Advertisement

ಕರ್ನಾಟಕ ಮುಂದಿನ ಎಲೆಕ್ಟ್ರಿಕ್‌ ವಾಹನ ರಾಜಧಾನಿ!

06:00 AM Sep 17, 2017 | |

ಬೆಂಗಳೂರು: ಪರಿಸರಕ್ಕೆ ಮಾರಕವಾದ ತೈಲ ಆಧಾರಿತ ವಾಹನಗಳಿಗಿಂತ ಪರಿಸರಸ್ನೇಹಿ ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ವಿಶೇಷ ನೀತಿ ರೂಪಿಸಿ “ದೇಶದ ಎಲೆಕ್ಟ್ರಿಕಲ್‌ ವಾಹನಗಳ ರಾಜಧಾನಿ’ ಎಂಬ ಹೆಗ್ಗಳಿಕೆ ಪಡೆಯುವತ್ತ ದಾಪುಗಾಲು ಇಟ್ಟಿದೆ.

Advertisement

ದೇಶದಲ್ಲಿ 2031ರ ವೇಳೆಗೆ ಬಹುಪಾಲು ಎಲೆಕ್ಟ್ರಿಕಲ್‌ ವಾಹನಗಳೇ ಬಳಕೆಯಲ್ಲಿರಬೇಕು ಎಂಬ ದೂರದೃಷ್ಟಿಯೊಂದಿಗೆ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್‌ ವಾಹನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಇದಕ್ಕೆಂದೇ ವಿಶೇಷ ನೀತಿ ರೂಪಿಸಿದೆ. ಆ ಮೂಲಕ ಪರಿಸರಸ್ನೇಹಿ ವಾಹನ ಬಳಕೆಗೆ ಪ್ರೋತ್ಸಾಹಿಸುವ ಜತೆಗೆ ರಾಜ್ಯಕ್ಕೆ 31,000 ಕೋಟಿ ರೂ. ಬಂಡವಾಳ ಆಕರ್ಷಿಸಿ 55,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವುದು ವಿಶೇಷ.

“ಎಲೆಕ್ಟ್ರಿಕಲ್‌ ವೆಹಿಕಲ್‌ ಆ್ಯಂಡ್‌ ಎನರ್ಜಿ ಸ್ಟೋರೇಜ್‌ ಪಾಲಿಸಿ- 2017’ಕ್ಕೆ ಇತ್ತೀಚೆಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಎಲೆಕ್ಟ್ರಾನಿಕ್‌ ವಾಹನಗಳ ತಯಾರಿಕೆ ಕ್ಷೇತ್ರದ ಹೂಡಿಕೆಗೆ ಕರ್ನಾಟಕ ಸೂಕ್ತವೆಂದು ತೋರುವ ಜತೆಗೆ ಸುಸ್ಥಿರ ಅಭಿವೃದ್ಧಿಗೆ ನೆರವಾಗುವುದು ನೀತಿಯ ಉದ್ದೇಶವಾಗಿದೆ. ಬೃಹತ್‌ ಮೊತ್ತದ ಬಂಡವಾಳ ಆಕರ್ಷಿಸಲು ಸಿದ್ಧತೆ ನಡೆಸಿರುವ ಸರ್ಕಾರ ಹೂಡಿಕೆದಾರರಿಗೆ ಸಾಕಷ್ಟು ರಿಯಾಯಿತಿ , ಉತ್ತೇಜನಗಳನ್ನು ಪ್ರಕಟಿಸಿದೆ.

ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಲಘು ವಾಹನಗಳು ಸದ್ಯ ಬಳಕೆಯಲ್ಲಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹ ಎಲೆಕ್ಟ್ರಿಕಲ್‌ ಬಸ್‌ಗಳನ್ನೇ ರಸ್ತೆಗಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲ್ಲ ಬಗೆಯ ವಾಹನಗಳು ಎಲೆಕ್ಟ್ರಿಕ್‌ ಆಗುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಿಸ್ತರಣೆಯಾಗಲಿದೆ ಎಂಬುದು ಇಲಾಖೆಯ ನಿರೀಕ್ಷೆ.

