Advertisement

ಸರಕಾರಿ ಶಾಲೆಗಳ ಮೂಲಸೌಕರ್ಯ ದುಃಸ್ಥಿತಿಗೆ ಹೈಕೋರ್ಟ್‌ ಕಳವಳ

09:30 PM Jun 22, 2023 | Team Udayavani |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ದುಃಸ್ಥಿತಿ ಆಘಾತ ತಂದಿದ್ದು, ಮನಸ್ಸನ್ನು ಘಾಸಿಗೊಳಿಸಿದೆ. ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಸೌಕರ್ಯಗಳೂ ಸಮರ್ಪಕವಾಗಿಲ್ಲದ‌ ಸರಕಾರಿ ಶಾಲೆಗಳಿಂದ ನಾವು ಎಂತಹ ಸಮಾಜವನ್ನು ಕಟ್ಟುತ್ತಿದ್ದೇವೆ’ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

Advertisement

ಶಾಲೆಗಳಿಂದ ಹೊರಗುಳಿದ ಮಕ್ಕಳ ವಿಚಾರವಾಗಿ 2013ರಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಎಂ.ಜಿ.ಎಸ್‌ ಕಮಾಲ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರಕಾರ ಸಲ್ಲಿಸಿದ ವರದಿಯಲ್ಲಿ ಸರಕಾರಿ ಶಾಲೆಯೊಂದರಲ್ಲಿ ಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರುತ್ತಿರುವುದು ಮತ್ತು ಇನ್ನೊಂದು ಶಾಲೆಯಲ್ಲಿ ಶೌಚಾಲಯದ ಸುತ್ತ ಮುಳ್ಳು ಗಂಟಿಗಳು ಬೆಳೆದಿರುವ ಫೋಟೋಗಳನ್ನು ಗಮನಿಸಿದ ನ್ಯಾಯಪೀಠ, ಸರಕಾರಿ ಶಾಲೆಗಳ ಮೂಲಸೌಕರ್ಯಗಳ ದುಃಸ್ಥಿತಿಗೆ ಇದೊಂದು ನಿದರ್ಶನವಾಗಿದೆ. ಈ ಫೋಟೋಗಳು ನಮ್ಮ ಮನಸ್ಸನ್ನು ಘಾಸಿಗೊಳಿಸಿದೆ. ಈ ಫೋಟೋಗಳನ್ನು ನೋಡಿದರೆ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ ಎಂದು ಹೇಳಿತು.

ಕಣ್ಣೊರೆಸುವ ತಂತ್ರವಷ್ಟೇ
ಸರಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ನಿವಾರಿಸುವ ಸರಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಷ್ಟೇ. ಕೆಲವು ಶಾಲೆಗಳಲ್ಲಿ ಶೌಚಾಲಯ ಹೆಸರಿಗಷ್ಟೇ ಇದೆ. ಅಲ್ಲಿ ನೀರಿನ ಸೌಲಭ್ಯ ಇಲ್ಲ. ಇಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಪೋಷಕರು ಒಪ್ಪುವುದಾದರೂ ಹೇಗೆ? ಮಕ್ಕಳ ಭವಿಷ್ಯವನ್ನು ಸರಕಾರಿ ಶಾಲೆಗಳಲ್ಲಿ ಕಾಣುವ ಪೋಷಕರ ಕನಸು ನನಸಾಗಲು ಸಾಧ್ಯವೇ ಎಂದು ಮು| ನ್ಯಾ| ಪ್ರಸನ್ನ ಬಿ. ವರಾಲೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ಸರಕಾರ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ
ಈ ಅರ್ಜಿಯ ವಿಚಾರಣೆ 2013ರಿಂದ ನಡೆಯುತ್ತಿದೆ. ಈಗ ನಾವು 2023ರಲ್ಲಿ ಇದ್ದೇವೆ. ಈ ಅವಧಿಯಲ್ಲಿ ಮೂರು ಸರಕಾರಗಳು ಬಂದಿದೆ. ಸರಕಾರಗಳು ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ. ಇಂತಹ ಮೂಲಸೌಕರ್ಯಗಳು ಇಲ್ಲದ ಶಾಲೆಗಳಿಂದ ಮಕ್ಕಳ ಭವಿಷ್ಯ ಹೇಗೆ ರೂಪಿಸಬಹುದು, ಎಂತಹ ಸಮಾಜ ಕಟ್ಟಬಹುದು. ಸರಕಾರ ಇಷ್ಟೊಂದು ಉದಾಸೀನ ತೋರಬಾರದು. ಕೋರ್ಟ್‌ ಆದೇಶ ಪಾಲಿಸದೆ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು? “ಚಲ್ತಾ ಹೈ’ ಎಂಬ ಭಾವನೆ ಅಧಿಕಾರಿಗಳಲ್ಲಿದೆಯೇ? ಅನುದಾನದ ಲಭ್ಯತೆ ಆಧರಿಸಿ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂಬ ಹೇಳಿಕೆ ಸರಿಯಲ್ಲ. ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸರಕಾರದ ಆದ್ಯತೆಯಾಗಬೇಕು ಎಂದು ನ್ಯಾ| ಎಂ.ಜಿ.ಎಸ್‌. ಕಮಾಲ್‌ ಹೇಳಿದರು.

Advertisement

3 ತಿಂಗಳಲ್ಲಿ ವರದಿಗೆ ಸೂಚನೆ
ಸುದೀರ್ಘ‌ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌, ಸರಕಾರಿ ಶಾಲೆಗಳ ಮೂಲಸೌಕರ್ಯಗಳ ಸ್ಥಿತಿಗತಿ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿ ಮೂರು ತಿಂಗಳುಗಳಲ್ಲಿ ವರದಿ ಸಲ್ಲಿಸಬೇಕು. ಸಮೀಕ್ಷೆ ವೇಳೆ ತಾಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳನ್ನು ಭಾಗೀದಾರರನ್ನಾಗಿ ಮಾಡಿಕೊಳ್ಳಬೇಕು. ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನ ವಿಶೇಷ ಅನುದಾನ ಹಂಚಿಕೆ ಮಾಡಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next