ಬಿಟ್ ಕಾಯಿನ್ ಹಗರಣ ಸಾಕಷ್ಟು ಸದ್ದು ಮಾಡಿದ ಬಳಿಕ ಈಗ ಮರು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಸಾಕ್ಷ್ಯ ಕಲೆ ಹಾಕುವುದು ಸವಾಲಾಗಿದೆ. ಹೀಗಾಗಿ ಇಸ್ರೇಲ್‌ನ ತನಿಖಾ ಸಂಸ್ಥೆಯನ್ನು ಸಿಐಡಿ ಪೊಲೀಸರು ಸಂಪರ್ಕಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
ಉಗ್ರರಿಗೆ ಸಂದಾಯವಾಗಬೇಕಿದ್ದ ಸಾಕಷ್ಟು ಬಿಟ್ ಕಾಯಿನ್‌ಗಳನ್ನು ಇಸ್ರೇಲ್ ರಕ್ಷಣ ಇಲಾಖೆ ವಶಕ್ಕೆ ಪಡೆದಿತ್ತು. ಇಸ್ರೇಲ್‌ನ ನ್ಯಾಶನಲ್ ಬ್ಯೂರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ತನಿಖಾ ಸಂಸ್ಥೆಯು ಹಮಾಸ್ ಉಗ್ರ ಸಂಘಟನೆ ಸೇರಿದ ಹಲವು ಕ್ರಿಪ್ಟೋ ವ್ಯಾಲೆಟ್‌ಗಳನ್ನು ವಶಕ್ಕೆ ಪಡೆದಿತ್ತು. ಇಸ್ರೇಲ್ ರಕ್ಷಣ ಇಲಾಖೆಯು ಬಿಟ್ ಕಾಯಿನ್ ಅವ್ಯವಹಾರದ ಬಗ್ಗೆ ದಿಲ್ಲಿ ಪೊಲೀಸರಿಗೂ ಕಳೆದ ವರ್ಷ ಮಾಹಿತಿ ನೀಡಿತ್ತು. ಕ್ರಿಪ್ಟೋ ವಾಲೆಟ್ ವಶಪಡಿಸಿಕೊಳ್ಳುವಲ್ಲಿ ಇಸ್ರೇಲ್ ಸಾಕಷ್ಟು ನೈಪುಣ್ಯ ಹೊಂದಿದೆ.
ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಜಪ್ತಿ ಮಾಡಲು ಬೇಕಾದ ತಂತ್ರಜ್ಞಾನದ ಕೊರತೆ ಇದೆ. ಹಗರಣದ ತನಿಖೆ ನಡೆಸಿ ಸೂಕ್ತ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸುವುದು ಸುಲಭದ ಮಾತಲ್ಲ. ಕರ್ನಾಟಕ ಹೊರತುಪಡಿಸಿ ದೇಶದ ಬೇರೆ ರಾಜ್ಯಗಳಲ್ಲಿ ಕ್ರಿಪ್ಟೋ ಕರೆನ್ಸಿ ಹಗರಣದ ಪ್ರಕರಣಗಳು ನಡೆದಿರುವುದು ವಿರಳ. ಈ ಎಲ್ಲ ಕಾರಣಗಳಿಂದ ಕರ್ನಾಟಕ ಸಿಐಡಿ ಪೊಲೀಸರು ಇಸ್ರೇಲ್ ದೇಶದ ಸಹಾಯ ಕೇಳುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ಬೇರೆ ತನಿಖಾ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಗೃಹ ಸಚಿವರೂ ಈ ಹಿಂದೆ ತಿಳಿಸಿದ್ದರು. ಬೆಳಕಿಗೆ ಬಂದದ್ದು ಹೇಗೆ?
2021ರಲ್ಲಿ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಸಿಕ್ಕಿಬಿದ್ದಿದ್ದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಬಳಿ 37ಕ್ಕೂ ಹೆಚ್ಚು ಬಿಟ್‌ಕಾಯಿನ್ ಜಪ್ತಿ ಮಾಡಲಾಗಿದೆ. ಬಿಟ್‌ಕಾಯಿನ್ ಹಗರಣದಲ್ಲಿ ಕೋಟ್ಯಂತರ ರೂ. ಲೂಟಿ ಹೊಡೆಯಲಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ಈಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರ ಮರು ತನಿಖೆ ನಡೆಸಲು ವಿವಿಧ ತನಿಖಾ ಏಜೆನ್ಸಿಗಳ ಮೊರೆ ಹೋಗಲು ನಿರ್ಧರಿಸಿದೆ.
Related Articles
ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್ಎಸ್‌ಎಲ್) ಸಿಬಂದಿ ಬಳಸಿಕೊಂಡು ಸಾಕ್ಷ್ಯ ಕಲೆ ಹಾಕಲಾಗುತ್ತಿದೆ. ಬಲವಾದ ಸಾಕ್ಷ್ಯಾಧಾರಗಳು ಸಿಗದಿದ್ದರೆ ವಿದೇಶಿ ತನಿಖಾ ಸಂಸ್ಥೆಗಳ ನೆರವು ಪಡೆಯುವ ಬಗ್ಗೆ ಚಿಂತಿಸಲಾಗಿದೆ ಎಂದು ಸಿಐಡಿ ಮೂಲಗಳು ದೃಢಪಡಿಸಿವೆ.
Advertisement