Advertisement
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ 11ನೇ ದಿನದ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ತೀರ್ಪು ಕಾಯ್ದಿರಿಸುವುದಾಗಿ ಹೇಳಿತು.
Related Articles
Advertisement
ಏಕಸದಸ್ಯ ಪೀಠದಲ್ಲಿ ವಿಚಾರಣೆ: ಈ ಅರ್ಜಿಗಳನ್ನು ಮೊದಲು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಎರಡು ದಿನ ವಾದ ಆಲಿಸಿದ್ದ ನ್ಯಾಯಪೀಠ, ಇದರಲ್ಲಿ ಸಾಂವಿಧಾನಿಕ ವಿಚಾರಗಳು ಅಡಕವಾಗಿರುವುದರಿಂದ ವಿಸ್ತೃತ ನ್ಯಾಯಪೀಠ ವಿಚಾರಣೆ ನಡೆಸುವುದು ಸೂಕ್ತ ಎಂದು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದ್ದರು. ಬಳಿಕ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಸ್ತೃತ ನ್ಯಾಯಪೀಠ ರಚನೆಯಾಗಿತ್ತು. ಫೆ.10ರಿಂದ ವಿಸ್ತೃತ ನ್ಯಾಯಪೀಠ ಅರ್ಜಿಗಳ ವಿಚಾರಣೆ ಆರಂಭಿಸಿತ್ತು. ಮಧ್ಯಂತರ ಆದೇಶ:
ಹಿಜಾಬ್ ವಿವಾದ ಕುರಿತಂತೆ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ಕುರಿತ ಮುಂದಿನ ಆದೇಶವರೆಗೆ ಧರ್ಮ ಹಾಗೂ ನಂಬಿಕೆಯನ್ನು ಲೆಕ್ಕಿಸದೆ ಎಲ್ಲಾ ವಿದ್ಯಾರ್ಥಿಗಳು ತರಗತಿಯಲ್ಲಿ ಕೇಸರಿ ಶಾಲು, ಶಿರವಸ್ತ್ರ, ಹಿಜಾಬ್ ಮತ್ತು ಧಾರ್ಮಿಕ ಬಾವುಟಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯು ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಮತ್ತು ಸಮವಸ್ತ್ರ ನಿಗದಿಪಡಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಈ ಆದೇಶವನ್ನು ಸೀಮಿತಗೊಳಿಸಲಾಗಿದೆ ಎಂದು ವಿಸ್ತ್ರƒತ ನ್ಯಾಯಪೀಠ ಫೆ.11ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಧಾರ್ಮಿಕ ಸ್ವಾತಂತ್ರ್ಯ ನಿರ್ಬಂಧಿಸುವಂತಿಲ್ಲ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮೊಹಮ್ಮದ್ ತಾಹಿರ್ “”ಹಿಜಾಬ್‌ಗ ಅವಕಾಶ ಕೊಟ್ಟರೆ, ಹಿಜಾಬ್ ಧರಿಸದ ಮುಸ್ಲಿಂರಿಗೆ ತೊಂದರೆಯಾಗುತ್ತೆಂದು ಅಡ್ವೋಕೇಟ್ ಜನರಲ್ ವಾದಿಸಿದ್ದಾರೆ. ಆದರೆ ಇಸ್ಲಾಂನಲ್ಲಿ ನಮಾಜ್ ಕಡ್ಡಾಯವಾಗಿದೆ. ಹಾಗೆಂದು ನಮಾಜ್ ಮಾಡದವರನ್ನು ಮುಸಲ್ಮಾನರಲ್ಲವೆಂದು ಹೇಳಲು ಸಾಧ್ಯವಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳು ನಿಜಕ್ಕೂ ಜಾತ್ಯಾತೀತವಾಗಿವೆಯೇ. ಸರಸ್ವತಿ ಪೂಜೆ, ಆಯುಧ ಪೂಜೆಗಳು ನಡೆಯುತ್ತವೆ ಈ ಪ್ರಶ್ನೆ ಬಂದಾಗ ಯಾರ ಹಕ್ಕುಗಳಿಗೂ ಅಡ್ಡಿಯಾಗದ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬಹುದು ಎಂದು ಕೋರ್ಟ್ ಹೇಳಿದೆ. ಹಿಜಾಬ್ ನಂತಹ ಬೇರೆಯವರಿಗೆ ತೊಂದರೆಯಾಗದ ಸಂಪ್ರದಾಯಗಳಿಗೆ ಅವಕಾಶ ನೀಡಬೇಕು. ಜಾತ್ಯಾತೀತೆ ಹೆಸರಲ್ಲಿ ಏಕರೂಪತೆ ತರುವುದರಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗಲಿದೆ. ನಾಳೆ ಮಾಲ್‌ಗಳೂ ಜಾತ್ಯಾತೀತ ಸ್ಥಳಗಳೆಂದು ಘೋಷಿಸಿದರೆ, ನಮ್ಮ ಧಾರ್ಮಿಕ ಸ್ವಾತಂತ್ರ್ಯ ಮನೆಯೊಳಗೆ ಸೀಮಿತವಾಗುವುದಿಲ್ಲವೇ. ಹಾಗಾಗಿ ಹಿಜಾಬ್‌ಗ ಅವಕಾಶ ನೀಡಬೇಕು”ಎಂದು ಕೋರಿದರು. ಮಾಧ್ಯಮಗಳ ವಿರುದ್ಧದ ಅರ್ಜಿ ವಜಾ
ಹಿಜಾಬ್ ಧರಿಸಿರುವ ಹೆಣ್ಣು ಮಕ್ಕಳು ಮತ್ತು ಶಿಕ್ಷಕಿಯರ ವಿಡಿಯೋ ಹಾಗೂ ಫೋಟೋ ತೆಗೆದು ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ವಕೀಲ ಎಸ್. ಬಾಲಕೃಷ್ಣನ್ ಮನವಿ ಮಾಡಿದರು. ಮಾಧ್ಯಮಗಳಲ್ಲಿ ವಿದ್ಯಾರ್ಥಿನಿಯರನ್ನು ಅವಮಾನಿಸಿ, ಅಪರಾಧಿಗಳಂತೆ ತೋರಿಸಲಾಗುತ್ತಿದೆ. ಜತೆಗೆ, ಇದರಲ್ಲಿ ಅವರ ಖಾಸಗಿತನದ ವಿಚಾರವೂ ಇದೆ. ಕಾಲೇಜುಗಳ ಮುಂದೆ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರು ಹಿಜಾಬ್/ಬುರ್ಕಾ ತೆಗೆಯುವುದನ್ನು ವಿಡಿಯೋ ಹಾಗೂ ಫೋಟೋ ತೆಗೆದು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಡಿಯನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ ಎಂದರು. ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರೇ ಅರ್ಜಿ ಸಲ್ಲಿಸಿರುವಾಗ ನಿಮ್ಮ ಆಕ್ಷೇಪಣೆಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಪರಿಗಣಿಸಲು ಸಾಧ್ಯವಿಲ್ಲ ಎಂದ ನ್ಯಾಯಪೀಠ, ಹಾಗೊಂದು ವೇಳೆ, ನಿರ್ದಿಷ್ಟ ವ್ಯಕ್ತಿ ಅಥವಾ ಬೇರೆ ಯಾರಿಂದಲಾದರೂ ಸಮಸ್ಯೆಯಾಗಿದ್ದರೆ, ತೊಂದರೆಗೊಳಗಾದ ವ್ಯಕ್ತಿಗಳು ಸೂಕ್ತ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಈ ವಿಚಾರದಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿತು.