Advertisement

ರಾಜೀನಾಮೆ ಹಿಂಪಡೆಯಲ್ಲ

07:39 AM Sep 27, 2017 | Team Udayavani |

ಬೆಂಗಳೂರು: “”ರಾಜೀನಾಮೆ ನಿರ್ಧಾರವನ್ನು ಬದಲಿಸಲು ಸಾಧ್ಯವೇ ಇಲ್ಲ, ಈಗಾಗಲೇ ಅದನ್ನು ಅಂಗೀಕರಿಸಲಾಗಿದ್ದು ಅದು ಮುಗಿದ ಅಧ್ಯಾಯ,” ಎಂದು ರಾಜ್ಯ ಹೈಕೋರ್ಟ್‌ನ ನ್ಯಾ. ಜಯಂತ್‌ ಪಟೇಲ್‌ ಸ್ಪಷ್ಟವಾಗಿ ಹೇಳಿದ್ದಾರೆ.

Advertisement

ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷ ವೈ. ಎನ್‌. ಸದಾಶಿವರೆಡ್ಡಿ, ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ಆರ್‌. ನಾಯಕ್‌ ಅವರು ನ್ಯಾ. ಜಯಂತ್‌ ಪಟೇಲ್‌ ಅವರನ್ನು ಭೇಟಿಯಾಗಿ, ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಅಲ್ಲದೆ ನಿಮಗೆ ವಕೀಲರ ಸಮುದಾಯದ ಬೆಂಬಲವಿದೆ ಎಂದೂ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಜಯಂತ್‌ ಪಟೇಲ್‌, ನಿರ್ಧಾರ ಬದಲಿಸುವ ಸಮಯ ಮುಗಿದಿದೆ. ರಾಜೀನಾಮೆ ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದರು. ಅಲ್ಲದೆ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೂ,
ವರ್ಗಾವಣೆಯ ಬೇಸರದಿಂದಲೇ ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ಇನ್ನೇನನ್ನೂ ಹೇಳುವುದಿಲ್ಲ ಎಂದು ಹೇಳಿ ಕಳುಹಿಸಿದರು.

ಈ ಮಧ್ಯೆ, ನ್ಯಾ. ಜಯಂತ್‌ ಪಟೇಲ್‌ ಅವರ ವರ್ಗಾವಣೆ ಮತ್ತು ರಾಜೀನಾಮೆಗೆ ರಾಜ್ಯ ವಕೀಲರ ಸಮೂಹ ಅಸಮಾಧಾನ
ವ್ಯಕ್ತಪಡಿಸಿದೆ. ಈ ಸಂಬಂಧ ಬುಧವಾರ ವಕೀಲರ ಪರಿಷತ್‌ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಇದರ ಜತೆಯಲ್ಲೇ ನ್ಯಾ.
ಜಯಂತ್‌ ಪಟೇಲ್‌ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವ ಕೊಲಿಜಿಯಂ ಕ್ರಮಕ್ಕೂ ವಕೀಲರು ಬೇಸರ ವ್ಯಕ್ತಪಡಿಸಿದರು.

ರಾಜೀನಾಮೆಗೆ ಕಾರಣವೇನು?
ಅಕ್ಟೋಬರ್‌ 9 ರಂದು ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿಎಸ್‌.ಕೆ. ಮುಖರ್ಜಿ ಅವರು ನಿವೃತ್ತಿಯಾಗಲಿದ್ದು, ಅವರ ಸ್ಥಾನದಲ್ಲಿ ಸೇವಾ ಹಿರಿತನದ ಆಧಾರದಲ್ಲಿ ನ್ಯಾ. ಜಯಂತ್‌ ಪಟೇಲ್‌ ಅವರೇ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಬೇಕಿತ್ತು. ಸದ್ಯ ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾ. ಜಯಂತ್‌ ಪಟೇಲ್‌ ಅವರೇ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ 3ನೇ ಹಿರಿಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇದರಿಂದ ಬೇಸತ್ತು ಪ್ರತಿಭಟನಾ ರೂಪವಾಗಿ ರಾಜೀನಾಮೆ ನೀಡಿದ್ದಾರೆ ಎಂದು ವಕೀಲರ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ.

