Advertisement

ರಾಜ್‌ಕೋಟ್‌ನಲ್ಲಿ ದರ್ಬಾರು ನಡೆಸೀತೇ ಕರ್ನಾಟಕ?

11:34 PM Jan 10, 2020 | Sriram |

ರಾಜ್‌ಕೋಟ್‌: ಬಲಿಷ್ಠ ಮುಂಬಯಿ ತಂಡದ ಹೆಡೆಮುರಿ ಕಟ್ಟಿದ ಬಳಿಕ ಕರ್ನಾಟಕ ಪಡೆ ರಣಜಿ ಕ್ರಿಕೆಟ್‌ ಲೀಗ್‌ ಎಲೈಟ್‌ “ಬಿ’ ಗುಂಪಿನ ಪಂದ್ಯದಲ್ಲಿ ಶನಿವಾರದಿಂದ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

Advertisement

ರಾಜ್‌ಕೋಟ್‌ನ “ಮಾಧವ ರಾವ್‌ ಸಿಂಧಿಯಾ ಕ್ರೀಡಾಂಗಣ’ದಲ್ಲಿ ನಡೆಯಲಿರುವ ಈ ಮುಖಾಮುಖೀ ಜೈದೇವ್‌ ಉನಾದ್ಕತ್‌ ನಾಯಕತ್ವದ ಸೌರಾಷ್ಟ್ರ ಪಾಲಿಗೆ ತವರಿನ ಪಂದ್ಯವಾಗಿದೆ.

ಇತ್ತ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕರ್ನಾಟಕ ತಂಡವನ್ನು ಮೊದಲ ಸಲ ಶ್ರೇಯಸ್‌ ಗೋಪಾಲ್‌ ಮುನ್ನಡೆಸುತ್ತಿದ್ದಾರೆ. ನಾಯಕ ಕರುಣ್‌ ನಾಯರ್‌ ಮದುವೆ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ ಟೀಮ್‌ ಇಂಡಿಯಾದಲ್ಲಿದ್ದಾರೆ.

ಸಂಘಟಿತ ಹೋರಾಟ ಅಗತ್ಯ
ಮುಂಬಯಿಯನ್ನು ಅವರದೇ ಅಂಗಳದಲ್ಲಿ ಬಗ್ಗುಬಡಿದ ಬಳಿಕ ಕರ್ನಾಟಕ ತಂಡದಲ್ಲಿ ಹೊಸ ಹುರುಪು ಮೂಡಿದೆ. ಇದಕ್ಕೂ ಮೊದಲು ತಮಿಳುನಾಡನ್ನು ಮಣಿಸಿದ ರಾಜ್ಯ ತಂಡ, ಅನಂತರ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಡ್ರಾ ಸಾಧಿಸಿತ್ತು. ವಿಶೇಷವೆಂದರೆ, ಡ್ರಾಗೊಂಡ ಪಂದ್ಯಗಳೆರಡೂ ತವರಲ್ಲೇ ನಡೆದಿದ್ದವು. ಗೆಲುವುಗಳೆರಡೂ ಕರ್ನಾಟಕದಾಚೆ ಒಲಿದಿದ್ದವು. ದಿಂಡಿಗಲ್‌ನಲ್ಲಿ ಆತಿಥೇಯ ತಮಿಳುನಾಡನ್ನು 26 ರನ್‌ ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು.

ರಾಜ್ಯ ತಂಡದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಅಭಿಷೇಕ್‌ ರೆಡ್ಡಿ ಅವರನ್ನು ಕೈಬಿಡಲಾಗಿದೆ. ಫಿಟ್‌ನೆಸ್‌ನಲ್ಲಿ ಉತ್ತೀರ್ಣರಾದ ಕೆ.ವಿ. ಸಿದ್ಧಾರ್ಥ್, ಪವನ್‌ ದೇಶಪಾಂಡೆ ತಂಡಕ್ಕೆ ಮರಳಿದ್ದಾರೆ. ಖಾಯಂ ನಾಯಕ ಮನೀಷ್‌ ಪಾಂಡೆ ಭಾರತ ತಂಡದ ಪರ ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಡುತ್ತಿರುವುದರಿಂದ ಲಭ್ಯರಿರುವುದಿಲ್ಲ. ಕಳೆದ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಬದಲು ಸ್ಥಾನ ಪಡೆದಿದ್ದ ಆರ್‌. ಸಮರ್ಥ್ ಉತ್ತಮ ಫಾರ್ಮ್ ಪ್ರದರ್ಶಿಸಿರುವುದು ಕರ್ನಾಟಕ ಪಾಲಿಗೆ ಸಮಾಧಾನಕರ ಸಂಗತಿ.

Advertisement

ಬೌಲಿಂಗ್‌ನಲ್ಲಿ ಮಿಥುನ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಕೌಶಿಕ್‌ ಕರ್ನಾಟಕದ ಆಧಾರಸ್ತಂಭವಾಗಿದ್ದಾರೆ.

