Advertisement

Karnataka: ಜೂ. 22ರಂದು ಬಂದ್‌? ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಕೆಸಿಸಿಐ ಕರೆ

01:34 AM Jun 19, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೂತನ ಸರಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ವಿದ್ಯುತ್‌ ದರ ಏರಿಕೆಯಾಗಿರುವುದರಿಂದ ಕೈಗಾರಿಕೆಗಳಿಗೆ ಬರೆ ಎಳೆದಂತಾಗಿದ್ದು, ಇದನ್ನು ಖಂಡಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ)ಜೂ. 22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ಇದಕ್ಕೆ ರಾಜ್ಯದಲ್ಲಿರುವ ಹಲವಾರು ಕೈಗಾರಿಕೆಗಳು, ಉದ್ಯಮಿಗಳು ಬೆಂಬಲ ಸೂಚಿಸಿದ್ದಾರೆ.

Advertisement

ಈ ಮಧ್ಯೆ ಫೆಡರೇಶನ್‌ ಆಫ್ ಕರ್ನಾಟಕ ಚೇಂಬರ್ಸ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ (ಎಫ್ಕೆಸಿಸಿಐ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿವೆ. ಇಂಧನ ದರ ಹೆಚ್ಚಳ ದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾಸಿಯಾ, ಎಫ್ಕೆಸಿಸಿಐ ಹಾಗೂ ಇನ್ನಿತರ ಒಕ್ಕೂಟಗಳ ಮುಖ್ಯಸ್ಥರ ಜತೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಜೂ. 20ರಂದು ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಯಾವೆಲ್ಲ ಸಂಘಟನೆ ಬೆಂಬಲ, ಎಲ್ಲೆಲ್ಲಿ ಬಂದ್‌?
ಹುಬ್ಬಳ್ಳಿಯ ಕೈಗಾರಿಕೆ ಒಕ್ಕೂಟಗಳು, ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳು, ಥಾರಿಯಾಲ್‌ ಇಂಡಸ್ಟ್ರಿಯಲ್‌ ಏರಿಯಾ, ಬೆಳಗಾಂ ಚೇಂಬರ್‌ ಆಫ್ ಕಾಮರ್ಸ್‌ ಹಾಗೂ ಫೌಂಡರಿ ಕ್ಲಸ್ಟರ್‌ ಸೇರಿದಂತೆ ಹತ್ತಾರು ಕೈಗಾರಿಕೆಗಳು ಮತ್ತು ಕೈಗಾರಿಕಾ ಸಂಘಗಳು ಬಂದ್‌ಗೆ ಬೆಂಬಲ ನೀಡಲಿವೆ ಎಂದು ಕರ್ನಾಟಕ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಉಪಾಧ್ಯಕ್ಷ ಸಂದೀಪ್‌ ಬಿದಸರಿಯಾ ಸ್ಪಷ್ಟಪಡಿಸಿದ್ದಾರೆ.
ಕೆಸಿಸಿಐ, ಜಿಲ್ಲೆಗಳ ಡಿಸ್ಟ್ರಿಕ್ಟ್ ಚೇಂಬರ್‌ ಆಫ್ ಕಾಮರ್ಸ್‌ ಸಂಘಟನೆಗಳು 25 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ಕೊಡು ವುದಾಗಿ ಹೇಳಿವೆ.

ಗದಗ, ವಿಜಯಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಶಿರಸಿ, ಕಾರವಾರ, ಬೀದರ್‌, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಯಾದಗಿರಿ, ಚಿತ್ರದುರ್ಗ, ಕಲ್ಯಾಣ ಕರ್ನಾಟಕ, ಹಾವೇರಿ, ಹಾಸನ, ಬಳ್ಳಾರಿ, ಬೆಳಗಾವಿ ಹಾಗೂ ಇನ್ನಿತರ ಕಡೆಗಳಲ್ಲಿರುವ ಕೈಗಾರಿಕಾ ಸಂಘಗಳು ಬೆಂಬಲ ಘೋಷಿಸಿವೆ ಎನ್ನಲಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲೂ ಉದ್ಯಮಿಗಳು ಸಂಪರ್ಕದಲ್ಲಿದ್ದು, ಬಂದ್‌ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಈ ಹಿಂದಿನ ವಿದ್ಯುತ್‌ ದರಕ್ಕೆ ಹೋಲಿಸಿದರೆ ಈಗ ದರ ಶೇ. 35ರಷ್ಟು ಹೆಚ್ಚಾಗಿದೆ. ಇದರಿಂದ ಭಾರೀ ಸಮಸ್ಯೆಯಾಗಿದೆ. ಎಲ್ಲರೂ ಬಂದ್‌ಗೆ ಸಹಕಾರ ನೀಡಬೇಕು ಎಂದು ಪದಾಧಿಕಾರಿಯೊಬ್ಬರು ವಿವರಿಸಿದ್ದಾರೆ.

Advertisement

ಬಂದ್‌ ರೂಪುರೇಷೆ
ಕರ್ನಾಟಕದ ಬಹುತೇಕ ಎಲ್ಲ ಬಗೆಯ ಕಾರ್ಖಾನೆಗಳು, ಅಂಗಡಿಗಳು ಬಂದ್‌ ಆಗಲಿವೆ. ಈಗಾಗಲೇ ರಾಜ್ಯದ ವಾಣಿಜ್ಯ ಸಂಘಟನೆಗಳ ಮುಖಂಡರಿಗೆ ಬಂದ್‌ಗೆ ಬೆಂಬಲ ಕೊಡುವಂತೆ ಮನವಿ ಮಾಡಿದ್ದೇವೆ. ಅವರು ಬೆಂಬಲ ಸೂಚಿಸುವ ಭರವಸೆಯಿದೆ.

