಿಯ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಅಗರ್ವಾಲ್‌ 94 ಎಸೆತ ಎದುರಿಸಿದ್ದು 6 ಬೌಂಡರಿ ನೆರವಿನಿಂದ 50 ರನ್‌ ಗಳಿಸಿದ್ದರೆ ಸಮರ್ಥ್ 93 ಎಸೆತಗಳಿಂದ ಆರು ಬೌಂಡರಿ ನೆರವಿನಿಂದ 47 ರನ್‌ ಗಳಿಸಿ ಆಡುತ್ತಿದ್ದಾರೆ. 

ವಿನಯ್‌ ಮಾರಕ ದಾಳಿ
ಈ ಮೊದಲು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿದ ಕರ್ನಾಟಕ ಭರ್ಜರಿ ಲಾಭ ಪಡೆಯಿತು. ವಿನಯ್‌ ಕುಮಾರ್‌ ಮಾರಕ ದಾಳಿಗೆ ಮಹಾರಾಷ್ಟ್ರ ಹಠಾತ್‌ ಕುಸಿಯಿತು. ಮೊದಲ 12.2 ಓವರ್‌ ಮುಗಿದಾಗ ಕೇವಲ 28 ರನ್ನಿಗೆ ಐದು ವಿಕೆಟ್‌ ಕಳೆದುಕೊಂಡು ಮಹಾರಾಷ್ಟ್ರ ಒದ್ದಾಡುತ್ತಿತ್ತು ಮತ್ತು ಅಲ್ಪ ಮೊತ್ತಕ್ಕೆ ಆಲೌಟಾಗುವ ಪರಿಸ್ಥಿತಿ ಎದುರಾಯಿತು. ಆಗಲೇ ವಿನಯ್‌ ನಾಲ್ಕು ವಿಕೆಟ್‌ ಕಬಳಿಸಿದ್ದರು. 

ಈ ಹಂತದಲ್ಲಿ ನೌಶದ್‌ ಶೇಖ್‌ ಅವರನ್ನು ಸೇರಿಕೊಂಡ ರಾಹುಲ್‌ ತ್ರಿಪಾಠಿ ಜವಾಬ್ದಾರಿಯ ಆಟವಾಡಿ ತಂಡವನ್ನು ಶೋಚನೀಯ ಸ್ಥಿತಿಯಿಂದ ಪಾರು ಮಾಡಲು ಪ್ರಯತ್ನಿಸಿದರು. ವಿನಯ್‌ ಸಹಿತ ಕರ್ನಾಟಕದ ದಾಳಿಯನ್ನು ದಿಟ್ಟವಾಗಿ ಎದುರಿಸಲು ಯಶಸ್ವಿಯಾದ ಅವರಿಬ್ಬರು ಆರನೇ ವಿಕೆಟಿಗೆ 147 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟಾಗುವ ಸಾಧ್ಯತೆಯನ್ನು ತಪ್ಪಿಸಿದರು. 

Advertisement

ನೌಶದ್‌-ತ್ರಿಪಾಠಿ ಜತೆಯಾಟಯನ್ನು ದೇಶಪಾಂಡೆ ಮುರಿದರು. ಮೊದಲಿಗರಾಗಿ ಔಟಾದ ನೌಶದ್‌ 108 ಎಸೆತಗಳಿಂದ 69 ರನ್‌ ಹೊಡೆದರು. ಆಬಳಿಕ ಶತಕ ಸಿಡಿಸಿದ ತ್ರಿಪಾಠಿ ಅವರು ಸ್ಟುವರ್ಟ್‌ ಬಿನ್ನಿಗೆ ವಿಕೆಟ್‌ ಒಪ್ಪಿಸಿದರು. 114 ಎಸೆತ ಎದುರಿಸಿದ ಅವರು 13 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 120 ರನ್‌ ಹೊಡೆದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದಿಬ್ಬರು ಎರಡಂಕೆಯ ಮೊತ್ತ ಗಳಿಸಿದ್ದರೂ ಅವರು ಅನುಕ್ರಮವಾಗಿ 10 ಮತ್ತು 12 ರನ್‌ ಮಾತ್ರ ಹೊಡೆದಿದ್ದರು. ಮಾರಕ ದಾಳಿ ನಡೆಸಿದ ವಿನಯ್‌ ಕುಮಾರ್‌ 59 ರನ್ನಿಗೆ 6 ವಿಕೆಟ್‌ ಕಿತ್ತರೆ ಪವನ್‌ ದೇಶಪಾಂಡೆ 38 ರನ್ನಿಗೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: 
ಮಹಾರಾಷ್ಟ್ರ ಪ್ರಥಮ ಇನ್ನಿಂಗ್ಸ್‌ 245 (ನೌಶದ್‌ ಶೇಖ್‌ 69, ರಾಹುಲ್‌ ತ್ರಿಪಾಠಿ 120, ವಿನಯ್‌ ಕುಮಾರ್‌ 59ಕ್ಕೆ 6, ಪವನ್‌ ದೇಶ್‌ಪಾಂಡೆ 38ಕ್ಕೆ 2); ಕರ್ನಾಟಕ ಪ್ರಥಮ ಇನ್ನಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೇ 117 (ಆರ್‌. ಸಮರ್ಥ್ 47 ಬ್ಯಾಟಿಂಗ್‌, ಮಯಾಂಕ್‌ ಅಗರ್ವಾಲ್‌ 50 ಬ್ಯಾಟಿಂಗ್‌).

Advertisement

Udayavani is now on Telegram. Click here to join our channel and stay updated with the latest news.

Next