Advertisement

ಜ್ಞಾನ ಸಂಪಾದನೆಗೆ “ಸಮುದ್ರೋಲ್ಲಂಘನ’ ಮಾಡಿದರೆ ತಪ್ಪೇನು?: ಹೈಕೋರ್ಟ್‌

12:52 AM Jan 09, 2024 | Team Udayavani |

ಬೆಂಗಳೂರು: “ಜ್ಞಾನ ಸಂಪಾದನೆ ಹಾಗೂ ಅದರ ಪ್ರಸಾರಕ್ಕೆ ವಿದೇಶ ಪ್ರಯಾಣ ಬೆಳೆಸಿದರೆ ಮತ್ತು ಸಮುದ್ರ ದಾಟಿ ಹೋದರೆ ತಪ್ಪೇನು’ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಉಡುಪಿ ಮಠದ ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳದಂತೆ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಅವರನ್ನು ತಡೆಯಬೇಕು ಎಂಬ ಮನವಿಯನ್ನು ತಳ್ಳಿ ಹಾಕಿದೆ.

Advertisement

ಅಲ್ಲದೇ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್‌, ಉಡುಪಿ ಅಷ್ಟ ಮಠದ ಪರ್ಯಾಯ ಮಹೋತ್ಸವ ಆಯೋ ಜನೆಗೆ ಮಾರ್ಗಸೂಚಿ ಅಥವಾ ಬೈಲಾ ರೂಪಿಸಲು ಸಮಿತಿ ರಚಿಸುವಂತೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.

ಈ ಬಗ್ಗೆ ಮೂಲತಃ ಕುಳಾಯಿ ಹೊಸಬೆಟ್ಟು ಗ್ರಾಮದ, ಪ್ರಸ್ತುತ ಬೆಂಗಳೂರಿನಲ್ಲಿರುವ ಗುರುರಾಜ್‌ ಜೀವನ್‌ ರಾವ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆ ಬಂದಿತ್ತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಸಮುದ್ರೋಲ್ಲಂಘನ ಮಾಡಿದವರು ಪರ್ಯಾಯ ಮಹೋ ತ್ಸವದಲ್ಲಿ ಪಾಲ್ಗೊಳ್ಳಬಾ ರದು ಎಂಬುದು ಅಷ್ಟ ಮಠಗಳ ಪರಂಪರೆ ಮತ್ತು ಸಂಪ್ರದಾಯವಾಗಿದೆ.

ಸಮುದ್ರೋಲ್ಲಂಘನೆ ಮಾಡಿದವರು ಶ್ರೀಕೃಷ್ಣನ ಮೂರ್ತಿ ಸ್ಪರ್ಶಿಸಲು ಹಾಗೂ ಪೂಜೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ಜ.8ರಿಂದ 18ರ ವರೆಗೆ ನಡೆಯಲಿರುವ ಉಡುಪಿ ಅಷ್ಟ ಮಠದ ಪರ್ಯಾಯದಲ್ಲಿ ಪುತ್ತಿಗೆ ಮಠದ ಪೀಠಾಧಿಪತಿ ಸುಗುಣೇಂದ್ರ ತೀರ್ಥರು ಪಾಲ್ಗೊಳ್ಳುವುದಕ್ಕೆ ನಿರ್ಬಂಧ ವಿಧಿಸಬೇಕು ಹಾಗೂ ಅಷ್ಟ ಮಠದ ಪರ್ಯಾಯ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈಲಾ ರೂಪಿಸಲು ಸಮಿತಿಯೊಂದನ್ನು ರಚಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.

