Advertisement
ಇದರೊಂದಿಗೆ ಕರ್ನಾಟಕ 3 ಪಂದ್ಯಗಳಲ್ಲಿ ಸತತ 2ನೇ ಡ್ರಾ ಸಾಧಿಸಿತು. ಹುಬ್ಬಳ್ಳಿಯಲ್ಲಿ ನಡೆದಿದ್ದ ಉತ್ತರ ಪ್ರದೇಶ ವಿರುದ್ಧದ ಪಂದ್ಯ ಕೂಡ ಡ್ರಾಗೊಂಡಿತ್ತು. ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಯಿಯನ್ನು ಅವರದೇ ಅಂಗಳದಲ್ಲಿ ಎದುರಿಸಲಿದೆ. ಈ ಪಂದ್ಯ ಜ. 3ರಿಂದ “ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್’ನಲ್ಲಿ ನಡೆಯಲಿದೆ.
ಅಂತಿಮ ದಿನವಾದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 296 ರನ್ ಗಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್ ಲೀಡ್ ಪಡೆದ ಹಿಮಾಚಲ ಗೆಲುವಿಗೆ ಲಭಿಸಿದ ಗೆಲುವಿನ ಗುರಿ 183 ರನ್. ಚಹಾ ವಿರಾಮದ ವೇಳೆ ಹಿಮಾಚಲ 2ಕ್ಕೆ 34 ರನ್ ಮಾಡಿದಾಗ ಪಂದ್ಯ ರೋಚಕ ಅಂತ್ಯ ಕಾಣುವ ಸಾಧ್ಯತೆ ಇತ್ತು. ಆದರೆ ಪಂದ್ಯ ಸ್ಪಷ್ಟ ಫಲಿತಾಂಶ ಕಾಣುವ ಸಾಧ್ಯತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಇತ್ತಂಡಗಳ ನಾಯಕರು ಈ ಹಂತದಲ್ಲೇ ಪಂದ್ಯವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದರು. ವಿ. ಕೌಶಿಕ್ ಘಾತಕ ದಾಳಿ ನಡೆಸಿ ಪ್ರಿಯಾಂಶು ಖಂಡೂರಿ (4) ಮತ್ತು ಸುಮೀತ್ ವರ್ಮ (11) ವಿಕೆಟ್ ಹಾರಿಸಿದ್ದರು. ಮೈಸೂರಿನ ಟ್ರ್ಯಾಕ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದುದರಿಂದ ಕೊನೆಯ ಅವಧಿಯಲ್ಲಿ ಕರ್ನಾಟಕ ಗೆಲುವಿಗೆ ಪ್ರಯತ್ನಿಸಬಹುದಿತ್ತು. ಆದರೆ ಸವಾಲು ತೆಗೆದುಕೊಳ್ಳಲು ಯಾರೂ ಸಿದ್ಧರಿರಲಿಲ್ಲ.
Related Articles
ನಾಟೌಟ್ ಬ್ಯಾಟ್ಸ್‌ಮನ್‌ಗಳಾದ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಮೇಲೆ ಕರ್ನಾಟಕ ಭಾರೀ ನಿರೀಕ್ಷೆ ಇರಿಸಿಕೊಂಡಿತ್ತು. ಆದರೆ ನಾಯರ್ ತಮ್ಮ ಮೊತ್ತಕ್ಕೆ ಎರಡೇ ರನ್ ಸೇರಿಸಿ ಪೆವಿಲಿಯನ್ ಸೇರಿಕೊಂಡರು (64 ರನ್, 160 ಎಸೆತ, 4 ಬೌಂಡರಿ). ಒಂದೇ ರನ್ ಅಂತರದಲ್ಲಿ ಶ್ರೇಯಸ್ ಗೋಪಾಲ್ (1) ವಿಕೆಟ್ ಉರುಳಿತು. ಕರ್ನಾಟಕ 208ಕ್ಕೆ 5 ವಿಕೆಟ್ ಕಳೆದುಕೊಂಡಿತು.
Advertisement
ಇನ್ನೊಂದು ತುದಿಯಲ್ಲಿ ಕ್ರೀಸಿಗೆ ಅಂಟಿಕೊಂಡಿದ್ದ ದೇವದತ್ತ ಪಡಿಕ್ಕಲ್ ಎಚ್ಚರಿಕೆಯ ಆಟವಾಡುತ್ತಿದ್ದರು. ಶತಕದ ನಿರೀಕ್ಷೆಯನ್ನೂ ಮೂಡಿಸಿದರು. ಆದರೆ ಅದೃಷ್ಟ ಕೈಕೊಟ್ಟಿತು. ಕೇವಲ ಒಂದು ರನ್ ಕೊರತೆಯಿಂದ ಅವರು ಸೆಂಚುರಿ ತಪ್ಪಿಸಿಕೊಂಡರು. 99 ರನ್ ಮಾಡಿದ ವೇಳೆ ವೈಭವ್ ಅರೋರಾ ಎಸೆತದಲ್ಲಿ ಲೆಗ್ ಬಿಫೋರ್ ಬಲೆಗೆ ಬಿದ್ದರು (201 ಎಸೆತ, 8 ಬೌಂಡರಿ).ಬಳಿಕ ವಿಕೆಟ್ ಕೀಪರ್ ಬಿ.ಆರ್. ಶರತ್ (42) ಮತ್ತು ಅಭಿಮನ್ಯು ಮಿಥುನ್ (22) ಹಿಮಾಚಲ ದಾಳಿಯನ್ನು ತಡೆದು ನಿಂತ ಕಾರಣ ಕರ್ನಾಟಕದ ಮೊತ್ತ ಮುನ್ನೂರರ ಗಡಿ ಸಮೀಪಿಸಿತು. ಸಂಕ್ಷಿಪ್ತ ಸ್ಕೋರ್: ಕರ್ನಾಟಕ-166 ಮತ್ತು 296 (ಪಡಿಕ್ಕಲ್ 99, ನಾಯರ್ 64, ಶರತ್ 42, ಅಗರ್ವಾಲ್ 34, ಮಿಥುನ್ 22, ಧವನ್ 83ಕ್ಕೆ 5, ದಾಗರ್ 34ಕ್ಕೆ 2, ಅರೋರಾ 66ಕ್ಕೆ 2). ಹಿ.ಪ್ರದೇಶ-280 ಮತ್ತು 3 ವಿಕೆಟಿಗೆ 34.