ಗುಜರಾತ್‌ನ ರಾಜ್‌ಕೋಟ್‌ ಮೂಲದ ನ್ಯಾ.ಜಯಂತ್‌ ಪಟೇಲ್‌ ಗುಜರಾತ್‌ ಹೈಕೋರ್ಟ್‌ಗೆ 2001ರಲ್ಲಿ ಹೆಚ್ಚುವರಿ 
ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದು, 2004ರಲ್ಲಿ ಕಾಯಂನ್ಯಾಯಮೂರ್ತಿಗಳಾಗಿದ್ದರು. ಖಡಕ್‌ ನ್ಯಾಯದಾನಕ್ಕೆ ಹೆಸರಾಗಿದ್ದ ನ್ಯಾ. ಜಯಂತ್‌ ಪಟೇಲ್‌ 2015ರ ಆಗಸ್ಟ್‌ 13ರಂದು ಗುಜರಾತ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ
ನೇಮಕಗೊಂಡಿದ್ದರು. ನಂತರ 2016ರ ಫೆಬ್ರವರಿಯಲ್ಲಿ ಅವರನ್ನು ರಾಜ್ಯ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಈ ಮೂಲಕ ಗುಜರಾತ್‌ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ತಪ್ಪಿತ್ತು. ಇದೀಗ ರಾಜ್ಯದಲ್ಲಿ ಮತ್ತೆ ಸೇವಾ ಹಿರಿತನದ ಆಧಾರದಲ್ಲಿ ನ್ಯಾ.ಜಯಂತ್‌ ಪಟೇಲ್‌ ಅವರೇ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಬೇಕಿತ್ತು. ಇದೀಗ ಅಲಹಾಬಾದ್‌
ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದರಿಂದ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ತಪ್ಪಿದಂತಾಗಿದೆ ಎಂಬುದು ವಕೀಲರ ಸಮುದಾಯದಲ್ಲಿನ ಚರ್ಚೆ.

Advertisement

ಸುಪ್ರೀಂನಲ್ಲಿ ವರ್ಗಾವಣೆ ಪ್ರಶ್ನೆ
ಅಹಮದಾಬಾದ್‌: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಂತ್‌ ಪಟೇಲ್‌ ಅವರ ವರ್ಗಾವಣೆಯನ್ನು ಖಂಡಿಸಿರುವ ಗುಜರಾತ್‌ ಹೈಕೋರ್ಟ್‌ ವಕೀಲರ ಸಂಘ, ಸುಪ್ರೀಂಕೋರ್ಟ್‌ನಲ್ಲಿ “ಸೂಕ್ತ ಕಾನೂನು ವಿಚಾರಣೆ’ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಮಂಗಳವಾರ ನಡೆದ ವಕೀಲರ ಸಂಘದ ಸಭೆಯಲ್ಲಿ, ಕರ್ನಾಟಕ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ನ್ಯಾ. ಜಯಂತ್‌ ಪಟೇಲ್‌ ಅವರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು “ಸ್ಪಷ್ಟವಾಗಿ’ ಒಪ್ಪದೇ ಇರುವ ನಿರ್ಣಯ ತೆಗೆದುಕೊಳ್ಳಲಾಗಿದೆ. ನ್ಯಾ. ಜಯಂತ್‌ ಪಟೇಲ್‌ ಅವರ ವರ್ಗಾವಣೆ ಮಾಡಿರುವ ಸುಪ್ರೀಂ ಕೋರ್ಟ್‌ನ ಕೊಲಿಜಿಯಂನ ನಿರ್ಧಾರವನ್ನು ಒಪ್ಪಲು ಅಸಾಧ್ಯ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲ್ಲದೆ ವರ್ಗಾವಣೆ ಖಂಡಿಸಿ ಬುಧವಾರ ಕೋರ್ಟ್‌ ಕಲಾಪದಿಂದ ದೂರ ಉಳಿಯುವುದಾಗಿ ವಕೀಲರ ಸಂಘ ಪತ್ರಿಕಾ ಹೇಳಿಕೆ ಹೊರಡಿಸಿದೆ.

