ಬೆಂಗಳೂರು : ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದದೇವನಹಳ್ಳಿಯಲ್ಲಿ ಒತ್ತುವರಿಯಾಗಿರುವ 19 ಎಕರೆ 9 ಗುಂಟೆ ಸರ್ಕಾರಿ ಜಮೀನಿನಲ್ಲಿ ರೈತರು ಬೆಳೆದಿರುವ ಕಬ್ಬು ಹಾಗೂ ಇತರೆ ಬೆಳೆಯನ್ನು ಕಟಾವು ಮಾಡಿದ ನಂತರ ಒತ್ತುವರಿ ತೆರವುಗೊಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಅಡವಿ ಆನಂದದೇವನಹಳ್ಳಿಯಲ್ಲಿ ನಿವಾಸಿಗಳಾದ ಶಿವಣ್ಣ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಈ ನಿರ್ದೇಶನ ನೀಡಿತು.
ನ್ಯಾಯಾಲಯದ ನಿರ್ದೇಶನದಂತೆ ಕಂದಾಯ ಇಲಾಖೆಯು ಒತ್ತುವರಿ ಪ್ರದೇಶದ ಸರ್ವೇ ನಡೆಸಿತ್ತು. ಅಡವಿ ಆನಂದದೇವನಹಳ್ಳಿಯಲ್ಲಿ ಒಟ್ಟು 19 ಎಕರೆ 9 ಗುಂಟೆ ಗ್ರಾಮ ಠಾಣ ಜಮೀನು ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಲಾಗಿತ್ತು. ಅದನ್ನು ಪರಿಗಣಿಸಿದ್ದ ಹೈಕೊರ್ಟ್, ಒತ್ತುವರಿ ತೆರವುಗೊಳಿಸುವಂತೆ ಹಗರಿಬೊಮ್ಮನಹಳ್ಳಿ ತಾಲೂಕು ತಹಶೀಲ್ದಾರ್‌ಗೆ ನಿರ್ದೇಶಿಸಿತ್ತು.
ಆದರೆ, ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಹಾಜರಾಗಿ, ನ್ಯಾಯಾಲಯದ ಸೂಚನೆಯಂತೆ 19 ಎಕರೆ 9 ಗುಂಟೆ ಪೈಕಿ ಸ್ವಲ್ಪ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ ಜಮೀನಿನಲ್ಲಿ ರೈತರು ಕಬ್ಬು ಹಾಗೂ ಇತರೆ ಬೆಳೆ ಬೆಳೆದಿದ್ದಾರೆ. ಒತ್ತುವರಿಗೆ ಮುಂದಾಗಿ ಬೆಳೆಗೆ ಹಾನಿ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ. ಇದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮೂರು ತಿಂಗಳ ಕಾಲಾವಕಾಶ ನೀಡಿದರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಚಿಕ್ಕಮಗಳೂರು: ಚಾರ್ಮಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಮದುವೆ ವಾಹನ: ತಪ್ಪಿದ ದೊಡ್ಡ ದುರಂತ
ಅದಕ್ಕೆ ಒಪ್ಪಿದ ನ್ಯಾಯಪೀಠ, ಸ್ವಲ್ಪ ಪ್ರದೇಶದ ತೆರವುಗೊಳಿಸಿದರೆ ಸಾಲದು. ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಬೇಕು. ಹಾಗಾಗಿ, ರೈತರು ಒತ್ತುವರಿ ಪ್ರದೇಶದಲ್ಲಿ ಬೆಳೆದಿರುವ ಬೆಳೆಯನ್ನು ಕಟಾವು ಮಾಡಿದ ಕೂಡಲೇ ಒತ್ತುವರಿ ಸಂಪೂರ್ಣವಾಗಿ ತೆರವುಗೊಳಿಸಬೇಕು. ಹಾಗೆಯೇ, ರೈತರು ಮತ್ತೆ ಬೆಳೆ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು 2022ರ ಫೆಬ್ರವರಿಗೆ ಮುಂದೂಡಿತು.