Advertisement

ವರ್ಷಾಂತ್ಯಕ್ಕೆ ಕರ್ನಾಟಕ ಬಯಲು ಶೌಚಮುಕ್ತ

01:04 PM Apr 23, 2017 | Team Udayavani |

ಮೈಸೂರು: ಬಯಲು ಶೌಚಮುಕ್ತ ಕರ್ನಾಟಕ ನಿರ್ಮಾಣದ ಗುರಿಯನ್ನು ಈ ವರ್ಷಾಂತ್ಯದ ವೇಳೆಗೆ ತಲುಪಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

Advertisement

ನಗರದ ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿ ವೃದ್ಧಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ‌ ಪ್ರಗತಿ ಪರಿಶೀ ಲನೆ ಹಾಗೂ ಸಮಾಲೋಚನಾ ಸಭೆ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2018ರ ಅಕ್ಟೋಬರ್‌ 2ರ ವೇಳೆಗೆ ಬಯಲು ಶೌಚಮುಕ್ತ ಕರ್ನಾಟಕ ನಿರ್ಮಾಣದ ಗುರಿ ಹಾಕಿ ಕೊಳ್ಳಲಾಗಿತ್ತು. ಆದರೆ, 2018ರ ಮೇ ಗೆ ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳುವುದರಿಂದ ಅವಧಿಗೂ ಮುನ್ನ ಗುರಿ ತಲುಪಲು ನಿರ್ಧರಿಸ ಲಾಗಿದೆ. ಈವರೆಗೆ ಶೇ.71ರಷ್ಟು ಶೌಚಲಯ ನಿರ್ಮಿಸಿಕೊಡಲಾಗಿದ್ದು, ಇನ್ನು ಶೇ.29ರಷ್ಟು ಶೌಚಾಲಯ ನಿರ್ಮಿಸಿಕೊಡಬೇಕಿದೆ.

ಉಳಿದ 9 ತಿಂಗಳಲ್ಲಿ ರಾಜ್ಯದಲ್ಲಿ 25 ಲಕ್ಷ ಶೌಚಾಲಯ ನಿರ್ಮಿಸಿಕೊಡಬೇಕಾಗಿದ್ದು, ಮರಳು ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ನಡುವೆಯೂ ರಾಜ್ಯದ ಎಲ್ಲ ಜಿಪಂ ಸಿಇಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುರಿ ತಲುಪಲಾಗುವುದು. ರಾಜ್ಯದ ಪ್ರತಿ ಕುಟುಂಬಕ್ಕೂ ಶೌಚಾಲಯ ಕಟ್ಟಿಸಿಕೊಡುವ ಮೂಲಕ ಶೌಚಮುಕ್ತ ಕರ್ನಾಟಕ ನಿರ್ಮಾಣ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿ, ರಾಜ್ಯಾದ್ಯಂತ ಈವರೆಗೆ 9250 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಮುಂದಿನ ಆರು ತಿಂಗಳಲ್ಲಿ ಇನ್ನೂ 2500 ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸಾಧನೆಗೆ ಕೇಂದ್ರ ಮೆಚ್ಚುಗೆ: ನರೇಗಾ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳೆದ ವರ್ಷ 6 ಕೋಟಿ ಮಾನವ ದಿನಗಳ ಸೃಷ್ಟಿಯನ್ನು ಹಂಚಿಕೆ ಮಾಡಿತ್ತು. ಇದರಲ್ಲಿ ಡಿಸೆಂಬರ್‌ ಅಂತ್ಯಕ್ಕೆ ಕರ್ನಾಟಕ 5.70 ಕೋಟಿ ಮಾನವ ದಿನ ಸೃಷ್ಟಿ ಮಾಡಿದ್ದರಿಂದ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಈ ವರ್ಷ 10 ಕೋಟಿ ಮಾನವ ದಿನ ಸೃಷ್ಟಿ ಹಂಚಿಕೆ ಮಾಡಿದ್ದು, ಮಾರ್ಚ್‌ 15ಕ್ಕೆ ರಾಜ್ಯದಲ್ಲಿ 9.15 ಕೋಟಿ ಮಾನವ ದಿನ ಸೃಷ್ಟಿ ಮಾಡಿದ್ದು, 2017-18ನೇ ಸಾಲಿಗೆ 12 ಕೋಟಿ ಮಾನವ ದಿನಗಳ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದರು.

Advertisement

ಸಮರ್ಪಕ ಅನುಷ್ಠಾನ: ಮುಖ್ಯಮಂತ್ರಿಯವರ 21 ಅಂಶಗಳ ಕಾರ್ಯಕ್ರಮಗಳನ್ನು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದು, ರಾಜ್ಯದಲ್ಲಿ ಈವರೆಗೆ 2,28,182 ಕುರಿ ಮತ್ತು ದನದ ಕೊಟ್ಟಿಗೆ ನಿರ್ಮಾಣ, 7227 ಆಟದ ಮೈದಾನ ಅಭಿವೃದ್ಧಿ, 3818 ಸ್ಮಶಾನ ಅಭಿವೃದ್ಧಿ, 7235 ಕೃಷಿಕಣ ಪೂರ್ಣ, 219546 ಭೂ ಅಭಿವೃದ್ಧಿ, 47 ಸಾವಿರ ತೋಟಗಳ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ನಮ್ಮ ಹಳ್ಳಿ- ನಮ್ಮ ನೀರು ಕಾರ್ಯಕ್ರಮದಡಿ ಚೆಕ್‌ ಡ್ಯಾಂ ನಿರ್ಮಾಣ, ಕೆರೆ ಪುನಶ್ಚೇತನ ಕಾರ್ಯ, ಬೋರ್‌ವೆಲ್‌ ಮರುಪೂರಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, 66165 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ನೈರ್ಮಲ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next