Advertisement

ಸ್ವಲ್ಪ ಹೊತ್ತು ವಾದ ಆಲಿಸಿದ ನ್ಯಾಯಪೀಠ, ಇದು ನ್ಯಾಯಾಲಯ ಮಧ್ಯಪ್ರವೇಶ ಮಾಡುವ ವಿಷಯವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ನಾವಿಂದು 21ನೇ ಶತಮಾನದಲ್ಲಿದ್ದೇವೆ
ಅರ್ಜಿದಾರರ ಮನವಿಗೆ ಆಕ್ಷೇಪಿಸಿದ ನ್ಯಾಯಪೀಠ, ನಾವಿಂದು 21ನೇ ಶತಮಾನದಲ್ಲಿದ್ದೇವೆ. ನೀವ್ಯಾಕೆ 18ನೇ ಶತಮಾನದ ಮಾತನ್ನಾಡುತ್ತಿದ್ದೀರಿ. ಡಾ| ಬಿ.ಆರ್‌. ಅಂಬೇಡ್ಕರ್‌ ಜ್ಞಾನ ಸಂಪಾದನೆಗೆ ವಿದೇಶಕ್ಕೆ ಹೋಗಲಿಲ್ಲವೇ? ಸ್ವಾಮಿ ವಿವೇಕಾ ನಂದರು ವಿದೇಶದಲ್ಲಿ ಜ್ಞಾನದ ಪ್ರಸಾರ ಮಾಡಿದ ಪರಿ ನಮ್ಮಲ್ಲಿ ಹೆಮ್ಮೆ ತರಿಸುತ್ತಿಲ್ಲವೇ? ಸಾಮ್ರಾಟ್‌ ಅಶೋಕ್‌ ತನ್ನ ಮಕ್ಕಳನ್ನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಶ್ರೀಲಂಕಾಕ್ಕೆ ಕಳಿಸಿಲ್ಲವೇ? ಶಂಕರಾಚಾರ್ಯರು ಸಾಗರ ದಾಟಿ ಇಡೀ ದೇಶ ಸುತ್ತಾಡಿದರು. ಸಂಪ್ರದಾಯ ಅಥವಾ ಪರಂಪರೆ ಇರಬಹುದು. ಆದರೆ ತೆರೆದ ಮನಸ್ಸು ಮತ್ತು ಮುಕ್ತ ಆಲೋಚನೆಗಳೊಂದಿಗೆ ವಿದೇಶಕ್ಕೆ ಹೋಗಿ ಧಾರ್ಮಿಕ ಜ್ಞಾನ ಸಂಪಾದನೆ ಮಾಡುವುದು ಮತ್ತು ಅದನ್ನು ಪ್ರಸಾರ ಮಾಡುವುದು ತಪ್ಪಲ್ಲ. ಈ ಬಗ್ಗೆ ನಿರ್ಬಂಧ ವಿಧಿಸಲು ಅವಕಾಶ ಎಲ್ಲಿದೆ ಎಂದು ಪ್ರಶ್ನಿಸಿತು.

ಧರ್ಮ-ಶಾಸ್ತ್ರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌, ಧರ್ಮ-ಶಾಸ್ತ್ರದ ವಿಚಾರದಲ್ಲಿ ಹೀಗೆ ಮಾಡಬೇಕು, ಈ ರೀತಿ ನಡೆದುಕೊಳ್ಳಬೇಕು, ಅದನ್ನು ಮುಟ್ಟಬಾರದು, ಇದನ್ನು ಸೇವಿಸಬಾರದು ಎಂದು ನ್ಯಾಯಾಲಯ ಹೇಳಬೇಕು ಎಂಬುದು ಎಷ್ಟು ಸರಿ? ಈ ಗೊಂದಲ 2ನೇ ಬಾರಿ ಎದ್ದಿದೆ. ಯಾವುದಕ್ಕೂ ಒಂದು ಮಿತಿ ಇರುತ್ತದೆ. ಮುಕ್ತ ಮನಸ್ಸು ಮತ್ತು ಮುಕ್ತ ಆಲೋಚನೆಗಳು ಇರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹವಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ನ್ಯಾಯಮೂರ್ತಿಗಳು ಒಳ್ಳೆಯ ವಿಚಾರವನ್ನೇ ಹೇಳಿದ್ದಾರೆ. ನಾವು ಯಾವುದೇ ದೈಶ್ಚಿಕ ವಿಚಾರಕ್ಕೆ ಒಳಪಟ್ಟವರಲ್ಲ. ಆಧ್ಯಾತ್ಮಿಕ ವಿಚಾರ ಗಡಿ ದಾಟಿ ಇರಬೇಕು. ದೈಶ್ಚಿಕ ನಿರ್ಬಂಧಕ್ಕೆ ಧಾರ್ಮಿಕ ವಿಚಾರ ಒಳಗಾಗಬಾರದು. ಯಾವುದೇ ಅಡೆತಡೆ ಇರಬಾರದು, ಒಳ್ಳೆಯ ವಿಚಾರವನ್ನು ಎಲ್ಲ ಕಡೆ ಹರಡಿಸಬೇಕು. ಸದ್ವಿಚಾರಗಳು ಪ್ರಪಂಚದಲ್ಲಿ ವ್ಯಾಪ್ತವಾಗಬೇಕು. ಆಧ್ಯಾತ್ಮಿಕ ವಿಚಾರ ವಿಶ್ವವ್ಯಾಪಿ ಆಗಬೇಕು. ಧಾರ್ಮಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿರುವುದು ಒಳ್ಳೆಯ ವಿಚಾರ. ಧಾರ್ಮಿಕ ವಿಚಾರ ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು, ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಧರ್ಮ ಎನ್ನುವುದು ದೇಶಾತೀತ, ಪ್ರಪಂಚದಾದ್ಯಂತ ಹಿಂದೂಗಳಿದ್ದಾರೆ. ಶ್ರೀಕೃಷ್ಣ ದಯೆಯಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. ದೇವರು ಕೃಷ್ಣಪೂಜೆಯ ದಾರಿ ಸುಗಮ ಮಾಡಿದ್ದಾರೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶರು.

Advertisement

Udayavani is now on Telegram. Click here to join our channel and stay updated with the latest news.

Next