Advertisement

Karnataka ಉಷ್ಣ ಅಲೆ: ರಾಜ್ಯದ ಆರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

12:39 AM May 02, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ತಾಪಮಾನದ ತೀವ್ರತೆಯ ಬೇಗೆಗೆ ಜನ ಸಾಮಾನ್ಯರು ಕಂಗೆಟ್ಟಿದ್ದು, 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಹಾಗೂ 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.

Advertisement

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ನೆಲೆಸಿರುವ ಎಲ್ಲ ವಯೋಮಾನದವರೂ ಶಾಖದ ಕಾಯಿಲೆಗಳು, ಶಾಖದ ಹೊಡೆತದ ಬಗ್ಗೆ ತೀವ್ರ ನಿಗಾ ಇಡುವಂತೆ ಇಲಾಖೆ ಸೂಚಿಸಿದೆ. ದುರ್ಬಲ ಜನರಿಗೆ ತೀವ್ರ ಕಾಳಜಿಯ ಅಗತ್ಯವಿದೆ. ಕಲಬುರಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಯಾದಗಿರಿ, ಬಳ್ಳಾರಿ, ವಿಜಯ ಪುರ, ರಾಯಚೂರು, ದಾವಣಗೆರೆ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ದೀರ್ಘಾವಧಿ ವರೆಗೆ ಸೂರ್ಯ ನಿಗೆ ಒಡ್ಡಿಕೊಳ್ಳುವ ಅಥವಾ ಕಷ್ಟಕರವಾದ ಕೆಲಸ ಮಾಡುವವರಲ್ಲಿ ಹೆಚ್ಚಿನ ತಾಪಮಾನ, ಶಾಖದ ಕಾಯಿಲೆಯ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ.ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿ ಸ್ಥಿತಿ ಏರ್ಪಡಲಿದೆ.

ಎಲ್ಲೆಲ್ಲಿ
ಎಷ್ಟೆಷ್ಟು ತಾಪಮಾನ?
ಬೆಳಗಾವಿ 36, ಬಾಗಲಕೋಟೆ 40.7, ಧಾರವಾಡ 38.8, ಗದಗ 39.2, ಹಾವೇರಿ 38.9, ಕೊಪ್ಪಳ 42.1, ರಾಯಚೂರಿನಲ್ಲಿ 43.6, ಕಲಬುರಗಿ 43.3, ವಿಜಯಪುರ 41, ಬೆಂಗಳೂರು ಕೆಐಎಎಲ್‌ನಲ್ಲಿ 39.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ.

ಏನಿದು ರೆಡ್‌ ಅಲರ್ಟ್‌ ?
ರಾಜ್ಯದ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬೇಸಗೆಯಲ್ಲಿ ದಾಖಲಾಗುವ ಸಾಮಾನ್ಯ ತಾಪಮಾನದಲ್ಲಿ ಮಿತಿಗಿಂತ ಭಾರೀ ಹೆಚ್ಚಿನ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾದರೆ, ಅಂತಹ ಪ್ರದೇಶಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗುತ್ತದೆ. ಆಯಾ ಪ್ರದೇಶಗಳ ಹವಾಮಾನಕ್ಕೆ ಅನುಗುಣವಾಗಿ ಇಲಾಖೆಯು ರೆಡ್‌ ಅಲರ್ಟ್‌ ಘೋಷಿಸುತ್ತದೆ. ಇಂತಹ ಪ್ರದೇಶಗಳಲ್ಲಿ ಜನ ಸಾಮಾನ್ಯರು ತಾಪಮಾನದಿಂದ ಬರುವ ಕಾಯಿಲೆಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಸಾಕಷ್ಟು ನೀರು ಸೇವಿಸುವುದು ಎಂಬಿತ್ಯಾದಿ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ.

ಇನ್ನು ಆರೆಂಜ್‌ ಅಲರ್ಟ್‌ ಎಂಬುದು ರೆಡ್‌ ಅಲರ್ಟ್‌ಗಿಂತ ಬಳಿಕದ ಸ್ಥಾನದಲ್ಲಿ ಇರಲಿದೆ. ಆರೆಂಜ್‌ ಅಲರ್ಟ್‌ ಇರುವ ಜಿಲ್ಲೆಗಳಲ್ಲೂ ಜನ ತಾಪಮಾನದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ತಾಪಮಾನವು ಸಾಮಾನ್ಯಕ್ಕಿಂತ ಕೊಂಚ ಏರಿಕೆಯಾಗಿದ್ದರೆ ಹಳದಿ ಅಲರ್ಟ್‌ ಘೋಷಿಸಲಾಗುತ್ತದೆ.

Advertisement

ಮೇ 6-7: ಮಳೆ ಸಾಧ್ಯತೆ
ಮೇ 6 ಹಾಗೂ 7ರಂದು ಚಿಕ್ಕಮಗಳೂರು ಮತ್ತು ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮ ರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಮೇ 6ರ ಬಳಿಕ ಮೋಡ ಉಂಟಾಗಿ ಕೆಲವೆಡೆ ಮಳೆ ಯಾಗುವ ಸಾಧ್ಯತೆ ಕಂಡು ಬಂದಿದೆ. ಎಲ್‌ನಿನೋ ಪ್ರಭಾವದಿಂದ ಮಳೆ ಕಡಿಮೆಯಾಗಿ ರಾಜ್ಯದಲ್ಲಿ ತಾಪಮಾನ ಮಿತಿಗಿಂತ ಹೆಚ್ಚಿದೆ.
-ಸಿ.ಎಸ್‌.ಪಾಟೀಲ್‌, ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next