ಉಳಿದಂತೆ ವಾಹನ ಸಂಚಾರ, ಅಗತ್ಯ ವಸ್ತುಗಳು, ಅಗತ್ಯ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ನಾವು ಒತ್ತಾಯಪೂರ್ವಕವಾಗಿ ಯಾವುದನ್ನೂ ಬಂದ್‌ ಮಾಡುವುದಿಲ್ಲ. ತೊಂದರೆ ಕೊಡುವುದಿಲ್ಲ. ಸಾರ್ವಜನಿಕ ರಿಗೆ ಒಂದು ದಿನದ ಮಟ್ಟಿಗೆ ಕೊಂಚ ಅಡಚಣೆ ಉಂಟಾಗ ಬಹುದು. ಆದರೆ ನಮ್ಮ ಸಮಸ್ಯೆ ಬಗೆಹರಿಯಬೇಕಾದರೆ ಬಂದ್‌ ಅನಿವಾರ್ಯವಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಸರಕಾರ ಆಶ್ವಾಸನೆ ಕೊಟ್ಟರೆ ವಾಪಸ್‌
ಕರ್ನಾಟಕ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಉಪಾಧ್ಯಕ್ಷ ಸಂದೀಪ್‌ ಬಿದಸರಿಯಾ “ಉದಯವಾಣಿ’ ಜತೆಗೆ ಮಾತನಾಡಿ, ವಿದ್ಯುತ್‌ ದರ ಹೆಚ್ಚಳವಾಗಿದೆ. ಸರಕಾರವು ನಮ್ಮ ಭರವಸೆ ಈಡೇರಿಸುವ ಆಶ್ವಾಸನೆ ಕೊಟ್ಟರೆ ಬಂದ್‌ ವಾಪಾಸ್‌ ತೆಗೆದುಕೊಳ್ಳುತ್ತೇವೆ. ಕೈಗಾರಿಕೋದ್ಯಮದಲ್ಲಿ ವಿದ್ಯುತ್‌ ದರ ಶೇ. 30ರಿಂದ 40ರಷ್ಟು ಹೆಚ್ಚಾಗಿವೆ. ಅದರ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಬಳಿಯೂ ಚರ್ಚಿಸಿದ್ದೇವೆ. ಸರಕಾರಕ್ಕೆ ಮನವಿ ಮಾಡಿ 9 ದಿನ ಆದರೂ ಪ್ರತಿಕ್ರಿಯೆ ಬಂದಿಲ್ಲ. ಸರಕಾರದ ಗಮನ ಸೆಳೆಯಲು ಬಂದ್‌ ಮಾಡುತ್ತೇವೆ ಎಂದು ಕೆಸಿಸಿಐ ಪದಾಧಿಕಾರಿಗಳು ಹೇಳುತ್ತಾರೆ.

ಗೃಹ ಜ್ಯೋತಿಗೆ ಸರ್ವರ್‌ “ವಿಘ್ನ’
ಕಾಂಗ್ರೆಸ್‌ ಸರಕಾರದ ಮತ್ತೂಂದು ಬಹು ನಿರೀಕ್ಷಿತ 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆಗೆ ಅರ್ಜಿ ಸಲ್ಲಿಸು ವಿಕೆಗೆ ರವಿವಾರ ಚಾಲನೆ ದೊರೆ ತಿದೆ. ಆದರೆ ಕೆಲವು ಕಡೆ ಸೇವಾ ಸಿಂಧು ಪೋರ್ಟಲ್‌ ಸರ್ವರ್‌ ಡೌನ್‌ ಆಗಿ ತೊಂದರೆ ಯಾ ಯಿತು. ವೆಬ್‌ಸೈಟ್‌ ತೆರೆದ ಸ್ವಲ್ಪ ಹೊತ್ತಲ್ಲೇ ಮತ್ತೆ ಕ್ಲೋಸ್‌ ಆಗು ತ್ತಿತ್ತು. ಹಾಗಾಗಿ ಆರಂಭದ ದಿನ ಬಹು ತೇಕ ಅರ್ಜಿ ಸ್ವೀಕಾರ ಸಾಧ್ಯವಾಗಿಲ್ಲ.

ವಿದ್ಯುತ್‌ ದರ ಹೆಚ್ಚಳದ ಬಗ್ಗೆ ಕೈಗಾರಿಕೋದ್ಯಮಿಗಳ ಸಂಘಗಳ ಜತೆಗೆ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಎರಡು ತಿಂಗಳ ಬಿಲ್‌ ಒಟ್ಟಿಗೆ ಕೊಟ್ಟಿದ್ದರಿಂದ ಹೆಚ್ಚಾದಂತೆ ಕಾಣಿಸುತ್ತಿದೆ. ಮುಂದಿನ ತಿಂಗಳಿನಿಂದ ಬಿಲ್‌ ಕಡಿಮೆ ಆಗಲಿದೆ. ವಾಸ್ತವ ವಿಚಾರ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರಿಗೆ ವಾಸ್ತವ ಸ್ಥಿತಿ ಅರ್ಥವಾಗಿದೆ ಅಂದುಕೊಂಡಿದ್ದೇನೆ. ನಾನೂ ಅವರನ್ನು ಕರೆದು ಮಾತನಾಡಿಸುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next