Advertisement

ಐಎಂಎ ವಂಚನೆ: ಇ.ಡಿ. ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾ

12:32 AM Feb 02, 2022 | Team Udayavani |

ಬೆಂಗಳೂರು: ಐ ಮಾನಿಟರಿ ಅಡ್ವೆ„ಸರಿ’ (ಐಎಂಎ) ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಜಾರಿ ನಿರ್ದೇಶನಾಲಯದ ಸಹಾ ಯಕ ನಿರ್ದೇಶಕ ಬಸವರಾಜ್‌ ಆರ್‌.ಅವರು ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಅಧಿಕಾರವನ್ನು ಪ್ರಶ್ನಿಸಿ ಆರೋಪಿ ಅಬ್ಟಾಸ್‌ ಮಹಮ್ಮದ್‌ ಖಾನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಮಧ್ಯಪ್ರವೇಶಿಸುವ ಅಗತ್ಯವಿಲ್ಲ
ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸುವ ಮೂಲಕ ವಿಶೇಷ ನ್ಯಾಯಾಲಯದ ಮುಂದೆ ದೂರು ಸಲ್ಲಿಸಲು ಅಧಿಕಾರಿಗೆ ಅಗತ್ಯ ಅಧಿಕಾರ ನೀಡಿದೆ. ಸಹಾಯಕ ನಿರ್ದೇಶಕರು ಪಿಎಂಎಲ್‌ ಕಾಯ್ದೆಯ ಸೆಕ್ಷನ್‌ 49ರ ಅಡಿಯಲ್ಲಿ ಅಧಿಕೃತ ಅಧಿಕಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಕ್ರಮ ಸರಿಯಿದೆ. ಆದ್ದರಿಂದ, ಅವರು ಸಲ್ಲಿಸಿರುವ ದೂರು ರದ್ದುಪಡಿಸುವ ಅಥವಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣದ 9ನೇ ಆರೋಪಿಯಾಗಿರುವ ಅಬ್ಟಾಸ್‌ ಮಹಮ್ಮದ್‌ ಖಾನ್‌ 2019ರಲ್ಲಿ ಮಗುªಮ್‌ ಅವರ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ  ಕಾಯ್ದೆ ಅಡಿ ವಿಶೇಷ ನ್ಯಾಯಾಲಯ ವಿಚಾರಣೆ ಆರಂಭಿಸಿದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅಧಿಕಾರಿ ಬಸವರಾಜ್‌ ಆರ್‌. ಮಗುªಮ್‌ ಅವರು ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಪಿಎಂಎಲ್‌ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವ ಅಧಿಕಾರ ಹೊಂದಿಲ್ಲ ಎಂದು ವಾದಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಕೇಂದ್ರ ಸರಕಾರದ ಪರ ವಕೀಲರು, ಮಗುªಮ್‌ ಅವರು ಜಾರಿ ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸಲು ನಿಯೋಜನೆ ಮೇಲಿದ್ದಾರೆ. ಆದ್ದರಿಂದ ಅವರು ಪ್ರಕರಣ ದಾಖಲಿಸುವ ಸೂಕ್ತ ಅಧಿಕಾರ ಹೊಂದಿದ್ದಾರೆ ಎಂದು ವಾದಿಸಿದ್ದರು.

ಪ್ರವಾಸ: ಶ್ರೀಕಿ ಸಹೋದರನ ಅರ್ಜಿ
ಬೆಂಗಳೂರು: ಬಿಟ್‌ ಕಾಯಿನ್‌ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಅವರ ಸಹೋದರ ಸುದರ್ಶನ್‌ ರಮೇಶ್‌ ಉದ್ಯೋಗದ ನಿಮಿತ್ತ ತನಗೆ ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿ ಜಾರಿ ನಿರ್ದೇಶನಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಸುದರ್ಶನ್‌ ರಮೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಕೇಂದ್ರ ಸರಕಾರ, ಜಾರಿ ನಿರ್ದೇಶನಾಲಯ ಮತ್ತು ಬ್ಯೂರೊ ಆಫ್ ಇಮಿಗ್ರೇಷನ್‌ಗೆ ನೋಟಿಸ್‌ ಜಾರಿಗೊಳಿಸಿದ್ದು, ಅರ್ಜಿಗೆ ಉತ್ತರಿಸುವಂತೆ ಸೂಚಿಸಿದೆ.

