Advertisement

ಕರ್ತವ್ಯ ಲೋಪಕ್ಕಾಗಿ ಪೊಲೀಸ್‌ ಅಧಿಕಾರಿಗೆ ರಸ್ತೆ ಗುಡಿಸುವ ಶಿಕ್ಷೆ ವಿಧಿಸಿದ ಹೈಕೋರ್ಟ್‌

10:58 PM Dec 23, 2020 | sudhir |

ಬೆಂಗಳೂರು: ಮಹಿಳೆಯೊಬ್ಬರು ನೀಡಿದ ದೂರು ಸ್ವೀಕರಿಸಿ ಎಫ್ಐಆರ್‌ ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಹೈಕೋರ್ಟ್‌ ರಸ್ತೆ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ.

Advertisement

ಕಲಬುರಗಿಯ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ರಸ್ತೆ ಶುಚಿಗೊಳಿಸುವ ಶಿಕ್ಷೆಗೊಳಗಾದ ಪೊಲೀಸ್‌ ಅಧಿಕಾರಿ. ತನ್ನ ಕರ್ತವ್ಯ ಲೋಪಕ್ಕೆ ಬೇಷರತ್‌ ಕ್ಷಮೆ ಯಾಚಿಸಿದರೂ ಒಪ್ಪದ ನ್ಯಾಯಾಲಯ, ಒಂದು ವಾರ ಠಾಣೆಯ ಮುಂಭಾಗದ ರಸ್ತೆಯನ್ನು ಸ್ವತ್ಛಗೊಳಿಸಬೇಕು ಎಂದು ಆದೇಶಿಸಿದೆ.

ಕಲಬುರಗಿ ಜಿಲ್ಲೆ ಮಿಣಜಗಿ ತಾಂಡಾದ ತಾರಾಬಾಯಿ ಎಂಬವರು ತನ್ನ ಮಗ ಕಾಣೆಯಾಗಿದ್ದಾನೆ ಎಂದು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಸುನಿಲ್‌ದತ್‌ ಯಾದವ್‌ ಮತ್ತು ನ್ಯಾ| ಪಿ. ಕೃಷ್ಣ ಭಟ್‌ ಅವರಿದ್ದ ಕಲಬುರಗಿ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ನ್ಯಾಯಪೀಠ ಹೇಳಿದ್ದೇನು?
ಮಗ ಸುರೇಶ್‌ ಕಾಣೆಯಾಗಿರುವ ಬಗ್ಗೆ ತಾಯಿ ದೂರು ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಕರ್ತವ್ಯ ಲೋಪ. ಪೊಲೀಸರು ತಮ್ಮ ಸ್ಟೇಷನ್‌ ಹೌಸ್‌ ಡೈರಿಯಲ್ಲಿ ಪ್ರಕರಣದ ವಿವರವನ್ನು ದಾಖಲಿಸಿಲ್ಲ. ಅಲ್ಲದೆ ಎಫ್‌ಐಆರ್‌ ಕೂಡ ದಾಖಲಿಸಿಲ್ಲ. ಈ ಮೂಲಕ ಠಾಣಾಧಿಕಾರಿಯು ಅರ್ಜಿದಾರರ ಹಕ್ಕಿಗೆ ಚ್ಯುತಿ ಉಂಟು ಮಾಡಿದ್ದಾರೆ. ಹಾಗಾಗಿ ಈ ಶಿಕ್ಷೆ ವಿಧಿಸುತ್ತಿದ್ದೇವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಇಡೀ ಪ್ರಕರಣದ ಬೆಳವಣಿಗೆಗಳು, ಅರ್ಜಿದಾರಳ ಪುತ್ರನ ನಾಪತ್ತೆ, ಪೊಲೀಸ್‌ ಅಧಿಕಾರಿಗಳ ಕಾರ್ಯವೈಖರಿ ಆಘಾತಕಾರಿಯಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Advertisement

ನಿರ್ಲಕ್ಷ್ಯ ಸಾಬೀತು
ತಾರಾಬಾಯಿ ತನ್ನ ಮಗನ ನಾಪತ್ತೆ ಬಗ್ಗೆ ದೂರು ನೀಡಲು ಠಾಣೆಗೆ ಬಂದಿದ್ದರು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಿಯಮದಂತೆ ಆ ಅಧಿಕಾರಿ ಆ ಬಗ್ಗೆ ಠಾಣಾ ಡೈರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು ಮತ್ತು ಎಫ್‌ಐಆರ್‌ ದಾಖಲಿಸಬೇಕಿತ್ತು. ಆದರೆ ಆದ್ಯಾವುದನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಾರಾಬಾಯಿಯ ಪುತ್ರ ಸುರೇಶ್‌ 2020ರ ಅ. 20ರಿಂದ ನಾಪತ್ತೆಯಾಗಿದ್ದ. ದೂರನ್ನು ಪೊಲೀಸರು ಸ್ವೀಕರಿಸದ ಹಿನ್ನೆಲೆಯಲ್ಲಿ ಆಕೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೊನೆಗೆ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಸುರೇಶನನ್ನು ಪತ್ತೆಹಚ್ಚಿ ನ. 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next