ಸೌರಾಷ್ಟ್ರ ತವರಲ್ಲಿ ಪ್ರಬಲ
ಸೌರಾಷ್ಟ್ರ ಮೂರರಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಉತ್ತರ ಪ್ರದೇಶ ವಿರುದ್ಧ ಸೋತಿದೆ. ಸೌರಾಷ್ಟ್ರ ಪರ ಹಾರ್ವಿಕ್‌ ದೇಸಾಯಿ, ಚೇತೇಶ್ವರ ಪೂಜಾರ, ಶೆಲ್ಡನ್‌ ಜಾಕ್ಸನ್‌ರಂತಹ ದಿಗ್ಗಜ ಬ್ಯಾಟ್ಸ್‌ಮನ್‌ ಇದ್ದಾರೆ. ಜೈದೇವ್‌ ಉನಾದ್ಕತ್‌, ಧರ್ಮೇಂದ್ರ ಸಿನ್ಹ ಜಡೇಜ, ಕಮಲೇಶ್‌ ಮಕ್ವಾನ ಘಾತಕ ದಾಳಿ ಸಂಘಟಿಸಬಲ್ಲ ಬೌಲರ್‌ಗಳಿದ್ದಾರೆ. ಸೌರಾಷ್ಟ್ರ ತವರಿನಲ್ಲೇ ಆಡುವುದರಿಂದ ಕರ್ನಾಟಕ ತೀವ್ರ ಎಚ್ಚರಿಕೆಯಿಂದ ಹೋರಾಟ ಸಂಘಟಿಸಬೇಕಾದುದು ಅಗತ್ಯ.

2018-19ರ ಸಾಲಿನಲ್ಲಿ ಬೆಂಗಳೂರಿನಲ್ಲೇ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ 5 ವಿಕೆಟ್‌ಗಳಿಂದ ಸೌರಾಷ್ಟ್ರಕ್ಕೆ ಶರಣಾಗಿತ್ತು. ಇದಕ್ಕೆ ಅವರದೇ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಕರ್ನಾಟಕಕ್ಕೆ ಎದುರಾಗಿದೆ.

ತಂಡಗಳು
ಕರ್ನಾಟಕ: ಶ್ರೇಯಸ್‌ ಗೋಪಾಲ್‌ (ನಾಯಕ), ದೇವದತ್ತ ಪಡಿಕ್ಕಲ್‌, ಡಿ. ನಿಶ್ಚಲ್‌, ಆರ್‌. ಸಮರ್ಥ್, ಕೆ.ವಿ. ಸಿದ್ಧಾರ್ಥ್, ಬಿ.ಆರ್‌. ಶರತ್‌, ರೋಹನ್‌ ಕದಮ್‌, ಪವನ್‌ ದೇಶಪಾಂಡೆ, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಎಸ್‌. ಶರತ್‌, ಪ್ರವೀಣ್‌ ದುಬೆ.
ಸೌರಾಷ್ಟ್ರ: ಜೈದೇವ್‌ ಉನಾದ್ಕತ್‌ (ನಾಯಕ), ಹಾರ್ವಿಕ್‌ ದೇಸಾಯಿ, ಸ್ನೆಲ್‌ ಪಟೇಲ್‌, ಚೇತೇಶ್ವರ್‌ ಪೂಜಾರ, ಶೆಲ್ಡನ್‌ ಜಾಕ್ಸನ್‌, ಸಮರ್ಥ್ ವ್ಯಾಸ್‌, ಪ್ರತೀಕ್‌ ಮಂಕಡ್‌, ಧರ್ಮೇಂದ್ರ ಸಿನ್ಹ ಜಡೇಜ, ಪಾರ್ಥ್ ಭೂತ್‌, ಜಯ್‌ ಚೌಹಾಣ್‌, ಕಮಲೇಶ್‌ ಮಕ್ವಾನ.

ಸೊರಗಿದ ಮುಂಬಯಿಗೆ ತಮಿಳುನಾಡು ಸವಾಲು
ಚೆನ್ನೈ: ಸತತ 2 ಸೋಲುಂಡ ಆಘಾತದಲ್ಲಿರುವ ರಣಜಿ ಕಿಂಗ್‌ ಮುಂಬಯಿ ಚೆನ್ನೈಯಲ್ಲಿ ಆತಿಥೇಯ ತಮಿಳುನಾಡಿನ ಸವಾಲನ್ನು ಎದುರಿಸಲಿದೆ. ಆರ್‌. ಅಶ್ವಿ‌ನ್‌, ದಿನೇಶ್‌ ಕಾರ್ತಿಕ್‌ ಅವರನ್ನೊಳಗೊಂಡ ಪೂರ್ಣ ಸಾಮರ್ಥ್ಯದ ತಮಿಳುನಾಡು ತಂಡವನ್ನು ಎದುರಿಸುವುದು ಮುಂಬಯಿಗೆ ಸುಲಭವಲ್ಲ ಎಂದೇ ಭಾವಿಸಲಾಗಿದೆ.

ನಾಯಕ ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಅನೇಕ ತಾರಾ ಆಟಗಾರರ ಸೇವೆಯಿಂದ ಮುಂಬಯಿ ವಂಚಿತವಾಗಿದೆ. ಯಾದವ್‌ ನ್ಯೂಜಿಲ್ಯಾಂಡ್‌ ಪ್ರವಾಸ ಕ್ಕಾಗಿ ಭಾರತ “ಎ’ ತಂಡವನ್ನು ಸೇರಿಕೊಂಡಿದ್ದಾರೆ. ಆರಂಭಕಾರ ಪೃಥ್ವಿ ಶಾ ಗಾಯಾಳಾಗಿದ್ದಾರೆ. ಶಾದೂìಲ್‌ ಠಾಕೂರ್‌, ಶಿವಂ ದುಬೆ, ಶ್ರೇಯಸ್‌ ಅವರೆಲ್ಲ ಭಾರತದ ಟಿ20 ತಂಡದಲ್ಲಿದ್ದಾರೆ. ಹೀಗಾಗಿ ಆದಿತ್ಯ ತಾರೆ ನಾಯಕತ್ವದ ಮುಂಬಯಿ “ಎಂ.ಎ. ಚಿದಂಬರಂ ಸ್ಟೇಡಿಯಂ’ನ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ನಿಜವಾದ ಅಗ್ನಿಪರೀಕ್ಷೆ ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next