ಬೆಂಗಳೂರು : ರೈತ ಪ್ರತಿಭಟನೆ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ವಿರುದ್ಧ ದೇಶದ ನಾನಾ ಕಡೆಗಳಲ್ಲಿ ದೂರುಗಳು ದಾಖಲಾಗಿದ್ದವು. ಕರ್ನಾಟಕದ ತುಮಕೂರು, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಕಂಗನಾ ವಿರುದ್ಧ ದೂರನ್ನು ದಾಖಲಿಸಲಾಗಿತ್ತು.
ಈ ಹಿಂದೆ ಬೆಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ಇದರ ವಿರುದ್ಧ ಕಂಗನಾ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು, ಈ ಸಂಬಂಧ ಇಂದು (ಮಾರ್ಚ್ 2) ವಿಚಾರಣೆ ನಡೆದಿದೆ.
ವಿಚಾರಣೆ ವೇಳೆ ನಟಿ ಕಂಗನಾ ರಣಾವತ್‍ಗೆ ಹಿನ್ನಡೆಯಾಗಿದ್ದು, ಮೊದಲು ನೀವು ಆಕ್ಷೇಪಣೆ ಸಲ್ಲಿಸಿರಿ, ಆಮೇಲಷ್ಟೆ ನಿಮ್ಮ ವಾದವನ್ನು ಪರಿಗಣಿಸಲು ಸಾಧ್ಯ ಎಂದು ಕಂಗನಾ ಪರ ವಕೀಲರಿಗೆ ಹೈಕೋರ್ಟ್ ಹೇಳಿದೆ.
ಕಂಗನಾ ಪರವಾಗಿ ರಿಜ್ವಾನ್ ಸಿದ್ಧಿಕಿ ವಾದ ಮಂಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಮತ್ತು ಮುಂದಿನ ವಿಚಾರಣೆ ಮಾರ್ಚ್ 18 ಕ್ಕೆ ನಡೆಯಲಿದೆ.
ಏನಿದು ಪ್ರಕರಣ : ರೈತ ಪ್ರತಿಭಟನೆ ವಿರುದ್ಧವಾಗಿ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ್ದು, ಈ ಹಿಂದೆ ಸಿಎಎ ಬಗ್ಗೆ ತಪ್ಪು ಮಾಹಿತಿ ನೀಡಿದವರೇ ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಜನ ದೇಶದಲ್ಲಿ ಭಯ ಹುಟ್ಟಿಸುವ ಭಯೋತ್ಪಾದಕರಾಗಿದ್ದಾರೆ ಎಂದು ಬರೆದಿದ್ದರು. ಇದರ ವಿರುದ್ಧವಾಗಿ ದೇಶದ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿದ್ದವು.