ಬೆಂಗಳೂರು: ನೆರೆಯ ಕೇರಳದಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆ ರಾಜ್ಯದಲ್ಲಿಯೂ ಮುಂಜಾಗ್ರತೆ ವಹಿಸಲು ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಮಠಕ್ಕೆ ನೀರು ನುಗ್ಗಿ ಅವಾಂತರ
ಸುತ್ತೋಲೆಯಲ್ಲಿ ಕೇರಳ ಗಡಿ ಭಾಗದ ಜಿಲ್ಲೆಗಳು ಸೇರಿದಂತೆ ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ. ಕೋವಿಡ್ ಸೋಂಕು ನಡುವೆ ಝೀಕಾ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದೆ.
ಪ್ರಮುಖವಾಗಿ ಸೊಳ್ಳೆ ಮೂಲಕ ಸೋಂಕು ಹರಡಲಿದ್ದು, ಸದ್ಯ ರಾಜ್ಯದಲ್ಲಿ ಮುಂಗಾರು ಇದೆ. ಹೀಗಾಗಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರ ನೆರವಿನೊಂದಿಗೆ ಗ್ರಾಮ ಮತ್ತು ನಗರ ಮಟ್ಟದಲ್ಲಿ ಸೊಳ್ಳೆಗಳ ಹೆಚ್ಚಳವಾಗದಂತೆ ಮುಂಜಾಗ್ರತಾಕ್ರಮ ವಹಿಸಬೇಕು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಸ್ಥಳೀಯ ಆಡಳಿತ ಸಂಸ್ಥೆಗಳ ನೆರವಿನೊಂದಿಗೆ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಕೋವಿಡ್ ಆತಂಕದ ನಡುವೆಯೇ 14 ಝೀಕಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಏತನ್ಮಧ್ಯೆ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮತ್ತು ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಕೇರಳಕ್ಕೆ ಆರೋಗ್ಯ ಪರಿಣತರ ತಂಡವನ್ನು ಕ್ಷಿಪ್ರವಾಗಿ ಕಳುಹಿಸಿ ಪರಿಸ್ಥಿತಿ ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದ್ದರು.