Advertisement

ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ 2ನೇ ಮದುವೆಯಾದರೆ ಮೊದಲ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು

04:02 PM Sep 12, 2020 | sudhir |

ಬೆಂಗಳೂರು: ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯ ಎಂದು ವ್ಯಾಖ್ಯಾನಿಸಿರುವ ಹೈಕೋರ್ಟ್‌, ಇಂತಹ ಕ್ರೌರ್ಯಕ್ಕೆ ಒಳಗಾದ ಮೊದಲ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು ಎಂದು ಆದೇಶಿಸಿದೆ.

Advertisement

ಮೊದಲನೇ ಪತ್ನಿ ಜತೆಗಿನ ವಿವಾಹವನ್ನು ರದ್ದುಪಡಿಸಿದ ವಿಜಯಪುರ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯೂಸಫ್‌ ಪಟೇಲ್‌ ಎಂಬಾತ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಮುಸ್ಲಿಂ ಕಾನೂನಿನ ಪ್ರಕಾರ ಎರಡನೇ ಮದುವೆ ಕಾನೂನು ಬಾಹಿರವಾಗದಿದ್ದರೂ ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ. ಗಂಡ ಮೊದಲ ಹೆಂಡತಿಯ ಸಮ್ಮತಿಯಿಲ್ಲದೆ ಎರಡನೆ ಮದುವೆ ಮಾಡಿಕೊಂಡರೆ ಅದರ ಆಧಾರದ ಮೇಲೆ ಆಕೆ ಸುಲಭವಾಗಿ ವಿಚ್ಛೇದನ ಪಡೆಯಬಹುದು. ಇದಕ್ಕೆ ಗಂಡನ ಆಕ್ಷೇಪವನ್ನು ಒಪ್ಪಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಗಂಡ, ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಯಹೂದಿ ಎಂಬ ಧಾರ್ಮಿಕ ತಳಹದಿಯಲ್ಲಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಯಾವುದೇ ಮತ-ಪಂಥಕ್ಕೆ ಸೇರಿದ ಮಹಿಳೆ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದರೆ ಅದು ಕ್ರೌರ್ಯ ಮಾತ್ರವೇ ಆಗಿರುತ್ತದೆ ಹೊರತು ಬೇರೇನೂ ಅಲ್ಲ. ವೈವಾಹಿಕ ಜೀವನದಲ್ಲಿ ಕೌಟುಂಬಿಕ ದೌರ್ಜನ್ಯದ ಪರಿಭಾಷೆ ವ್ಯಾಖ್ಯಾನಕ್ಕೆ ಅತೀತವಾದದ್ದು ಎಂದು ನ್ಯಾಯಪೀಠ ವಿಶ್ಲೇಷಿಸಿ ಯೂಸಫ್‌ ಪಟೇಲ್‌ ಮೇಲನವಿಯನ್ನು ವಜಾಗೊಳಿಸಿತು.

ಏನಿದು ಪ್ರಕರಣ?
ವಿಜಯಪುರದ ಯೂಸಫ್‌ ಪಟೇಲ್‌ ಅದೇ ನಗರದ ರಮ್ಜಾನ್‌ ಬಿ ಎಂಬುವರನ್ನು 2014, ಜೂ.17ರಂದು ಷರಿಯತ್‌ ಕಾನೂನಿನ ಅನುಸಾರ ಮದುವೆಯಾಗಿದ್ದರು. ವಿವಾಹವಾಗಿ ಸಾಕಷ್ಟು ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಸಮಯದಲ್ಲೇ ಯೂಸಫ್‌ ಪಟೇಲ್‌ ಎರಡನೇ ಮದುವೆಯಾಗಿದ್ದರು. ಗಂಡನ ಮನೆಯವರು ಕಿರುಕುಳ ನೀಡುತ್ತಿರುವುದರಿಂದ ವಿಚ್ಛೇದನ ನೀಡಲು ಆದೇಶಿಸಬೇಕು ಎಂದು ಕೋರಿ ರಮ್ಜಾನ್‌ ಬಿ ಸಲ್ಲಿಸಿದ್ದ ಅರ್ಜಿಯನ್ನು ವಿಜಯಪುರ ಕೌಟುಂಬಿಕ ನ್ಯಾಯಾಲಯವು 2018, ಏ.2ರಂದು ಪುರಸ್ಕರಿಸಿ ವಿಚ್ಛೇದನ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಯೂಸುಫ್ ಹೈಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next