ನೀತಿಯ ಉದ್ದೇಶ
ಎಲೆಕ್ಟ್ರಿಕಲ್‌ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಸಿಂಹಪಾಲು ಪಡೆಯುವುದು ನೀತಿಯ ಪ್ರಮುಖ ಉದ್ದೇಶವೆನಿಸಿದೆ. ಬರೋಬ್ಬರಿ 31,000 ಕೋಟಿ ರೂ. ಹೂಡಿಕೆಯೊಂದಿಗೆ 55,000 ಉದ್ಯೋಗ ಸೃಷ್ಟಿಯ ಗುರಿ ಹೊಂದಿದೆ. ಎಲೆಕ್ಟ್ರಿಕಲ್‌ ಸಂಚಾರ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶವನ್ನು ನೀತಿ ಒಳಗೊಂಡಿದೆ.

Advertisement

ನೀತಿಯ ಪ್ರಮುಖ ಅಂಶ
* ಎಲೆಕ್ಟ್ರಿಕಲ್‌ ವಾಹನ ತಯಾರಿಕೆಗೆಂದೇ ವಿಶೇಷ ವಲಯ ನಿರ್ಮಾಣದ ಜತೆಗೆ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನ ಪರೀಕ್ಷೆ, ಅಭಿವೃದ್ಧಿಗೆ ಪೂರಕವಾದ ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ
* ಸಾರ್ವಜನಿಕ, ಖಾಸಗಿ ಸ್ಥಳ ಸೇರಿದಂತೆ ವಿಮಾನನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ ಇತರೆಡೆ ಬಿಐಎಸ್‌ ದರ್ಜೆಯ ಎಲೆಕ್ಟ್ರಿಕಲ್‌ ಚಾರ್ಜಿಂಗ್‌ ಕೇಂದ್ರ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸುವ ಕ್ಷೇತ್ರಕ್ಕೆ ಹೂಡಿಕೆ ಸಬ್ಸಿಡಿ
* ಬಹುಮಹಡಿ ಕಟ್ಟಡಗಳೆನಿಸಿದ ಐಟಿ ಪಾರ್ಕ್‌, ಎಸ್‌ಇಜಡ್‌, ಮಾಲ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಚಾರ್ಜಿಂಗ್‌ ಕೇಂದ್ರಗಳ ನಿರ್ಮಾಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕಟ್ಟಡ ಉಪವಿಧಿಗಳಿಗೆ (ಬೈಲಾ) ತಿದ್ದುಪಡಿ ತರುವುದು
* ವಿಶೇಷವಾಗಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್‌ ವಾಹನ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಕೆಆರ್‌ಇಡಿಎಲ್‌, ಕೆಐಎಡಿಬಿ ಹಾಗೂ ಇತರೆ ಸಂಸ್ಥೆಗಳನ್ನು ಒಳಗೊಂಡಂತೆ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ರಚಿಸಲು ಅವಕಾಶ
* ಡ್ರೈವ್‌ ಟೆಕ್ನಾಲಜಿ, ಬ್ಯಾಟರಿ ಟೆಕ್ನಾಲಜಿ, ಚಾರ್ಜಿಂಗ್‌ ಮೂಲ ಸೌಕರ್ಯ, ನೆಟ್‌ವರ್ಕ್‌ ಕ್ರೋಡೀಕರಣ, ಗುಣಮಟ್ಟ ದೃಢೀಕರಣ, ಪುನರ್ಬಳಕೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ತರಬೇತಿಗೆ ಸಂಬಂಧಪಟ್ಟಂತೆ ಪೂರಕ ಅನುದಾನ ಒದಗಿಸುವ ವ್ಯವಸ್ಥೆ
* ಎಲೆಕ್ಟ್ರಿಕಲ್‌ ವಾಹನ ಬಳಕೆ ಹಾಗೂ ವಹಿವಾಟಿಗೆ ಪೂರಕವಾದ ಅಭಿವೃದ್ಧಿಗೆ ಶ್ರಮಿಸುವ ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ
* “ಕರ್ನಾಟಕ ಎಲೆಕ್ಟ್ರಿಕಲ್‌ ಮೊಬಿಲಿಟಿ ರಿಸರ್ಚ್‌ ಆ್ಯಂಡ್‌ ಇನ್ನೋವೇಷನ್‌ ಸೆಂಟರ್‌’ ಸ್ಥಾಪಿಸಿ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಚಿಂತನೆ
* ಎಲೆಕ್ಟ್ರಿಕಲ್‌ ವಾಹನ ಉದ್ಯಮಕ್ಕೆ ಪೂರಕವಾದ ನುರಿತ ಮಾನವ ಸಂಪನ್ಮೂಲವನ್ನು ರೂಪಿಸಲು ಕೈಗಾರಿಕೆಗಳ ಸಹಯೋಗದಲ್ಲಿ “ಎಲೆಕ್ಟ್ರಿಕಲ್‌ ವಾಹನ ಕೌಶಲ್ಯ ಅಭಿವೃದ್ಧಿ ಕೇಂದ್ರ’ ಸ್ಥಾಪನೆ
* ಬೆಂಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ 2014-19ರ ಕೈಗಾರಿಕಾ ನೀತಿಯಡಿ ಕಾರ್ಯಪ್ರವೃತ್ತವಾಗಿರುವ ಎಲೆಕ್ಟ್ರಿಕಲ್‌ ವಾಹನ ಉತ್ಪಾದನಾ ವಲಯ, ಬ್ಯಾಟರಿ ತಯಾರಿಕೆ, ಚಾರ್ಜಿಂಗ್‌ ಸಾಧನ ತಯಾರಿಕಾ ಉದ್ಯಮಗಳಿಗೆ ಆಕರ್ಷಕ ಉತ್ತೇಜನ, ರಿಯಾಯ್ತಿ ನೀಡಿಕೆ