ಸದ್ಯದಲ್ಲೇ ನ್ಯಾ. ಜಯಂತ್‌ ಪಟೇಲ್‌ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಬೇಕಿತ್ತು. ಇದನ್ನು  ತಪ್ಪಿಸುವ ಸಲುವಾಗಿಯೇ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ ಎಂದು ಸಂಘ ಆರೋಪಿಸಿದೆ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಸೂಕ್ತ ಕಾನೂನು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸುತ್ತೇವೆ. ಈ ಸಂದರ್ಭದಲ್ಲೇ ನ್ಯಾ. ಜಯಂತ್‌ ಪಟೇಲ್‌ ಅವರನ್ನು ವರ್ಗಾವಣೆ ಮಾಡಲು ಕಾರಣಗಳೇನು ಎಂಬ ಬಗ್ಗೆಯೂ ಪ್ರಶ್ನಿಸುತ್ತೇವೆ ಎಂದು ಸಂಘ ತಿಳಿಸಿದೆ.

ಸೇವಾ ಹಿರಿತನದ ಆಧಾರದ ಮೇಲೆ ಅವರನ್ನು ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಿಲ್ಲ ಎಂದು ನ್ಯಾ.
ಜಯಂತ್‌ ಪಟೇಲ್‌ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಯ ವರದಿ ಹೇಳಿದೆ.

ಖಡಕ್‌ ನ್ಯಾಯವಾದಿ
ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಜಯಂತ್‌ ಪಟೇಲ್‌, ದೇಶದಲ್ಲಿಯೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ 19 ವರ್ಷದ ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ್ದರು. ಇದರಿಂದ ಅಂದಿನ ಆಡಳಿತಾರೂಢ 
ನರೇಂದ್ರಮೋದಿ ನೇತೃತ್ವದ ಸರ್ಕಾರ ಮುಜುಗರ ಅನುಭವಿಸಿತ್ತು. ಅದೇ ರೀತಿ ಸೋಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಅಮಿತ್‌ ಶಾ ಜೈಲು ಸೇರಿದ್ದರು. 

ನ್ಯಾ. ಪಟೇಲ್‌ ವೃತ್ತಿ ಬದುಕಿನ ಹಿನ್ನೆಲೆ 
1979ರಲ್ಲಿ ರಾಜ್‌ಕೋರ್ಟ್‌ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಆರಂಭ, 1985ರಲ್ಲಿ ಗುಜರಾತ್‌ ಹೈಕೋರ್ಟ್‌ನ ವಕೀಲರಾಗಿ ಸೇವೆ, 1990ರಲ್ಲಿ ಕೇಂದ್ರ ಸರಕಾರದ ವಕೀಲರಾಗಿ ನೇಮಕ

ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ ಸೇರಿ ಹಲವು ದೇಶಗಳ ನ್ಯಾಯಾಲಯಗಳಿಗೆ ಭೇಟಿ

2001ರಲ್ಲಿ ಗುಜರಾತ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿ ಆಗಿ ನೇಮಕ, 2004 ರಲ್ಲಿ ಕಾಯಂ ನ್ಯಾಯಮೂರ್ತಿ ಆಗಿ ಸೇವೆ 

ಈ ಅವಧಿಯಲ್ಲಿ ಇಶ್ರಾತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಪ್ರಕರಣ ಸಿಬಿಐ ತನಿಖೆಗೆ ಆದೇಶಿಸಿ ತೀರ್ಪು, ಪ್ರಕರಣದ
ವಿಚಾರಣೆ 

2015ರ ಆಗಸ್ಟ್‌ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ, 2016ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ 

Advertisement

Udayavani is now on Telegram. Click here to join our channel and stay updated with the latest news.

Next