Advertisement
ವಿಧಾನಸಭೆ ಚುನಾವಣೆಯಲ್ಲಿ 224ರಲ್ಲಿ 104 ಸ್ಥಾನ ಗೆದ್ದಿದ್ದ ಬಿಜೆಪಿ ಇದೀಗ ಲೋಕಸಭೆಯ 28 ಕ್ಷೇತ್ರದಲ್ಲಿ 25 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಪ್ರಾಬಲ್ಯ ಮೆರೆದಿದೆ. ಜತೆಗೆ ಎರಡು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಒಂದು ಕ್ಷೇತ್ರ ಗೆದ್ದು ಸಂಖ್ಯಾಬಲವನ್ನು ಬಿಜೆಪಿ 105ಕ್ಕೆ ಹೆಚ್ಚಿಸಿಕೊಂಡಿದೆ. ಪಕ್ಷದ ಗೆಲವು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ.
Related Articles
Advertisement
ಕರಾವಳಿ ಮತ್ತು ಮಲೆನಾಡು ಭಾಗದ ನಾಲ್ಕು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅನಂತ ಕುಮಾರ್ ಹೆಗಡೆ 6ನೇ ಬಾರಿಗೆ ಜಯ ಸಾಧಿಸಿದ್ದರೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಹಾಗೂ ಶಿವಮೊಗ್ಗ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಎರಡನೇ ಬಾರಿಗೆ ಜಯ ಸಾಧಿಸಿದ್ದಾರೆ.
ಬಿಜೆಪಿಯ ಜಿ.ಎಸ್.ಬಸವರಾಜ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಡಾ.ಉಮೇಶ್ ಯಾದವ್, ಖರ್ಗೆಯವರ ಗೆಲುವಿನ ನಾಗಾಲೋಟಕ್ಕೆ ತಡೆ ಹಾಕಿದ್ದಾರೆ. ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿಯವರು ನಾಲ್ಕನೇ ಭಾರಿಯೂ ಜಯ ತಮ್ಮದಾಗಿಸಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎದುರು ಅಣ್ಣಾಸಾಹೇಬ್ ಜೊಲ್ಲೆ ಜಯ ಸಾಧಿಸಿಕೊಂಡಿದ್ದಾರೆ. ಬೆಳಗಾವಿಯ ಬಿಜೆಪಿ ಸಂಸದ ಸುರೇಶ್ ಅಂಗಡಿ ಮತ್ತೂಮ್ಮೆ ಜಯಭೇರಿ ಬಾರಿಸಿದ್ದಾರೆ. ಬಾಗಲಕೋಟೆಯಲ್ಲಿ ಗದ್ದಿಗೌಡರು ಗೆದ್ದರೆ, ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ 6ನೇ ಬಾರಿಯೂ ಜಯ ಸಾಧಿಸಿದ್ದಾರೆ. ರಾಯಚೂರಿನಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಬಿ.ವಿ.ನಾಯಕ್ ವಿರುದ್ಧ ರಾಜ ಅಮರೇಶ್ ನಾಯಕ್ ಗೆದ್ದರೆ, ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಹಾಲಿ ಸಂಸದ ಭಗವಂತ ಖೂಬಾ ಮತ್ತೇ ಕಮಾಲ್ ಆಗಿದ್ದಾರೆ.
ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ, ಬಳ್ಳಾರಿಯಲ್ಲಿ ಹೊಸ ಮುಖ ವೈ.ದೇವೇಂದ್ರಪ್ಪ ಜಯ ಸಾಧಿಸಿದರೆ, ಶಿವಕುಮಾರ್ ಉದಾಸಿ ಹಾವೇರಿಯಿಂದ ಮೂರನೇ ಬಾರಿಗೆ ಸಂಸತ್‌ಗೆ ಆಯ್ಕೆಆಗಿದ್ದಾರೆ. ದಾವಣಗೆಯಿಂದ ಜಿ.ಎಂ.ಸಿದ್ದೇಶ್ವರ್ ನಾಲ್ಕನೇ ಬಾರಿಯೂ ಗೆಲುವು ತಮ್ಮದಾಗಿಸಿ ಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಹಾಲಿ ಸಂಸದ ಬಿ.ಎನ್. ಚಂದ್ರಪ್ಪ ಅವರನ್ನು ಸೋಲಿಸುವಲ್ಲಿ ಎ.ನಾರಾಯಣ ಸ್ವಾಮಿ ಯಶಸ್ವಿಯಾಗಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಉತ್ತರದ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. 28 ವರ್ಷದ ತೇಜಸ್ವಿ ಸೂರ್ಯ ಯುವ ಸಂಸದನಾಗಿ ಸಂಸತ್ ಪ್ರವೇಶ ಮಾಡಲಿದ್ದಾರೆ. ಬೆಂಗಳೂರು ಕೇಂದ್ರವನ್ನು ಮೂರನೇ ಬಾರಿಯೂ ಪಿ.ಸಿ.ಮೋಹನ್ ಬಿಟ್ಟುಕೊಟ್ಟಿಲ್ಲ. ಮೂರನೇ ಬಾರಿಗೂ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ವಿರುದ್ಧ ಬಿ.ಎನ್.ಬಚ್ಚೇಗೌಡ ಅವರು ವಿಜಯ ಮಾಲೆ ಹಾಕಿಕೊಂಡಿದ್ದಾರೆ. ಕೋಲಾರದಲ್ಲಿ ಮಾಜಿ ಕೇಂದ್ರ ಸಚಿವ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅವರ ಗೆಲುವಿನ ನಾಗಾಲೋಟಕ್ಕೆ ಬಿಬಿಎಂಪಿ ಕಾರ್ಪೊàರೇಟರ್ ಆಗಿದ್ದ ಮುನಿಸ್ವಾಮಿ ಕಡಿವಾಣ ಹಾಕಿದ್ದಾರೆ. ಚಾಮರಾಜನಗರದಲ್ಲಿ ಹಾಲಿ ಸಂಸದ ಧ್ರುವನಾರಾಯಣ ಅವರ ವಿರುದ್ಧ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಜಯ ಸಾಧಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜಯ ಸಾಧಿಸಿರುವುದು ಆ ಭಾಗದಲ್ಲಿ ಬಿಜೆಪಿಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ.
* ರಾಜು ಖಾರ್ವಿ ಕೊಡೇರಿ