Advertisement
ಮೂಡಬಿದಿರೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಸಿಡಿಲಿಗೆ ತಲಾ ಒಬ್ಬರು ಬಲಿಯಾಗಿದ್ದರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನೆರೆಗೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ರಾಜಧಾನಿ ಬೆಂಗಳೂರು, ಮಡಿಕೇರಿ, ದಾವಣಗೆರೆ, ಮೂಡುಬಿದಿರೆ, ಸುಳ್ಯ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲಿಯೇ ಅಧಿಕ, 12 ಸೆಂ.ಮೀ.ಗಳಷ್ಟು ಮಳೆ ಸುರಿಯಿತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 42.9 ಡಿ.ಸೆ.ತಾಪಮಾನ ದಾಖಲಾಯಿತು.
ದಾವಣಗೆರೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಚನ್ನಗಿರಿ ತಾಲೂಕು ಲಕೀÒ$¾ಸಾಗರ ಗ್ರಾಮದಲ್ಲಿ ಚೆಕ್‌ಡ್ಯಾಂ ನೀರಲ್ಲಿ ಬಸಪ್ಪ (65) ಎಂಬುವರು ಕೊಚ್ಚಿಹೋಗಿದ್ದಾರೆ. ಗ್ರಾಮದ ಹೊರವಲಯದ ಹಿರೇಹಳ್ಳಕ್ಕೆ ಅಡ್ಡಲಾಗಿ ಚೆಕ್‌ಡ್ಯಾಂ ಕಟ್ಟಲಾಗಿದೆ. ಶುಕ್ರವಾರ ಮಧ್ಯಾಹ್ನ 3.30ರ ವೇಳೆಗೆ ಬಸಪ್ಪ, ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದರು. ಚೆಕ್‌ಡ್ಯಾಂ ಮೇಲೆ ಬರುತ್ತಿರುವಾಗ ಏಕಾಏಕಿ ನೀರಿನ ಹರಿವು ಪ್ರಮಾಣ ಹೆಚ್ಚಾಗಿ, ನೀರಿನಲ್ಲಿ ಕೊಚ್ಚಿಹೋದರು. ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
Related Articles
ಮಂಡ್ಯ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಕಿಕ್ಕೇರಿ ಸಮೀಪದ ಮಾರ್ಗೋನಹಳ್ಳಿ ಗ್ರಾಮದಲ್ಲಿ ಮಣ್ಣಿನ ಗೋಡೆ ಬಿದ್ದು ತಿಮ್ಮೇಗೌಡ ಎಂಬುವರ ಹಸುವೊಂದು ಸಾವಿಗೀಡಾಗಿದೆ. ಕುದೂರು ಸುತ್ತಮುತ್ತ ಬಿರುಗಾಳಿ ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಳೆದ ನಾಲ್ಕೈದು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ಒಂಟಿಕೊಪ್ಪಲಿನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದು, ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಲವೆಡೆ ಬಿರುಗಾಳಿ ಮಳೆಗೆ ತೆಂಗು, ಅಡಿಕೆ, ಬಾಳೆ ಗಿಡಗಳು ನೆಲಕಚ್ಚಿದ್ದು, ಸಾಕಷ್ಟು ನಷ್ಟ ಉಂಟಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಮಳೆಗೆ ದೊಡ್ಡಲಿಂಗಯ್ಯ ಎಂಬುವರ ಮನೆಯ ಮೇಲ್ಛಾವಣಿ ಕುಸಿದಿದ್ದು, ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂರು ದಶಕಗಳಿಂದ ತುಂಬದಿದ್ದ ಚಾಮರಾಜನಗರದ ಐತಿಹಾಸಿಕ ದೊಡ್ಡ ಅರಸನ ಕೊಳ ಮಳೆಯಿಂದಾಗಿ ಅರ್ಧ ಭರ್ತಿಯಾಗಿದೆ.
Advertisement
ಶ್ರೀರಂಗಪಟ್ಟಣ ತಾಲೂಕಿನ ಕೆಲವೆಡೆ ಬಿರುಗಾಳಿ ಮಳೆಗೆ ಮನೆಗಳು ಭಾಗಶ: ಹಾನಿಗೀಡಾಗಿವೆ. ಇದೇ ವೇಳೆ, ಕುಣಿಗಲ್, ತುರುವೆಕೆರೆ, ಬೀದರ್, ಔರಾದ್, ಹಟ್ಟಿ ಚಿನ್ನದ ಗಣಿ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
ಇನ್ನೆರಡು ದಿನ ಮಳೆ:ಇನ್ನೆರಡು ದಿನ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ. ನೆಲಕ್ಕುರುಳಿದ 51 ಅಡಿ ಎತ್ತರದ ರೇಣುಕಾಚಾರ್ಯರ ಪ್ರತಿಮೆ
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಸುಕ್ಷೇತ್ರ ರೇವಗ್ಗಿ ಜಗದ್ಗುರು ರೇವಣಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಶನಿವಾರ ಸಂಜೆ ಬಿರುಗಾಳಿ, ಮಳೆಗೆ ಸಿಲುಕಿ ನೆಲಕ್ಕುರುಳಿದೆ. 2017ರ ಮಾ.10ರಂದು ಇದನ್ನು ಪ್ರತಿಷ್ಠಾಪಿಸಲಾಗಿತ್ತು. ಜೊತೆಗೆ, ದೇವಸ್ಥಾನದ ಕಾಂಪೌಡ್, ವಿದ್ಯುತ್ ಕಂಬಗಳು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.