ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಾದಿ ಸುಗಮ ಮಾಡಿಕೊಡಲು ಪ್ರತ್ಯೇಕವಾಗಿ “ಕರ್ನಾಟಕ ರಾಜ್ಯ ಹೂಡಿಕೆದಾರರ ಪ್ರಾಧಿಕಾರ’ ಅಸ್ತಿತ್ವಕ್ಕೆ ಬರಲಿದ್ದು, ಈ ಸಂಬಂಧ “ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ ಜಾರಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ ಜಾರಿಗೆ ತರಲು ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ವಿಶೇಷ ಹೂಡಿಕೆ ಪ್ರದೇಶಗಳನ್ನು ಸ್ಥಾಪಿಸಲಾಗುವುದು.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೊಸ ಕಾಯ್ದೆ ಜಾರಿಗೆ ಸರ್ಕಾರ ತೀರ್ಮಾನಿಸಿದ್ದು, ಮುಂದಿನ ಸಚಿವ ಸಂಪುಟ ಸಭೆ ಹಾಗೂ ಅಧಿವೇಶನದಲ್ಲಿ ಇದು ಮಂಡನೆಯಾದಾಗ ಹೆಚ್ಚಿನ ವಿವರಗಳು ಸಿಗಲಿವೆ ಎಂದರು.
ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶ, ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಮತ್ತು ನಿರ್ವಹಣೆಗೆ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ತರಲಾಗುವುದು. ಆರಂಭದಲ್ಲಿ ತುಮಕೂರು ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ಪ್ರದೇಶಗಳನ್ನು ಅಧಿಸೂಚಿಸಲಾಗುವುದು. ಇದಕ್ಕಾಗಿ “ಕರ್ನಾಟಕ ರಾಜ್ಯ ಹೂಡಿಕೆ ಪ್ರಾಧಿಕಾರ’ದ ಹೆಸರಲ್ಲಿ ಒಂದು ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುತ್ತದೆ. ಆರಂಭದಲ್ಲಿ ಈ ಪ್ರಾಧಿಕಾರದ ಮೇಲ್ವಿಚಾರಣೆಯನ್ನು ಕೆಎಐಡಿಬಿ ನಡೆಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲೆಲ್ಲಿ ಹೂಡಿಕೆ ಪ್ರದೇಶ ಎಂದು ಗುರುತಿಸಲಾಗುತ್ತದೆಯೋ ಅದರ ಸಂಪೂರ್ಣ ಜವಾಬ್ದಾರಿ ಹೂಡಿಕೆ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಭೂಸ್ವಾಧೀನ, ಕಂದಾಯ ನಿಗದಿ, ತೆರಿಗೆ ಸಂಗ್ರಹ ಎಲ್ಲವನ್ನೂ ಪ್ರಾಧಿಕಾರವೇ ಮಾಡಲಿದೆ. ಪ್ರಾಧಿಕಾರ ಸಂಗ್ರಹಿಸಿ ತೆರಿಗೆಯಲ್ಲಿ ಶೇ.30ರಷ್ಟನ್ನು ವಿಶೇಷ ಹೂಡಿಕೆ ಪ್ರದೇಶದ ವ್ಯಾಪ್ತಿ ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುತ್ತದೆ. ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ನೋಂದಣಿ, ಪರವಾನಿಗೆ, ತೆರಿಗೆ ಮತ್ತಿತರ ವಿಚಾರಗಳಲ್ಲಿ ಆಗುವ ವಿಳಂಬವನ್ನು ಈ ಕಾಯ್ದೆ ಮತ್ತು ಪ್ರಾಧಿಕಾರ ತಪ್ಪಿಸಲಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.