ಕೌಟುಂಬಿಕ ಸಮಸ್ಯೆ ವಿವರಣೆ
ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಈಗಾಗಲೇ ಹಾಜರಾಗಿ, ತನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀಕಿ ವಿರುದ್ಧ ಬಿಟ್‌ ಕಾಯಿನ್‌ ಹಗರಣದ ಆರೋಪ ಕೇಳಿ ಬಂದಾಗ ತಾನು ಭಾರತದಲ್ಲೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಸದ್ಯ ತಂದೆ ಅಧಿಕ ರಕ್ತದೊತ್ತಡ ಹಾಗೂ ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ. ಅವರಿಗೆ ನಿರಂತರವಾಗಿ ಚಿಕಿತ್ಸೆ ಕಲ್ಪಿಸಬೇಕಿದೆ. ಅದನ್ನು ನಿಭಾಯಿಸಲು ಹಣದ ಆವಶ್ಯಕತೆಯಿದ್ದು, ಕುಟುಂಬಸ್ಥರು ಜೀವನ ನಡೆಸಲು ನನ್ನನ್ನು ಆಧರಿಸಿದ್ದಾರೆ ಎಂದು ಸುದರ್ಶನ್‌ ರಮೇಶ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ನಿರ್ಬಂಧ ತೆರವಿಗೆ ಮನವಿ
ಜ. 13ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ನೆದರ್‌ಲ್ಯಾಂಡ್‌ಗೆ ತೆರಳುತ್ತಿದ್ದಾಗ ಇಮಿಗ್ರೇಷನ್‌ ಮತ್ತು ಇ.ಡಿ. ಅಧಿಕಾರಿಗಳು ಪ್ರವಾಸಕ್ಕೆ ಅಡ್ಡಿಪಡಿಸಿ ಪಾಸ್‌ಪೋರ್ಟ್‌ ಅನ್ನು ನಿರ್ಬಂಧಿಸಿದ್ದರು. ಈ ಬಗ್ಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ವಿದೇಶ ಪ್ರವಾಸ ಕೈಗೊಳ್ಳಲು ಆಕ್ಷೇಪಿಸಿ ಇ.ಡಿ.ಯವರು ಜ. 13ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ತಮಗೆ ವಿಧಿಸಿರುವ ನಿರ್ಬಂಧ ತೆರವು ಮಾಡುವಂತೆ ಆದೇಶಿಸಬೇಕು ಎಂದು ಸುದರ್ಶನ್‌ ರಮೇಶ್‌ ಅರ್ಜಿಯಲ್ಲಿ ಕೋರಿದ್ದಾರೆ.

ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌
ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಿಯಬಿಟ್ಟು ಅಮೇರಿಕಕ್ಕೆ ಪರಾರಿಯಾದ ಆರೋಪಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಗರದ ಎನ್‌ಆರ್‌ಐ ಲೇಔಟ್‌ 2ನೇ ಹಂತದ ನಿವಾಸಿ ಎನ್‌. ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾಮೀನು ಮಂಜೂರು ಮಾಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತು.

ಹಣಕಾಸು ವಿಚಾರವಾಗಿ ಪ್ರಕರಣದ ದೂರುದಾರೆ ಸುಜಾತಾ ಅವರ ಪತಿಯನ್ನು ಅಪಹರಿಸಿ ಅವರ ಅರೆನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ ಆರೋಪ ಅರ್ಜಿದಾರನ ಮೇಲಿದೆ. ಆರೋಪಿಯು ಘಟನೆ ನಡೆದ ಅನಂತರ ಅಮೇರಿಕಕ್ಕೆ ತೆರಳಿದ್ದ. ಹಾಗಾಗಿ, ನಿರೀಕ್ಷಣ ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next