ಪರಿಸರ ಸ್ನೇಹಿ ಎಲೆಕ್ಟ್ರಿಕಲ್‌ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಜತೆಗೆ ಆ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸುವ ಸಲುವಾಗಿ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರ ಪ್ರತ್ಯೇಕ ನೀತಿ ರೂಪಿಸಿದೆ. ಐಟಿ ನೀತಿ, ಸ್ಟಾರ್ಟ್‌ಅಪ್‌ ನೀತಿ, ಏರೋಸ್ಪೇಸ್‌ ನೀತಿ, ಫಾರ್ಮಾ ನೀತಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ನೀತಿ ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಕರ್ನಾಟಕವನ್ನು ದೇಶದಲ್ಲಿ ಎಲೆಕ್ಟ್ರಿಕಲ್‌ ವಾಹನಗಳ ರಾಜಧಾನಿಯನ್ನಾಗಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಕೈಗೊಳ್ಳಲಾಗುವುದು.
– ಆರ್‌.ವಿ.ದೇಶಪಾಂಡೆ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ

ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ
– ದೇಶದಲ್ಲಿರುವ ಒಟ್ಟು ಎಲೆಕ್ಟ್ರಿಕ್‌ ವೆಹಿಕಲ್‌ಗ‌ಳ ಸಂಖ್ಯೆ – 1,58,010
– ದಿನಕ್ಕೆ ಉಳಿತಾಯವಾಗುವ ಇಂಧನ – 38,312 ಲೀ.
– ಪ್ರತಿ ದಿನ ಕಡಿಮೆಯಾಗುವ ಕಾರ್ಬನ್‌ ಡೈ ಆಕ್ಸೆ„ಡ್‌ ಪ್ರಮಾಣ – 96,188 ಕೆಜಿ
– ಕರ್ನಾಟಕದಲ್ಲಿರುವ ಎಲೆಕ್ಟ್ರಿಕ್‌ ವಾಹನ – 9,786
– ಅತಿ ಹೆಚ್ಚು ಎಲೆಕ್ಟ್ರಿಕ್‌ ವಾಹನ ಇರುವ ರಾಜ್ಯ ಗುಜರಾತ್‌ – 23,666
– ಅತಿ ಕಡಿಮೆ ಎಲೆಕ್ಟ್ರಿಕ್‌ ವಾಹನ ಹೊಂದಿರುವ ರಾಜ್ಯ ಹಿಮಾಚಲ ಪ್ರದೇಶ – 98

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next