ಬೆಂಗಳೂರು: ಎಲ್ಲಾ ಸಮುದಾಯದ ಮಕ್ಕಳು ಒಟ್ಟಿಗೆ ಒಂದೇ ಕಡೆ ವಿದ್ಯಾಭ್ಯಾಸ ಪಡೆಯುವ ಆಂಗ್ಲ ಮಾಧ್ಯಮದ ‘ಕರ್ನಾಟಕ ವಸತಿ ಶಾಲೆ’ಗಳನ್ನು ಆರಂಭಿಸುವ ಬಗ್ಗೆ ಮುಂಬರುವ ಆಯವ್ಯಯದಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.
ಸಮಾಜ ಕಲ್ಯಾಣ ಇಲಾಖೆಯು ಈ ಸಂಬಂಧ ಪ್ರಸ್ತಾವ ಸಲ್ಲಿಸಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಯೋಜನೆಗೆ ಬಜೆಟ್ನಲ್ಲಿ ಹಸಿರು ನಿಶಾನೆ ತೋರುವ ನಿರೀಕ್ಷೆ ಮೂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ‘ಕರ್ನಾಟಕ ವಸತಿ ಶಾಲೆ’ ಆರಂಭಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದರೂ ಸರ್ಕಾರ ಆರಂಭಿಕವಾಗಿ ಜಿಲ್ಲೆಗೊಂದು ಶಾಲೆ ತೆರೆಯಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಶಾಲೆಗಳಿದ್ದು, ಕ್ರಮವಾಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ನಿರ್ವಹಣೆ ಮಾಡುತ್ತಿವೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಂತಾಗಿದೆ.
ಕರ್ನಾಟಕ ವಸತಿ ಶಾಲೆ: ಆದರೆ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಪೈಕಿ ಬಹುಪಾಲು ಮಕ್ಕಳು ಆಯಾ ಸಮುದಾಯದ ವಸತಿ ಶಾಲೆಗಳಲ್ಲಿ ವ್ಯಾಸಂಗ ಪಡೆಯುತ್ತಾರೆ. ಇದರಿಂದ ಆ ಮಕ್ಕಳು ಇತರ ಸಮುದಾಯದ ಮಕ್ಕಳೊಂದಿಗೆ ಬೆರೆಯುವ ಅವಕಾಶ ಬಹಳ ಕಡಿಮೆ ಎನಿಸಿದೆ. ಹಾಗಾಗಿ, ಮಕ್ಕಳಿಗೆ ಬಾಲ್ಯಾವಸ್ಥೆಯಿಂದಲೇ ಇತರ ಸಮುದಾಯದವರೊಂದಿಗೆ ಅಂತರ ಸೃಷ್ಟಿಯಾಗಲಿದ್ದು, ಇದು ಮುಂದೆ ಅವರ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದು ಅಂತರ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬುದು ಸಮಾಜ ಕಲ್ಯಾಣ ಇಲಾಖೆ ಚಿಂತನೆ.
1ರಿಂದ 10ನೇ ತರಗತಿವರೆಗಿನ ಶಾಲೆ: ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಒಟ್ಟಿಗೆ ಒಂದೇ ಸೂರಿನಡಿ ಕಲಿಯುವ ವಸತಿ ಶಾಲೆ ಆರಂಭಿಸುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಚಿಂತಿಸಿದೆ. ಒಂದರಿಂದ 10ನೇ ತರಗತಿವರೆಗೆ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯನ್ನು ಗರಿಷ್ಠ 500 ವಿದ್ಯಾರ್ಥಿಗಳಿರುವಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದನ್ನು ತೆರೆಯುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮೆರಿಟ್ ಆಧಾರದಲ್ಲಿ ಆಯ್ಕೆ ವ್ಯವಸ್ಥೆ ಕಲ್ಪಿಸಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕಲ್ಪಿಸುವುದರ ಬಗ್ಗೆಯೂ ಪ್ರಸ್ತಾಪಿಸಿದೆ.
ಅನುಪಾತದಡಿ ಅನುದಾನ: ಕರ್ನಾಟಕ ವಸತಿ ಶಾಲೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಆಯ್ದ ಇಲಾಖೆಗಳು ನಿಗದಿತ ಅನುಪಾತದಂತೆ ಭರಿಸುವ ಬಗ್ಗೆಯೂ ಪ್ರಸ್ತಾಪಿಸಿದೆ. ಸಮಾಜ ಕಲ್ಯಾಣ ಇಲಾಖೆ ಶೇ.50, ಹಿಂದುಳಿದ ವರ್ಗಗಳ ಇಲಾಖೆ ಶೇ.25, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶೇ.15 ಹಾಗೂ ಸರ್ಕಾರದಿಂದ ಶೇ.10ರಷ್ಟು ಅನುದಾನ ಭರಿಸಬಹುದು. ಇಲಾಖೆಗಳು ಭರಿಸುವ ಅನುದಾನದ ಪ್ರಮಾಣಕ್ಕನುಗುಣವಾಗಿ ಸೀಟು ಹಂಚಿಕೆಯನ್ನು ಮಾಡಿಕೊಳ್ಳಬಹುದು. ಅನುದಾನ ಪ್ರಮಾಣದ ಏರಿಳಿತಕ್ಕೂ ಅವಕಾಶ ಕಲ್ಪಿಸಿ ಅನುದಾನ ಹೊಂದಿಸಬಹುದು ಎಂದು ಪ್ರಸ್ತಾವದಲ್ಲಿ ತಿಳಿಸಿದೆ.
ಜಿಲ್ಲೆಗೊಂದು ಶಾಲೆ ಘೋಷಣೆ ನಿರೀಕ್ಷೆ
ಸಮಾಜ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಆರ್ಥಿಕ ಇತಿಮಿತಿ ಕಾರಣಕ್ಕೆ ವಿಧಾನಸಭಾ ಕ್ಷೇತ್ರವಾರು ಶಾಲೆ ಆರಂಭಕ್ಕೆ ಬದಲಾಗಿ ಜಿಲ್ಲೆಗೊಂದು ಶಾಲೆ ಆರಂಭಿಸುವ ಬಗ್ಗೆ ಒಲವು ತೋರಿದ್ದಾರೆ. ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಶಾಲೆಗಳ ಸಂಖ್ಯೆ ನಿಗದಿಪಡಿಸಿ ಆರಂಭಕ್ಕೆ ಒಪ್ಪಿಗೆ ನೀಡುವ ಬಗ್ಗೆಯೂ ಚಿಂತಿಸಿದ್ದಾರೆ. ಕರ್ನಾಟಕ ಸಂಯುಕ್ತ ವಸತಿ ಶಾಲೆ ಹೆಸರಿನಲ್ಲಿ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಎಂ. ಕೀರ್ತಿಪ್ರಸಾದ್