ಬೆಂಗಳೂರು: ರಸ್ತೆ ಅಪಘಾತದಲ್ಲಿ ಮರ್ಮಾಂಗ ಶಾಶ್ವತವಾಗಿ ಊನಗೊಂಡು ಲೈಂಗಿಕ ಸುಖ ಅನುಭವಿಸುವ ಸಾಮರ್ಥ್ಯ ಕಳೆದುಕೊಂಡ ಯುವಕನಿಗೆ 17.68 ಲಕ್ಷ ರೂ. ಪರಿಹಾರ ನೀಡಲು ವಿಮಾ ಕಂಪೆನಿಗೆ ಹೈಕೋರ್ಟ್ ಆದೇಶಿಸಿದೆ.
ಈ ವಿಚಾರವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಸವರಾಜು ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ. ಪಂಡಿತ್ ಹಾಗೂ ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. 11 ವರ್ಷದ ಹಿಂದೆ ಬಸವರಾಜ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು.
ಪ್ರಕರಣದಲ್ಲಿ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ 50 ಸಾವಿರ ರೂ. ಪರಿಹಾರ ನಿಗದಿಪಡಿಸಿ, ಎಲ್ಲಾ ಸೇರಿ 3.73 ಲಕ್ಷ ರೂ. ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರ ಯುವಕ 11.75 ಲಕ್ಷ ರೂ. ಪರಿಹಾರ ಕೇಳಿದ್ದರೂ, ಹೈಕೋರ್ಟ್ ಪರಿಹಾರ ಮೊತ್ತವನ್ನು 17.68 ಲಕ್ಷ ರೂ.ಗೆ ಹೆಚ್ಚಿಸಿ, ಅದನ್ನು ಪಾವತಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿದೆ.
ಅರ್ಜಿದಾರ ಯುವಕನಿಗೆ ಆಗಿರುವ ವೈಕಲ್ಯದಿಂದಾಗಿ ಆತನಿಗೆ ಮದುವೆಯಾಗುವ ಸಂಭವನೀಯತೆ ಇಲ್ಲವಾಗಿದ್ದು, ವೈವಾಹಿಕ ಸುಖದಿಂದ ಆತ ವಂಚಿತನಾಗುತ್ತಿ¨ªಾನೆ. ಆತನಿಗೆ ಆಗುವ ನಷ್ಟವನ್ನು ಆರ್ಥಿಕ ರೂಪದಲ್ಲಿ ಸರಿಪಡಿಸಲು ಸಾಧ್ಯವೇ ಇಲ್ಲ. ಅದೇ ರೀತಿ ಆತ ತನ್ನ ಜೀವನವಿಡೀ ಅನುಭವಿಸಲಿರುವ ಮಾನಸಿಕ ಯಾತನೆಗೆ ಬೆಲೆ ಕಟ್ಟಲಾಗದು. ಆತ ಜೀವನವಿಡಿ ಒಬ್ಬಂಟಿಯಾಗಿ ಜೀವನ ನಡೆಸಬೇಕಿದೆ. ಹಾಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತಿದೆ” ಎಂದು ಹೇಳಿರುವ ನ್ಯಾಯಾಲಯ, ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರ ನಿಗದಿಪಡಿಸುವಾಗ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ “ಮಾನವೀಯತೆ’ಯನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : ದಿವಾಳಿಯಾಗುತ್ತಿದೆ ಪಾಕಿಸ್ತಾನ; ರಸ್ತೆ ಅಡವಿಟ್ಟು ಸಾಲ ಪಡೆದ ಪಾಕ್!
2011ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಸವರಾಜುಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನ ಮರ್ಮಾಂಗಕ್ಕೂ ತೀವ್ರ ಪೆಟ್ಟಾಗಿತ್ತು. ಆತನ ಮರ್ಮಾಂಗ ಕಾಯಂ ವೈಕಲ್ಯಕ್ಕೆ ಒಳಗಾಗಿರುವುದರಿಂದ ಆತ ಲೈಂಗಿಕ ಜೀವನ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ಪ್ರಮಾಣಪತ್ರ ನೀಡಿದ್ದರು.