ಬೆಂಗಳೂರು: “2020ರ ವೇಳೆಗೆ ಕರ್ನಾಟಕ ಹೃದ್ರೋಗಿಗಳ ರಾಜ್ಯವಾಗಲಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಹೃದಯ ಮತ್ತು ಎದೆ ಗೂಡಿನ ಶಸ್ತ್ರ ಚಿಕಿತ್ಸಕರ ಸಂಘದ ಮೂರನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ.
ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.25 ಮಂದಿ ಹೃದ್ರೋಗದಿಂದ ಸಾವಿಗೀಡಾಗುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಇದೇ ರೀತಿ ಮುಂದುವರಿದರೆ 2020ರ ವೇಳೆಗೆ ಕರ್ನಾಟಕ ಹೃದ್ರೋಗಿಗಳ ರಾಜ್ಯವಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ನಾಲ್ಕರಲ್ಲಿ ಒಂದು ಭಾಗದಷ್ಟು ಜನರು 40ರ ಪ್ರಾಯದಲ್ಲೇ ಮೃತಪಡುತ್ತಿದ್ದಾರೆ. ಮಧುಮೇಹ ಹಾಗೂ ರಕ್ತದೊತ್ತಡದಿಂದ ಹೆಚ್ಚು ಯುವಜನರ ಸಾವು ಸಂಭವಿಸುತ್ತಿದೆ ಎಂದು ತಿಳಿದು ಬಂದಿದೆ. ಆಧುನಿಕ ಜೀವನ ಶೈಲಿಯು ಪ್ರಾಯದಲ್ಲೇ ಕಾಯಿಲೆ ಬರಲು ಹಾಗೂ ಸಾವನ್ನಪ್ಪಲು ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಯುಗಲ್ ಮಿಶ್ರಾ, ಸಂಘಟನಾ ಕಾರ್ಯದರ್ಶಿ ಡಾ.ಪ್ರತ್ಯಕಿ ನಂಬಲ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಡಾ. ವಿವೇಕ್ ಜವಳಿ ಹಾಜರಿದ್ದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ದೇಶ ಮತ್ತು ವಿದೇಶದಿಂದ ನೂರಾರು ಹೃದಯಶಸ್ತ್ರ ಚಿಕಿತ್ಸಕರು ಭಾಗವಹಿಸಿದ್ದರು.
ತಜ್ಞರು ನೀಡಿದ ಮರುಜನ್ಮ: ನಾನು ಇಂದು ಈ ಕಾರ್ಯಕ್ರಮದಲ್ಲಿ ನಿಂತು ಮಾತನಾಡುತ್ತಿದ್ದೇನೆ ಮತ್ತು ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಸೇವೆ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ, ಹೃದಯ ತಜ್ಞರು ನೀಡಿದ ಮರು ಜನ್ಮ’ ಎಂದು ಹೇಳುವ ಮೂಲಕ ತಮಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಶ್ಲಾ ಸಿದರು.
ಹೃದ್ರೋಗಕ್ಕೆ ಬಡವರು ಶ್ರೀಮಂತರು ಎಂಬ ಭೇದವಿಲ್ಲ. ಬೆಂಗಳೂರಿನಲ್ಲಿ ಅತ್ಯುತ್ತಮ ಹೃದ್ರೋಗ ಚಿಕಿತ್ಸಾ ಕೇಂದ್ರಗಳಿವೆ. ಅಪೋಲೊ ಆಸ್ಪತ್ರೆ ದೇಶದಲ್ಲಿ ಮಿನಿಮಲ್ ಇನ್ ವ್ಯಾಸಿವ್ ಕಾರ್ಡಿಯೋವ್ಯಾಸ್ಕಾಲರ್ ಚಿಕಿತ್ಸೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.