Advertisement

ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕವೇ ಮಾದರಿಯಾಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ

11:46 AM Apr 24, 2022 | Team Udayavani |

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಸಾಮಾನ್ಯವೆಂದು ಪರಿಗಣಿಸದೆ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಯಾವ್ಯಾವ ಸಂಘಟನೆ, ಶಕ್ತಿಗಳ ಷಡ್ಯಂತ್ರ, ಹುನ್ನಾರವಿದೆ ಎಂದು ತನಿಖೆ ನಡೆಸಲಾಗುತ್ತಿದೆ. ಆ ಮೂಲಕ ಕರ್ನಾಟಕ ಮಾದರಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಕೋರರು ಪೊಲೀಸ್ ಠಾಣೆಯನ್ನೇ ಗುರಿಯಾಗಿಸಿ ಸಂಚಿತ ದಾಳಿ ನಡೆಸಿದ್ದಾರೆ. ಇದರಲ್ಲಿ ಬೇರೆ ಬೇರೆ ಶಕ್ತಿಗಳ‌ ಕುಮ್ಮಕ್ಕಿನ‌ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ಇದರ ಹಿಂದಿನ ಸಂಚನ್ನು ಬಯಲಿಗೆ ಎಳೆಯಲಾಗುವುದು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಯಾವ ರೀತಿ ಕ್ರಮ ಆಗಿದೆ. ಇಲ್ಲೂ ಕ್ರಮ ಆಗಲಿದೆ. ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕವೇ ಮಾದರಿ ಆಗಲಿದೆ ಎಂದರು.

ಬೆಂಗಳೂರಿನ ಶಾಲೆಗಳಿಗೆ ಬಂದ ಬಾಂಬ್ ಕರೆ ಕುರಿತು ಸಮಗ್ರ ತನಿಖೆ‌ ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು, ಯಾವ ದೇಶದಿಂದ ಬಂದಿದೆ. ಯಾರು ಕಳಿಸಿದ್ದಾರೆ ಎಲ್ಲವನ್ನೂ ತನಿಖೆ ನಡೆಸಲಾಗುವುದು. ಕೆಲವೊಮ್ಮೆ ಇಲ್ಲಿಯೇ ಕೂತು ಕೆಲವರು ಬೇರೆ ದೇಶದಿಂದ ಕಳಿಸಿದಂತೆ ಭಾಸವಾಗುತ್ತೆ. ಇದಕ್ಕೆ ಕೇಂದ್ರದ ಸಹಕಾರದಿಂದ ಇ-ಮೇಲ್‌ ಮೂಲ ಪತ್ತೆ ಹಚ್ಚಲಾಗುವುದು ಎಂದರು.

ಇದನ್ನೂ ಓದಿ:ಮಂಗಳೂರು ವ್ಯಾಪ್ತಿ:ಅರಣ್ಯ ಇಲಾಖೆಯಿಂದ 75 ಸಾವಿರ ಗಿಡ ಹಂಚಿಕೆ

ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ನಾವು ನಿರೀಕ್ಷೆಗಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆ. ಈ ಹಗರಣದಲ್ಲಿ‌ ಭಾಗಿಯಾದವರು ಎಷ್ಟೇ ಪ್ರಭಾವಿ, ಚಾಣಾಕ್ಷ ಇದ್ದರು ಅವರನ್ನು ಬಂಧಿಸಿ ತನಿಖೆಗೊಳಪಡಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಪೊಲೀಸ್ ಇಲಾಖೆ ನ್ಯಾಯ ಸಮ್ಮತವಾಗಲಿದೆ ಎಂದರು.

Advertisement

ಸಂಪುಟ ವಿಸ್ತರಣೆ ನಿರ್ಧಾರವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ. ಈ ಕುರಿತು ಅವರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಹೊರಬೀಳಲಿದೆ ಎಂದರು.

ಕೋವಿಡ್-19ರ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸೂಚನೆ ನೀಡಿದೆ‌‌. ಸ್ವತಃ ಪ್ರಧಾನಮಂತ್ರಿಗಳೇ ಏ. 27ರಂದು ಎಲ್ಲಾ ರಾಜ್ಯಗಳ ವಿಡಿಯೋ ಕಾನ್ಫರೇಷನ್ ಕರೆದಿದ್ದಾರೆ. ಅವರ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ. ತಜ್ಞರು ಈಗಾಗಲೇ ಸೋಂಕು ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next