ಬೆಂಗಳೂರು: ಎನ್‌ಡಿಎ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಮೂಲತಃ ನೆರೆಯ ಆಂಧ್ರಪ್ರದೇಶದವರಾದರೂ ರಾಷ್ಟ್ರ ರಾಜಕಾರಣದಲ್ಲಿ ಅವರಿಗೆ ಅವಕಾಶಗಳ ವೇದಿಕೆ ಸೃಷ್ಟಿಸಿದ್ದು ಕರ್ನಾಟಕ. ತಮ್ಮ ವಾಕ್ಚಾತುರ್ಯದಿಂದ ಬಿಜೆಪಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದರೂ ಅವರನ್ನು ರಾಜಕೀಯವಾಗಿ ಸಂಸತ್ತಿಗೆ ಕಳುಹಿಸಿಕೊಡುವ ಮೂಲಕ ಕರ್ನಾಟಕ ಅವರನ್ನು ರಾಷ್ಟ್ರ ನಾಯಕನಾಗಿ ಮಾಡುವಲ್ಲಿ ಮುಂಚೂಣಿಯಲ್ಲಿ ನಿಂತಿತ್ತು.
1998ರಲ್ಲಿ ಮೊದಲ ಬಾರಿಗೆ ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶಿಸಿದ ಅವರು, 1999ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ
ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದರು. ನಂತರದಲ್ಲಿ 2004 ಮತ್ತು 2010ರಲ್ಲೂ ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಿದರು. ಒಂದು ಬಾರಿ ಬಿಜೆಪಿ ರಾಜ್ಯ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
2014ರಲ್ಲಿ ವೆಂಕಯ್ಯ ನಾಯ್ಡು ನಾಲ್ಕನೇ ಬಾರಿ ಕರ್ನಾಟಕದಿಂದಲೇ ರಾಜ್ಯಸಭೆ ಪ್ರವೇಶಿಸಲು ಬಯಸಿದ್ದರಾದರೂ ಅದಕ್ಕೆ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದ್ದರಿಂದ ಕರ್ನಾಟಕದಿಂದ ರಾಜಸ್ಥಾನಕ್ಕೆ ವಲಸೆ ಹೋದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ ನಮ್ಮ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಆಗಾಗೆ ಸಭೆಗಳನ್ನು ನಡೆಸುತ್ತಾ ಯೋಜನೆ ತ್ವರಿತಗೊಳಿಸಲು ಪ್ರಯತ್ನಿಸಿದರು. ಆ ಮೂಲಕ ತಾವು ನಾಲ್ಕನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಲು ಕರ್ನಾಟಕದವರು ವಿರೋಧ ವ್ಯಕ್ತಪಡಿಸಿದರೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದರು.
ಇತ್ತೀಚೆಗೆ ರಾಜ್ಯಸರ್ಕಾರ ರೈತರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ “ಸಾಲ ಮನ್ನಾ ಒಂದು ಫ್ಯಾಷನ್ ‘ ಎನ್ನುವ ಮೂಲಕ ವಿವಾದಕ್ಕೆ ಕಾರಣವಾದರು. ಅಲ್ಲದೆ, ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಹೋರಾಟಗಳು ನಡೆದಾಗ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡು ರಾಜ್ಯಾದ್ಯಂತ ಆಕ್ರೋಶವನ್ನೂ ಎದುರಿಸಬೇಕಾಯಿತು.