Advertisement

ಕರ್ತವ್ಯದಲ್ಲಿದ್ದ ವೇಳೆ ಹೃದಯಘಾತವಾಗಿ ಸಾವನ್ನಪ್ಪಿದರೆ ಅಪಘಾತವೆಂದು ಪರಿಗಣಿಸಿ : ಹೈಕೋರ್ಟ್

10:58 PM Dec 28, 2020 | sudhir |

ಬೆಂಗಳೂರು: ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ನೌಕರನಿಗೆ ಹೃದಯಘಾತವು ಸಂಭವಿಸಿದ್ದನ್ನು “ಅಪಘಾತ’ ಎಂದು ಪರಿಗಣಿಸಲಾಗದು ಎಂಬ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌, ಕರ್ತವ್ಯ ನಿರ್ವಹಣೆ ವೇಳೆ ನೌಕರ ಹೃದಯಘಾತದಿಂದ ಸಾವನ್ನಪ್ಪಿದರೆ, ಅದನ್ನು ಅಪಘಾತವೆಂದೇ ಪರಿಗಣಿಸಬೇಕು ಎಂದು ಮಹತ್ವದ ಆದೇಶ ನೀಡಿದೆ.

Advertisement

ಅಪಘಾತ ಎಂದರೆ ಊಹಿಸಲಾಗದ ಹಾಗೂ ಅನಿರೀಕ್ಷಿತ ಘಟನೆಯಾಗಿರುತ್ತದೆ. ಅದನ್ನು ನಿರೀಕ್ಷೆ ಅಥವಾ ಯೋಜಿಸಲಾಗುವುದಿಲ್ಲ. ಅಂತಹ ಸಂದರ್ಭದದಲ್ಲಿ ಕರ್ತವ್ಯ ಮೇಲಿದ್ದಾಗ ನೌಕರನಿಗೆ ಹೃದಯಘಾತ ಉಂಟಾದರೆ, ಅದು ಆತನ ಹೃದಯಕ್ಕೆ ಉಂಟಾದ ಗಾಯವಾಗಿರುತ್ತದೆ. ಹೀಗಾಗಿ, ಹೃದಯಘಾತವನ್ನು ಅಪಘಾತವೆಂದೇ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಮತ್ತು ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ಅವರಿದ್ದ ಹೈಕೋರ್ಟ್‌ ಕಲಬುರಗಿ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

ಇದನ್ನೂ ಓದಿ:ಗಂಗಾವತಿ: ನಗರಸಭೆ ಸದಸ್ಯನ‌ ಕಿಡ್ನಾಪ್ ಪ್ರಕರಣ ; ಆರೋಪಿ ಬಂಧನ 

ಎನ್‌ಇಕೆಆರ್‌ಟಿಸಿಯಲ್ಲಿ ಬಸ್‌ ಚಾಲಕರಾರಾಗಿದ್ದ ವಿಜಯ್‌ ಕುಮಾರ್‌ಗೆ, 2012ರ ಸೆ.5ರಂದು ಸಂಜೆ 4.45 ಸಮಯದಲ್ಲಿ ಕಲಬುರಗಿ ಯೂನಿರ್ವಸಿಟಿ ಆವರಣದ ಬಳಿ ಬಸ್‌ ಚಾಲನೆ ಮಾಡುತ್ತಿದ್ದ ವೇಳೆ ಹೃದಯಘಾತ ಸಂಭವಿಸಿತ್ತು. ಪರಿಣಾಮ ಆಸ್ಪತ್ರೆಗೆ ಕೊಂಡೊಯುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಇದರಿಂದ ಅವರ ಪತ್ನಿ ಮತ್ತು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಕರ್ತವ್ಯ ಮೇಲಿದ್ದಾಗ ಕಾರ್ಯದೊತ್ತಡ ಮತ್ತು ಆಯಾಸ ಉಂಟಾದ ಪರಿಣಾಮ ವಿಜಯ್‌ ಕುಮಾರ್‌ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದ್ದರು.

ವಿಚಾರಣೆ ನಡೆಸಿದ್ದ ಕಲಬುರಗಿಯ ನೌಕರರ ಪರಿಹಾರ ಆಯುಕ್ತರಾಗಿರುವ 2ನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು, ಮೃತ ನೌಕರನ ಕುಟುಂಬದವರಿಗೆ 2010ರ ಜೂ.8ರಿಂದ ಪರಿಹಾರ ವಿತರಣೆ ಮಾಡುವ ದಿನದವರೆಗೂ ಅನ್ವಯವಾಗುವಂತೆ ವಾರ್ಷಿಕ ಶೇ.12ರಷ್ಟು ಬಡ್ಡಿದರದಲ್ಲಿ ಒಟ್ಟು 21,98,090 ರು. ಪರಿಹಾರ ನೀಡುವಂತೆ ಎನ್‌ಇಕೆಆರ್‌ಟಿಸಿಗೆ 2017ರ ಏ.5ರಂದು ಆದೇಶಿಸಿತ್ತು.

Advertisement

ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಎನ್‌ಇಕೆಆರ್‌ಟಿಸಿ, ನೌಕರರ ಪರಿಹಾರ ಕಾಯ್ದೆ-1923ರ ಸೆಕ್ಷನ್‌ 3ರ ಪ್ರಕಾರ ಹೃದಯಘಾತವು “ಅಪಘಾತ ಅಥವಾ ವೈಯಕ್ತಿಕ ಗಾಯ’ದ ವ್ಯಾಪ್ತಿಗೆ ಬರುವುದಿಲ್ಲ. ಪರಿಹಾರ ಕಲ್ಪಿಸಬೇಕಾದರೆ ಚಾಲಕ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅಥವಾ ವೈಯಕ್ತಿಕವಾಗಿ ಗಾಯಗೊಂಡು ಸಾವನ್ನಪ್ಪಿರಬೇಕು. ಪ್ರಕರಣದಲ್ಲಿ ಒತ್ತಡ ಹಾಗೂ ಆಯಾಸದಿಂದ ವಿಜಯ್‌ ಕುಮಾರ್‌ಗೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ದಾಖಲೆ ಒದಗಿಸಿಲ್ಲ ಎಂದು ವಾದಿಸಿತ್ತು.

ಅಲ್ಲದೆ, ಕರ್ತವ್ಯ ನಿರ್ವಹಣೆ ವೇಳೆ ಸಾವು ಸಂಭವಿಸಿದ ಎಂಬ ಮಾತ್ರಕ್ಕೆ ಅದನ್ನು ಅಪಘಾತ ಎನ್ನಲಾಗದು. ವಿಜಯ್‌ ಕುಮಾರ್‌ದು ಸಹಜ ಸಾವು. ಅವರ ಸಾವಿಗೂ ಮತ್ತು ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ವಿಜಯ್‌ ಕುಮಾರ್‌ ಅಪಘಾತಕ್ಕೆ ಒಳಗಾಗಿಲ್ಲ. ವೈಯಕ್ತಿಕ ಗಾಯಕ್ಕೂ ತುತ್ತಾಗಿಲ್ಲ. ಹೀಗಾಗಿ ಪರಿಹಾರ ಕಲ್ಪಿಸಲಾಗದು ಎಂದು ಸಮರ್ಥಿಸಿಕೊಂಡಿತ್ತು. ಆದರೆ, ಈ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next