Advertisement

ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನ ಯೋಜನೆ ಬಗ್ಗೆ ವಿವರಣೆ ಕೇಳಿದ ಹೈಕೋರ್ಟ್‌

07:41 PM Dec 08, 2020 | sudhir |

ಬೆಂಗಳೂರು: ಸಾಮಾಜಿಕ ಭದ್ರತೆಯಡಿ ಹಿರಿಯ ನಾಗರಿಕರಿಗೆ ನೀಡುತ್ತಿರುವ ವೃದ್ಧಾಪ್ಯ ವೇತನ ಹಾಗೂ ಪಿಂಚಣಿ ಯೋಜನೆಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುತ್ತಿರುವ ರೀತಿಯ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ ಈ ವರ್ಷದ ಜನವರಿಯಿಂದ ಪಿಂಚಣಿ ಸಿಗುತ್ತಿಲ್ಲ ಎಂದು ಆರೋಪಿಸಿ ಅಖೀಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಕೊರೊನಾ ಮಾರ್ಗಸೂಚಿಗಳ ಪ್ರಕಾರ 65 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಮನೆಯಿಂದ ಹೊರಬರಬಾರದು. ಅದರಂತೆ ಹಿರಿಯ ನಾಗರಿಕರಿಗೆ ನೀಡುವ ವೃದ್ಧಾಪ್ಯ ವೇತನವನ್ನು ಅವರ ಮನೆ ಬಾಗಿಲಿಗೆ ತಲುಪಿಸಬೇಕು. ಹೀಗಾಗಿ ಪಿಂಚಣಿಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

ಇದನ್ನೂ ಓದಿ:ನಟಿ ಮೇಘನಾ ರಾಜ್‌ ಕುಟುಂಬ ಸದಸ್ಯರಿಗೂ ಕೋವಿಡ್ ಪಾಸಿಟಿವ್

ಅಲ್ಲದೇ, ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನೀಡುವ ಸಂಬಂಧ ಇರುವ ಯೋಜನೆಗಳು ಯಾವುವು, ಅವುಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ವಿವರಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ತಾಕೀತು ಮಾಡಿದೆ.

Advertisement

2020ರ ಜನವರಿ ತಿಂಗಳಿಂದ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ ಅಥವಾ ಪಿಂಚಣಿಯನ್ನು ನಿಗದಿತ ಅವಧಿಯಲ್ಲಿ ನೀಡುತ್ತಿಲ್ಲ. ಆದ್ದರಿಂದ ಕಳೆದ ಜನವರಿಯಿಂದ ಬಾಕಿ ಉಳಿದಿರುವ ವೃದ್ಧಾಪ್ಯ ವೇತನವನ್ನು ತಕ್ಷಣವೇ ನೀಡುವಂತೆ ಸರ್ಕಾರ ಹಾಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ನಿರ್ದೇಶನಾಲಯಕ್ಕೆ ನಿರ್ದೇಶಿಸಬೇಕು. ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next