Advertisement

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

02:35 AM Oct 27, 2021 | Team Udayavani |

ಹೊಸದಿಲ್ಲಿ: ಜಾಗತಿಕ ತಾಪಮಾನ ಹೆಚ್ಚಳದಿಂದ ಅತೀ ಹೆಚ್ಚು ಅಪಾಯಕಾರಿ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸುವ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದೆ. ಕೌನ್ಸಿಲ್‌ ಆನ್‌ ಎನರ್ಜಿ, ಎನ್ವಿರಾನ್‌ಮೆಂಟ್‌ ಹಾಗೂ ವಾಟರ್‌ (ಸಿಇಇಡಬ್ಲ್ಯು) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿದೆ.

Advertisement

“ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 80ರಷ್ಟು ಜನರು, ಜಾಗತಿಕ ಉಷ್ಣಾಂಶ ಏರಿಕೆಯ ಫ‌ಲವಾಗಿ ವಿನಾಶಕಾರಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳು ಕೂಡ ಈ ವಲಯದಲ್ಲಿದ್ದು, ಈ ರಾಜ್ಯಗಳು ಅತಿವೃಷ್ಟಿ, ನೆರೆ ಹಾವಳಿ, ಬರಗಾಲ, ಚಂಡಮಾರುತದಂಥ ವೈಪರೀತ್ಯಗಳಿಗೆ ಹೆಚ್ಚು ಗುರಿಯಾಗಲಿವೆ. ಅಸ್ಸಾಂ, ತೆಲಂಗಾಣದ ಖಮ್ಮಂ, ಒಡಿಶಾದ ಗಜಪತಿ, ಆಂಧ್ರದ ವಿಜಯ ನಗರಂ, ಮಹಾರಾಷ್ಟ್ರದ ಸಾಂಗ್ಲಿ, ತಮಿಳುನಾಡಿನ ಚೆನ್ನೈ ಪ್ರಾಂತ್ಯಗಳು ಕೂಡ ಅಪಾಯಕಾರಿ ವಲಯದಲ್ಲಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ದೇಶದ 640 ಜಿಲ್ಲೆಗಳಲ್ಲಿ 463 ಜಿಲ್ಲೆಗಳು ಅತಿಯಾದ ಪ್ರವಾಹ, ಬರಗಾಲ, ಚಂಡಮಾರುತಕ್ಕೆ ಸುಲಭವಾಗಿ ತುತ್ತಾಗುವ ಜಿಲ್ಲೆಗಳಾಗಿವೆ. ದಕ್ಷಿಣ ಮತ್ತು ಮಧ್ಯಭಾರತದ ಹಲವಾರು ಜಿಲ್ಲೆಗಳು ಭೀಕರ ಬರಗಾಲಕ್ಕೆ, ಪೂರ್ವ, ಪಶ್ಚಿಮ ವಲಯಗಳ ಶೇ. 59ರಿಂದ 41 ಜಿಲ್ಲೆಗಳು ಪ್ರಬಲ ಚಂಡಮಾರುತಕ್ಕೆ ತುತ್ತಾಗುವ ಸಾಧ್ಯತೆಗಳಿವೆ’ ಎಂದು ವರದಿ ತಿಳಿಸಿದೆ. ಗ್ಲಾಸ್ಕೋದಲ್ಲಿ ಅ.31ರಿಂದ ನ.12ರ ವರೆಗೆ ನಡೆಯುವ ಹವಾಮಾನ ಸಮ್ಮೇಳನಕ್ಕೆ ಪೂರಕವಾಗಿ ಈ ವರದಿ ಬಿಡುಗಡೆಯಾಗಿದೆ.

ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಸಿದ್ಧತೆ ಸಾಲದು: ದೇಶದ ಒಟ್ಟಾರೆ ಜಿಲ್ಲೆಗಳ ಶೇ. 63ರಷ್ಟು ಜಿಲ್ಲೆಗಳು ಮಾತ್ರ ಪ್ರಾಕೃತಿಕ ವೈಪರೀತ್ಯ ನಿರ್ವಹಣ ಯೋಜನೆ (ಡಿಡಿಎಂಪಿ) ಹೊಂದಿದ್ದರೂ, ಶೇ. 32 ಜಿಲ್ಲೆಗಳು ಮಾತ್ರ ಇವನ್ನು ಕಾಲಕ್ಕೆ ತಕ್ಕಂತೆ ಪರಿಷ್ಕೃತಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

6.5 ಲಕ್ಷ ಕೋಟಿ ನಷ್ಟ: ಚಂಡಮಾರುತಗಳು, ಪ್ರವಾಹಗಳು ಹಾಗೂ ಬರಗಾಲದಿಂದಾಗಿ ಕಳೆದ ವರ್ಷ ಭಾರತಕ್ಕೆ, 6.5 ಲಕ್ಷ ಕೋಟಿ ರೂ.ಗಳ ನಷ್ಟ ಉಂಟಾಗಿದ್ದು, ಇದೇ ರೀತಿ ನಷ್ಟಕ್ಕೊಳಗಾದ ದೇಶಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ವರದಿ ಹೇಳಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನ ಚೀನಕ್ಕಿದೆ. ಆ ದೇಶ, ಕಳೆದ ವರ್ಷ 17 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದರೆ, ಪಟ್ಟಿಯ ಮೂರನೇ ಸ್ಥಾನದಲ್ಲಿರುವ ಜಪಾನ್‌ 6.2 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

 

Advertisement

Udayavani is now on Telegram. Click here to join our channel and stay updated with the latest news.

Next