Advertisement

Karnataka High Court; ಅನರ್ಹತೆ ತೂಗುಗತ್ತಿಯಿಂದ ಪಾರಾದ ನೆಹರು ಓಲೇಕಾರ್‌

10:08 PM Apr 05, 2023 | Team Udayavani |

ಬೆಂಗಳೂರು: ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಅವರಿಗೆ “ಬಿಗ್‌ ರಿಲೀಫ್’ ಸಿಕ್ಕಿದ್ದು, ಸ್ಥಳೀಯ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಮಾಡಿದ ಪ್ರಕರಣದಲ್ಲಿ ಅವರನ್ನು ದೋಷಿಯನ್ನಾಗಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಹೈಕೋರ್ಟ್‌ನ ಈ ಆದೇಶದಿಂದಾಗಿ ಅನರ್ಹತೆಯ ಭೀತಿ ಎದುರಿಸುತ್ತಿದ್ದ ಶಾಸಕ ನೆಹರೂ ಓಲೇಕಾರ್‌ ಸದ್ಯ ನಿರಾಳರಾಗಿದ್ದಾರೆ. ಅಲ್ಲದೇ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಯಾವುದೇ ಅಡ್ಡಿ ಇಲ್ಲದಂತಾಗಿದೆ.

ಪ್ರಕರಣದಲ್ಲಿ ತಮ್ಮನ್ನು ದೋಷಿಯನ್ನಾಗಿ ಘೋಷಿಸಿ ಎರಡು ವರ್ಷ ಜೈಲು ವಿಧಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ನೆಹರೂ ಓಲೇಕಾರ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಓಲೇಕಾರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್‌ ಒಳಸಂಚು ರೂಪಿಸಿಲ್ಲ. ಅಧೀನ ನ್ಯಾಯಾಲಯದ ಆದೇಶ ದೋಷಪೂರಿತ ಆಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್‌ ಬಂದಿದೆ. ಆದೇಶವು ದೋಷಪೂರಿತವಾಗಿದೆ ಎಂದಾದರೆ ಅದರ ಪರಿಣಾಮಗಳನ್ನು ಆರೋಪಿ ಎದುರಿಸಬಾರದೆಂದು ಸುಪ್ರಿಂಕೋರ್ಟ್‌ ತೀರ್ಪು ನೀಡಿದೆ. ಅದರಂತೆ ಪ್ರಕರಣದಲ್ಲಿ ಅರ್ಜಿದಾರ ಯಾವುದೇ ಪಾತ್ರ ಇಲ್ಲದ ಕಾರಣ ಅವರನ್ನು ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಲೋಕಾಯುಕ್ತ ಪರ ವಕೀಲರು, ಕ್ರಿಮಿನಲ್‌ ಪ್ರಕರಣದಲ್ಲಿ ಚುನಾಯಿತ ಜನಪ್ರತಿನಿಧಿಗಳು ಎರಡು ವರ್ಷ ಕಾಲ ಶಿಕ್ಷೆ ಗುರಿಯಾದರೆ ಅವರು ತಮ್ಮ ಸ್ಥಾನದಿಂದ ತನ್ನಿಂತಾನೆ ಅನರ್ಹರಾಗುತ್ತಾರೆ ಎಂದು ಸುಪ್ರಿಂ ಕೋರ್ಟ್‌ ತೀರ್ಪು ಸ್ಪಷ್ಟಪಡಿಸುತ್ತದೆ. ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್‌ ಪಿತೂರಿ ನಡೆಸಿರುವ ಸಾಕ್ಷ್ಯಾಧಾರಗಳ ಸಮೇತ ವಿಶೇಷ ನ್ಯಾಯಾಲಯದಲ್ಲಿ ದೃಢಪಟ್ಟಿದೆ. ಆದ ಕಾರಣ ಅವರ ಮನವಿ ಪುರಸ್ಕರಿಸದೆ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ಎರಡು ವರ್ಷಗಳ ಶಿಕ್ಷೆಗೆ ತಡೆ ನೀಡಿ ಆದೇಶಿಸಿದೆ.

Advertisement

ಪ್ರಕರಣದ ಹಿನ್ನೆಲೆ:
ಪ್ರಕರಣ ಸಂಬಂಧ ಶಾಸಕ ನೆಹರು ಓಲೇಕಾರ ಅವರನ್ನು ದೋಷಿಯಾಗಿ ತೀರ್ಮಾನಿಸಿ ಮತ್ತು ಅವರಿಗೆ ಎರಡು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2023 ರ ಫೆಬ್ರವರಿ 13 ರಂದು ಆದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಓಲೇಕಾರ್‌ ಅವರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಮಾರ್ಚ್‌ 3 ರಂದು ಓಲೇಕಾರಗೆ ವಿಧಿಸಿದ್ದ ಎರಡು ವರ್ಷದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿದ ಹೈಕೋರ್ಟ್‌, ಜಾಮೀನು ಮಂಜೂರು ಮಾಡಿತ್ತು. ಇದೀಗ ದೋಷಿಯಾಗಿ ತೀರ್ಮಾನಿಸಿರುವ ಆದೇಶದ ಭಾಗಕ್ಕೆ ತಡೆ ನೀಡಲು ಅರ್ಜಿಯಲ್ಲಿ ಕೋರಿದ್ದರು. ಅದನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next