Advertisement

ಆಕ್ಷೇಪಣೆ ಸಲ್ಲಿಸದಿದ್ದರೆ ದಂಡ: ಸರಕಾರಕ್ಕೆ ಕೋರ್ಟ್‌ ಎಚ್ಚರಿಕೆ

11:33 PM Feb 14, 2022 | Team Udayavani |

ಬೆಂಗಳೂರು: ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ರಚಿಸಲು “ಕರ್ನಾಟಕ ಪಂಚಾಯತ್‌ರಾಜ್‌ ಮತ್ತು ಗ್ರಾಮ ಸ್ವರಾಜ್‌ ಕಾಯ್ದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಚುನಾವಣ ಆಯೋಗ ಸಲ್ಲಿಸಿರುವ ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸದಿದ್ದರೆ ದಂಡ ವಿಧಿಸುವುದಾಗಿ ಸರಕಾರಕ್ಕೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

Advertisement

ಈ ಕುರಿತು ಚುನಾವಣ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ಹಾಗೂ ನ್ಯಾ| ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಸರಕಾರದ ಪರ ವಕೀಲರು ವಾದಿಸಿ, ರಾಜ್ಯ ಚುನಾವಣ ಆಯೋಗ ಸಲ್ಲಿಸಿರುವ ಅರ್ಜಿಗೆ ಸರಕಾರದ ಆಕ್ಷೇಪಣೆಯ ಕರಡು ಸಿದ್ಧವಾಗಿದೆ. ಅದನ್ನು ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಚುನಾವಣ ಆಯೋಗವನ್ನು ಪ್ರತಿನಿಧಿಸುತ್ತಿರುವ ಕೆ.ಎನ್‌. ಫ‌ಣೀಂದ್ರ ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಿತು. ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂ.ರಾಜ್‌ (ತಿದ್ದುಪಡಿ) ಕಾಯ್ದೆ ಅಸಾಂವಿಧಾನಿಕ ಎಂಬುದಾಗಿ ಘೋಷಿಸಿ ರದ್ದುಪಡಿಸಬೇಕು. ಚುನಾವಣ ಆಯೋಗವು ಈಗಾಗಲೇ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್‌ ವಿಂಗಡನೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಮಾಡಿ ಕೊಡಲು ಸರಕಾರಕ್ಕೆ ನಿರ್ದೇಶಿಸಬೇಕು. ಈ ಅರ್ಜಿ ಇತ್ಯರ್ಥವಾಗುವ ವರೆಗೆ ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸಿಎಂ ಮುಂದೆ ಮಂಡಿಸಲು “ಹೈ’ ನಿರ್ದೇಶನ
ಫಾರ್ಮಸಿ ಇನ್‌ಸ್ಪೆಕ್ಟರ್‌: ನಿಯಮ ರೂಪಿಸಲು ವಿಳಂಬ
ಬೆಂಗಳೂರು: ಫಾರ್ಮಸಿ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಅರ್ಹತಾ ನಿಯಮಗಳಿಗೆ ಸಹಿ ಹಾಕಲು ಸಂಬಂಧಪಟ್ಟ ಸಚಿವರಿಗೆ ಎರಡು ತಿಂಗಳುಗಳಿಂದ ಸಾಧ್ಯವಾಗಿಲ್ಲ ಎಂದಾದರೆ, ಸಚಿವರನ್ನೇ ನ್ಯಾಯಾಲಯಕ್ಕೆ ಕರೆಯಿಸಬೇಕಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಹೈಕೋರ್ಟ್‌, ಪ್ರಕರಣವನ್ನು ಮುಖ್ಯಮಂತ್ರಿಯವರ ಮುಂದೆ ಮಂಡಿಸುವಂತೆ ನಿರ್ದೇಶಿಸಿದೆ.

Advertisement

ಈ ವಿಚಾರವಾಗಿ ಅಶೋಕ್‌ ಸ್ವಾಮಿ ಹೇರೂರು ಅವರು 2015ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಸರಕಾರದ ಪರ ವಕೀಲರು, ನಿಯಮಗಳಿಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಸದ್ಯ ಸಹಿಗಾಗಿ ಕಡತ ಸಚಿವರ ಮುಂದಿದೆ. ಇದಕ್ಕಾಗಿ ಎರಡು ವಾರ ಕಾಲಾವಕಾಶ ಬೇಕು ಎಂದು ಕೋರಿದರು.

ಇದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನಿಯಮಗಳಿಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ ಎಂದು 2021ರ ಡಿ.14ರಂದು ಸರಕಾರ ಹೇಳಿತ್ತು. ಎರಡು ತಿಂಗಳ ಕಳೆದರೂ ಕಡತ ಸಚಿವರ ಮುಂದಿದೆ. ಇದು ಸರಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ತೋರಿಸುತ್ತದೆ. ಸಚಿವರಿಗೆ ವಿನಾಯಿತಿ ಏನೂ ಇಲ್ಲ. ಅವರನ್ನು ಕೋರ್ಟ್‌ಗೆ ಕರೆಯಿಸಬೇಕಾ ಎಂದು ಪ್ರಶ್ನಿಸಿತು.

ಅಲ್ಲದೆ, ಕಳೆದ ವರ್ಷ ಎಪ್ರಿಲ್‌ನಲ್ಲಿ ಕರಡು ಸಿದ್ಧವಾಗಿತ್ತು. ಡಿ.14ರಂದು ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಆದರೆ, ಎರಡು ತಿಂಗಳಾದರೂ ಸಚಿವರು ಸಹಿ ಹಾಕಿಲ್ಲ. ಬಹಳ ದಿನಗಳಿಂದ ಬಾಕಿ ಉಳಿದಿರುವ ಪ್ರಕರಣವಿದು. ಹಾಗಾಗಿ, ಈ ಪ್ರಕರಣದ ಬಗ್ಗೆ ಸ್ವತಃ ಮುಖ್ಯಮಂತ್ರಿಗಳು ಗಮನಹರಿಸಬೇಕು. ಆದ್ದರಿಂದ ಪ್ರಕರಣವನ್ನು ಮುಖ್ಯಮಂತ್ರಿ ಮಂಡಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿತು.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ
ಬೆಂಗಳೂರು: ನಿಯಮ ಉಲ್ಲಂಘಿ ಸಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ಮೆಸರ್ಸ್‌ ವಾಣಿ ವಿಲಾಸ ಸಿಮೆಂಟ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾ| ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ನಿರ್ದೇಶನ ನೀಡಿತು.

ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ನೇಮಿಸಬೇಕು. ಅವರು ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾ. 31ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next